ಸುಬ್ರಹ್ಮಣ್ಯ : ಪರಿಚಿತ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಸುಬ್ರಹ್ಮಣ್ಯದಲ್ಲಿ ಭೇಟಿಯಾಗಲು ಬಂದ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಇಬ್ಬರನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ. ರಾಧಾಕೃಷ್ಣ (45), ವಿಶ್ವಾಸ್ ಎನ್. (19) ಬಂಧಿತರು. ಕಲ್ಲುಗುಂಡಿಯ ಹಫೀದ್ ಹಲ್ಲೆಯಾದ ಬಗ್ಗೆ ದೂರು ನೀಡಿದವರು.
ಜ. 5ರಂದು ಘಟನೆ ನಡೆದಿತ್ತು. ಕಲ್ಲುಗುಂಡಿಯ ಹಫೀದ್ ಸುಬ್ರಹ್ಮಣ್ಯದ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಭೇಟಿಯಾಗಲು ಬಂದ ವೇಳೆ ಘಟನೆ ನಡೆದಿತ್ತು. ಯುವಕನು ಬಾಲಕಿಯ ಜತೆ ವಿಹಾರಿಸುವುದನ್ನು ಗಮನಿಸಿದ ಯುವಕರ ತಂಡವೊಂದು ಆತನ್ನು ಜೀಪಿನಲ್ಲೆ ಬೇರೆಡೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದರು ಎಂದು ವರದಿಯಾಗಿತ್ತು.
ಜ.5ರಂದು ಸುಬ್ರಹ್ಮಣ್ಯಕ್ಕೆ ಬಂದಿದ್ದ ವೇಳೆ ಕುಮಾರಧಾರ ಬಳಿಯ ಹಳೆ ಕಟ್ಟಡದ ಕೋಣೆಯೊಳಗೆ ಕೂಡಿ ಹಾಕಿ ತಂಡವೊಂದು ಹಲ್ಲೆ ನಡೆಸಿತ್ತು ಎಂದು ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದ ಹಫೀದ್ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದ. ಇದೇ ಘಟನೆಗೆ ಸಂಬಂಧಿಸಿ ವಿದ್ಯಾರ್ಥಿನಿಯ ತಂದೆಯು ಹಫೀದ್ ವಿರುದ್ಧ ಪುತ್ರಿಯ ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ ಬಗ್ಗೆ ದೂರು ನೀಡಿದ್ದರು. ಹಫೀದ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.