ಪುತ್ತೂರು: ವಿದ್ಯಾರ್ಥಿನಿಯಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಮತ್ತು ಕಾಲೇಜೊಂದರ ವಿದ್ಯಾರ್ಥಿನಿಯಾಗಿರುವ ಯುವತಿಗೆ ಕಿರುಕುಳ ನೀಡಿ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಬೆದರಿಕೆಯ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಪುತ್ತೂರು ಅರಿಯಡ್ಕ ಗ್ರಾಮದ ಮಡ್ಯ೦ಗಳ ನಿವಾಸಿ ನಿತೀಶ್ ರೈ ಆರೋಪಿ.
ಪ್ರಸ್ತುತ ಮಂಗಳೂರಿನ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ನೀಡಿದ ದೂರಿನಂತೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಕೃತ್ಯವೂ 3 ವರ್ಷಗಳ ಹಿಂದೆ ಅಂದರೇ 2020ರ ಜನವರಿಯಲ್ಲಿ ನಡೆದಿದೆ, ಆ ವೇಳೆ ಸಂತ್ರಸ್ತೆಯೂ ಅಪ್ರಾಪ್ತೆಯಾಗಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.
2020 ರ ಜನವರಿಯಲ್ಲಿ ಆರೋಪಿಯು ಸಂತ್ರಸ್ತ ಬಾಲಕಿಯೊಬ್ಬಳನ್ನು ಪ್ರೀತಿ ಮಾಡುವಂತೆ ಒತ್ತಾಯಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದು, ಪದೇ ಪದೇ ಆಕೆಗೆ ಮೊಬೈಲ್ ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಲ್ಲದೆ, ಬ್ಲಾಕ್ ಮೇಲ್ ಮಾಡಿದ್ದಾನೆ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಕಿರುಕುಳ ನೀಡಿದ ಸಂದರ್ಭದಲ್ಲಿ ಅಪ್ರಾಪ್ತಿಯಾಗಿದ್ದ ಬಾಲಕಿ ಇದೀಗ ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ತಡವಾಗಿ ದೂರು ನೀಡಿರುವುದಾಗಿ ತಿಳಿಸಲಾಗಿದೆ.ಪೊಲೀಸರು ಆಕೆಯ ದೂರಿನಂತೆ ಆರೋಪಿಯ ವಿರುದ್ಧ ಐಪಿಸಿ ಕಲಂ 354(D)363, 354(A),506 IPC, ಕಲಂ ,8 POCSO Act- 2012ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣ
ಆರೋಪಿ ನಿತೀಶ್ ರೈ ವಿರುದ್ಧ ಯುವತಿಯೊಬ್ಬರಿಂದ ಮತ್ತೊಂದು ಬೆದರಿಕೆ ಪ್ರಕರಣವೂ ದಾಖಲಾಗಿದೆ. ಪುತ್ತೂರಿನ ಕಾಲೇಜೊಂದರಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿನಿಯ ಮೊಬೈಲ್‌ಗೆ ಕರೆ ಮಾಡಿ ಪದೇ ಪದೇ ಪ್ರೀತಿಸುವಂತೆ ಒತ್ತಾಯ ಮಾಡುತ್ತಿರುವುದಲ್ಲದೆ, 2020ರ ಡಿ.29ರಂದು ವಿದ್ಯಾರ್ಥಿನಿಯ ಮನೆಯ ಬಳಿಗೆ ಬಂದು ಬೆದರಿಕೆಯೊಡ್ಡಿರುವ ಕುರಿತು ಆಕೆ ಸಂಪ್ಯ ಠಾಣೆಗೆ ದೂರು ನೀಡಿದ್ದಾರೆ. ಸಂಪ್ಯ ಪೊಲೀಸರು ಆರೋಪಿಯ ವಿರುದ್ಧ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಎಸ್ಪಿಗೆ ದೂರು ನೀಡಿದ್ದ ನಿತೇಶ್
