ಪುತ್ತೂರು : ಜ 8 : ಅಡಿಕೆ ಕೇವಲ ಜಗಿದು ಉಗಿಯುವ ವಸ್ತು ಅಷ್ಟೇ ಅಲ್ಲ. ತೆಂಗಿನಕಾಯಿ ಹೇಗೆ ನಮಗೆ ಕಲ್ಪವೃಕ್ಷವೋ, ಅಡಿಕೆಯೂ ಹಾಗೆ ನಮ್ಮ ಪಾಲಿನ ಎರಡನೇ ಕಲ್ಪವೃಕ್ಷ. ಅಡಿಕೆಯ ಮಾನ ಹೋಗದಂತೆ ತಡೆಯುವ ಜವಾಬ್ದಾರಿ ಸರಕಾರದ ಮೇಲೂ ಇದೆ, ಕ್ಯಾಂಪ್ಕೋದಂಥ ಸಂಸ್ಥೆಗಳ ಮೇಲೂ ಇದೆ. ಸುಪ್ರೀಂ ಕೋರ್ಟ್ ಕಟಕಟೆಯಲ್ಲಿ ಅಡಿಕೆಯ ಮಾನ ಸಂರಕ್ಷಣೆ ಮಾಡಬೇಕು. ಅದು ಆರೋಗ್ಯಕ್ಕೆ ಹಾನಿಕರವಲ್ಲ, ಅದು ಆರೋಗ್ಯವರ್ಧಕ ಎಂದು ಸಾಬೀತು ಮಾಡಿ. ಇಲ್ಲದೇ ಹೋದಲ್ಲಿ ಅಡಿಕೆ ಬೆಳೆಗಾರರ ಕೋಪ ಎದುರಿಸುವ ಅನಿವಾರ್ಯತೆ ಎದುರಾಗಬಹುದು..!
ಇದು ಪುತ್ತೂರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆ ಆಶ್ರಯದಲ್ಲಿ ಜನವರಿ ೪ರಂದು ಬುಧವಾರ ನಡೆದ ಜಿಲ್ಲಾ ಮಟ್ಟದ ಅಡಿಕೆ ಬೆಳೆಗಾರರ ಹಕ್ಕೊತ್ತಾಯ ಸಮಾವೇಶದಲ್ಲಿ ಕೈಗೊಂಡ ಹಕ್ಕೊತ್ತಾಯ ನಿರ್ಣಯ.
ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶವನ್ನು ಕ್ಯಾಂಪ್ಕೋ ಉಪಾಧ್ಯಕ್ಷರಾದ ಶಂ.ನಾ. ಖಂಡಿಗೆ ಉದ್ಘಾಟಿಸಿದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ವಿಟ್ಲ ಸಿಪಿಸಿಆರ್‌ಐ ಹಿರಿಯ ವಿಜ್ಞಾನಿ ಡಾ.ನಾಗರಾಜ್ ಎನ್.ಆರ್., ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರುಗಳಾದ ಪ್ರದೀಪ್ ಡಿಸೋಜ, ರೇಖಾ ಮುಖ್ಯ ಅತಿಥಿಗಳಾಗಿದ್ದರು.