ಈ ಎರಡು ಪ್ರಕರಣಗಳು ದಾಖಲಾಗುವ ಎರಡು ದಿನಗಳ ಹಿಂದೆ ಆರೋಪಿ ನಿತೇಶ್ ರೈಯು ಈಶ್ವರ ಮಂಗಳದ ಯುವತಿ ಆಕೆಯ ತಂದೆ ವಿರುದ್ದ ಜಿಲ್ಲಾ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಯುವತಿ ಹಾಗೂ ತಾನು ಪ್ರೀತಿಸುತ್ತಿದ್ದು ಕಳೆದ ಆಕ್ಟೋಬರ್ ತಿಂಗಳಿನಲ್ಲಿ ನಮ್ಮ ನಡುವೆ ಮನಸ್ತಾಪ ಉಂಟಾಗಿತ್ತು, ಬಳಿಕ ಆ ಯುವತಿ ಹಾಗೂ ಆಕೆಯ ತಂದೆ ಮಾನ ಹಾನಿ ನಡೆಸುತ್ತಿದ್ದಾರೆ ಎಂದು ದೂರು ನೀಡಿದ್ದ
ಇನ್ನೊಬ್ಬನ ಯುವಕನ ವಿರುದ್ಧವೂ ಕೇಸು
ನಿತೇಶ್ ರೈ ವಿರುದ್ಧ ದೂರು ನೀಡಿರುವ ಪ್ರಸ್ತುತ ಮಂಗಳೂರಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿರುವ ಕೃತ್ಯ ನಡೆದ ಸಂದರ್ಭ ಅಪ್ರಾಪ್ತೆಯಾಗಿದ್ದ ಬಾಲಕಿಯೂ ಮತ್ತೊಬ್ಬ ಯುವಕನ ವಿರುದ್ಧವೂ ದೂರು ನೀಡಿದ್ದಾರೆ. ಪ್ರಸ್ತುತ ಪ್ರಾಪ್ತ ವಯಸ್ಕಳಾಗಿರುವ ಆಕೆ ನೀಡಿದ ದೂರಿನಂತೆ ಪುತ್ತೂರು ತಾಲೂಕಿನ ಕೋಡಿಯಡ್ಕ ನಿವಾಸಿ ಬೆಳಿಯಪ್ಪ ಗೌಡ ಅವರ ಪುತ್ರ, ಪುತ್ತೂರಿನ ಪರ್ಲಡ್ಕದಲ್ಲಿ ಕೋಳಿ ಫಾರ್ಮ್ ಹೊಂದಿರುವ ರಾಹುಲ್ ಎ೦ಬಾತನ ವಿರುದ್ಧ ಪೋಕ್ಸ್ ಪ್ರಕರಣ ದಾಖಲಾಗಿದೆ.
ಮೊದಲೆ ಪರಿಚಿತನಾಗಿದ್ದ ರಾಹುಲ್ ಕೆಲ ವರ್ಷಗಳ ಹಿಂದೆ ದಾರಿಯಲ್ಲಿ ಸಿಕ್ಕಿ “ನಿನ್ನ ವಿಷಯ ಎಲ್ಲ ಗೊತ್ತುಂಟು ನಿನ್ನ ಪೋಟೋ ನನ್ನಲ್ಲಿ ಇದೆ ನಿನಗೆ ಕಳಿಸುತ್ತೇನೆ” ಎಂದು ಸಂತ್ರಸ್ತೆಗೆ ತಿಳಿಸಿದ್ದ. ಅದಾದ ಬಳಿಕ ಸಂತ್ರಸ್ತೆಯನ್ನು ಪದೇ ಪದೇ ರಾಹುಲ್ ಹೆದರಿಸುತ್ತಿದ್ದು, 2021ರ ಜುಲೈ 1 ರಂದು ದಾರಿಯಲ್ಲಿ ಸಿಕ್ಕಿ “ನಾಳೆ ಬೆಳಿಗ್ಗೆ 10 ಗಂಟೆಗೆ ಪುತ್ತೂರು ಫಿಲೋಮಿನಾ ಕಾಲೇಜು ಬಳಿ ಬಾ ನಿನ್ನ ಪೊಟೋ ಕೊಡುತ್ತೇನೆ ಇಲ್ಲದಿದ್ದರೆ ನಿನ್ನ ತಂದೆ ತಾಯಿಗೆ ಕೊಡುತ್ತೇನೆ “ಎಂದು ಹೆದರಿಸಿದ್ದಾನೆ.
ಹೆದರಿದ ಸಂತ್ರಸ್ತೆಯೂ ಮರುದಿನ ಬೆಳಿಗ್ಗೆ ದರ್ಭೆ ಬಳಿ ರಸ್ತೆಯಲ್ಲಿ ನಿಂತಿದ್ದಾಗ ಮೋಟಾರ್ ಸೈಕಲ್ ನಲ್ಲಿ ಬಂದ ರಾಹುಲನು ಪೊಟೋ ಬೇಕಾದರೆ ಬೈಕಲ್ಲಿ ಕುಳಿತುಕೊ” ಎಂದು ತಿಳಿಸಿದ್ದು , ಅದರಂತೆ ಆತನ ಬೈಕಿನಲ್ಲಿ ಕುಳಿತ ಸಂತ್ರಸ್ತೆಯನ್ನು ಪರ್ಲಡ್ಕ ರಸ್ತೆಯಲ್ಲಿರುವ ಕೋಳಿ ಪಾರ್ಮ್ ನ ಬಳಿ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಅಲ್ಲದೇ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ.
ದೂರು ಸ್ವೀಕರಿಸಿರುವ ಸಂಪ್ಯ ಠಾಣೆ ಪೊಲೀಸರು ಐಪಿಸಿ ಕಲಂ 363, 354(A),506 IPC, ಕಲಂ 7,8 POCSO Act- 2012ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