ಬೆಳಗ್ಗೆ ೧೦.೩೦ಕ್ಕೆ ಆರಂಭಗೊಂಡ ಸಮಾವೇಶದಲ್ಲಿ ಅತಿಥಿ, ಉದ್ಘಾಟಕರ ಭಾಷಣಕ್ಕಿಂತಲೂ ಹೆಚ್ಚಿನ ಮಹತ್ವವನ್ನು ರೈತರ ಜತೆಗಿನ ಸಂವಾದಕ್ಕೆ ನೀಡಲಾಯಿತು. ಜಿಲ್ಲೆಯ ಮೂಲೆ ಮೂಲೆಯಿಂದ ಬಂದಿದ್ದ ರೈತರು ತಮ್ಮ ಅನುಭವ, ಅನಿಸಿಕೆ, ಆಗ್ರಹ, ಸಿಟ್ಟು, ಅಸಮಾಧಾನ, ಆಕ್ರೋಶ ಎಲ್ಲವನ್ನೂ ಮುಕ್ತವಾಗಿ ಹೊರಹಾಕಿದರು. ತಮ್ಮದೇ ಆದ ಹಕ್ಕೊತ್ತಾಯಗಳನ್ನು ಮಂಡಿಸಿದರು. ಇತ್ತೀಚೆಗೆ ಸಚಿವ ಆರಗ ಜ್ಞಾನೇಂದ್ರ ನೀಡಿದ ವಿವಾದಾಸ್ಪದ ಹೇಳಿಕೆಯೂ ಸಮವೇಶದಲ್ಲಿ ಆಕ್ರೋಶಕ್ಕೆ ಕಾರಣವಾಯಿತು.
ಸಮಾವೇಶದಲ್ಲಿ ಒಟ್ಟು 7 ಅಂಶಗಳ ಹಕ್ಕೊತ್ತಾಯ ಅಂಗೀಕರಿಸಿ ಅದನ್ನು ಸರಕಾರಕ್ಕೆ ಸಲ್ಲಿಸಲಾಯಿತು.
ಹಕ್ಕೋತ್ತಾಯಗಳು :
೧. ಅಡಿಕೆಯನ್ನು ಕೇವಲ ಜಗಿದು, ಉಗಿಯುವ ವಸ್ತುವೆಂದು ಪರಿಗಣಿಸದೆ ಆಹಾರ ವಸ್ತುಗಳಲ್ಲಿ ಮತ್ತು ವಿಶೇಷವಾಗಿ ಅಡಕೆಯಲ್ಲಿರುವ ಔಷಧೀಯ ಅಂಶಗಳ ಕಡೆಗೆ ಗಮನ ಹರಿಸಬೇಕು. ರೈತ ವಿಜ್ಞಾನಿಗಳು ಅಡಕೆಯಿಂದ ಅನೇಕ ಬಗೆಯ ಆಹಾರ ವಸ್ತುಗಳು, ಪಾನೀಯ, ಐಸ್‌ಕ್ರೀಂ ಮತ್ತಿತರ ತಿನಿಸುಗಳನ್ನು ತಯಾರಿಸಿದ್ದಾರೆ. ವಿದೇಶದಲ್ಲಿ ಅಡಿಕೆ ಆಧರಿತ ಆಹಾರ ವಸ್ತುಗಳು ಬಳಕೆಯಲ್ಲಿವೆ. ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆಯತ್ತ ಸರಕಾರ ಗಮನ ಹರಿಸಬೇಕು.
೨. ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಅಡಿಕೆಯಲ್ಲಿ ಔಷಧವಿದೆ ಎಂಬ ಅಂಶ ಈಗಾಗಲೇ ಪ್ರಾಥಮಿಕ ಸಂಶೋಧನೆಯಿಂದ ಬೆಳಕಿಗೆ ಬಂದಿರುವ ಮಾಹಿತಿ ಬಿತ್ತರಗೊಂಡಿದೆ. ಈ ನಿಟ್ಟಿನಲ್ಲಿ ಸರಕಾರ ಅಧಿಕೃತವಾಗಿ ಸಂಶೋಧನೆ ನಡೆಸಬೇಕು. ಅಡಿಕೆಯನ್ನು ಮೆಡಿಸಿನ್ ಪ್ಲ್ಯಾಂಟ್ (ಔಷಧೀಯ ಸಸ್ಯ) ಎಂದು ಘೋಷಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು.

೩. ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಆಪಾದನೆ ಸರ್ವೋಚ್ಚ ನ್ಯಾಯಾಲಯದ ವಿಚಾರಣಾ ಹಂತದಲ್ಲಿದೆ. ಆಧಾರರಹಿತವಾದ ಈ ಆಪಾದನೆಯನ್ನು ಸುಳ್ಳೆಂದು ಸಾಬೀತುಪಡಿಸುವ ನಿಟ್ಟಿನಲ್ಲಿ ಕಟಿಬದ್ಧವಾದ ನ್ಯಾಯಾಂಗ ಹೋರಾಟ ಮಾಡಬೇಕಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಡಿಕೆ ಆರೋಗ್ಯಕ್ಕೆ ಉತ್ತೇಜಕ ಎಂಬ ವರದಿಯನ್ನು ನ್ಯಾಯಾಲಯಕ್ಕೆ ತಕ್ಷಣ ಸಲ್ಲಿಸಬೇಕು.
೪. ಅಡಿಕೆ ಆಮದು ಪ್ರಮಾಣ ಮತ್ತು ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಮಾಣ ಕಡಿಮೆಯಾದ ನಂತರ ಧಾರಣೆ ಏರುಗತಿಯಾಗಿದೆ. ಅಡಿಕೆ ಆಮದು ಪ್ರಮಾಣ ಮತ್ತೆ ಹಚ್ಚಳಗೊಂಡಲ್ಲಿ, ಕಳ್ಳಸಾಗಣಿಕೆ ನಿಯಂತ್ರಣ ತಪ್ಪಿದಲ್ಲಿ ಅಡಿಕೆ ಧಾರಣೆ ಕುಸಿಯುವ ಅಪಾಯವಿದೆ. ಹೀಗಾಗಿ ಆಮದು ನಿಯಂತ್ರಣ, ಆಮದು ಸುಂಕ ಹೆಚ್ಚಳ, ಕಳ್ಳಸಾಗಾಣಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರದ ಮೇಲೆ ರಾಜ್ಯ ಸರಕಾರ ಒತ್ತಡ ತರಬೇಕು.

೫. ಅಡಿಕೆ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು.
೬. ಹಳದಿ ರೋಗ ಮತ್ತು ಎಲೆಚುಕ್ಕಿ ರೋಗದಿಂದ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇವರಿಗೆ ರೋಗ ನಷ್ಟದ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಹವಾಮಾನ ಆಧರಿತ ಬೆಳೆ ವಿಮಾ ಯೋಜನೆಯಲ್ಲಿ ಪರಿಹಾರ ಮೊತ್ತವು ಹೆಕ್ಟೇರ್‌ಗೆ ಗರಿಷ್ಠ ೬೦ ಸಾವಿರ ರೂ. ಪ್ರಾಪ್ತಿಯಾಗಿದ್ದು, ಅಡಿಕೆ ಬೆಳೆಯು ರೋಗಕ್ಕೆ ತುತ್ತಾಗಿರುವ ಕಾರಣ ಈ ಮೊತ್ತವನ್ನು ೧ ಲಕ್ಷ ರೂ.ಗಳಿಗೆ ಏರಿಸಬೇಕು. ಹಳದಿ ರೋಗದ ಬಗ್ಗೆ ಸಂಶೋಧನೆ ಕೈಗೊಂಡು ಶಾಶ್ವತ ಔಷಧ ಕಂಡು ಹಿಡಿಯಬೇಕು.
೭. ಅಡಿಕೆ ಬೆಳೆಗಾರರ ಕಲ್ಯಾಣಕ್ಕೆ ಸಂಬಂಧಿಸಿ ಗೋರಖ್‌ಸಿಂಗ್ ಸಮಿತಿ ಸಲ್ಲಿಸಿದ ವರದಿಯ ಅಂಶಗಳನ್ನು ಅನುಷ್ಠಾನಗೊಳಿಸಬೇಕು.

ಹಕ್ಕೊತ್ತಾಯ ಜಾರಿಗೆ ಯತ್ನಿಸುವೆ: ಮಠಂದೂರು
ಸಮಾವೇಶದಲ್ಲಿ ಅಂಗೀಕಾರಗೊಂಡ ೭ ಹಕ್ಕೊತ್ತಾಯಗಳನ್ನು ಕೂಡ ಗಮನಿಸಿದ್ದೇವೆ. ಇವುಗಳ ಜಾರಿಗೆ ಸರಕಾರದ ಮಟ್ಟದಲ್ಲಿ ಯತ್ನಿಸುವೆ ಎಂದು ಶಾಸಕ ಸಂಜೀವ ಮಠಂದೂರು ಭರವಸೆ ನೀಡಿದರು.
ಅಡಿಕೆ ಮಂಡಳಿ ರಚನೆಯ ಲಾಭದ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ಇದು ಅಷ್ಟೊಂದು ಪ್ರಯೋಜನಕಾರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಮತ. ಉಳಿದ 6 ಅಂಶಗಳ ಕಡೆಗೆ ಗಮನ ಹರಿಸಿ, ಈ ಹಕ್ಕೊತ್ತಾಯದ ಜತೆಗೆ ನನ್ನ ಪತ್ರವನ್ನೂ ಇಟ್ಟು ತೋಟಗಾರಿಕೆ, ಕೃಷಿ, ಸಹಕಾರಿ ಇಲಾಖೆ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸುತ್ತೇನೆ. ಸ್ವತಃ ನಾನೇ ವಿಧಾನ ಮಂಡಲದಲ್ಲಿ ಪ್ರಸ್ತಾಪಿಸುತ್ತೇನೆ. ಗೋರಖ್‌ಸಿಂಗ್ ವರದಿ ಜಾರಿಯ ವಿಚಾರದಲ್ಲೂ ಪ್ರಯತ್ನಿಸುತ್ತೇನೆ. ರೋಗದಿಂದ ಬೆಳೆ ನಷ್ಟ ಹೊಂದಿದವರಿಗೆ ಪರಿಹಾರ ಕಲ್ಪಿಸಲು ಈಗಾಗಗೇ ಸರಕಾರ ಬಿಡುಗಡೆ ಮಾಡಿದ ಪ್ಯಾಕೇಜ್‌ನಲ್ಲಿ ಅವಕಾಶವಿದೆ ಎಂದವರು ನುಡಿದರು.

ಸಾವಯವ ಗೊಬ್ಬರ ತಯಾರಿಸಲಿದೆ ಕ್ಯಾಂಪ್ಕೋ
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬೃಹತ್ ಪ್ರಮಾಣದ ಸಾವಯವ ಗೊಬ್ಬರ ತಯಾರಿಕಾ ಘಟಕ ನಿರ್ಮಿಸಲು ಕ್ಯಾಂಪ್ಕೋ ಸಂಸ್ಥೆ ನಿರ್ಧರಿಸಿದೆ. ಈ ಮೂಲಕ ಕ್ಯಾಂಪ್ಕೋ ಕಡೆಯಿಂದ ರೈತರಿಗೆ ಸಾವಯವ ಗೊಬ್ಬರ ಸಿಗಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಶಂ.ನಾ. ಖಂಡಿಗೆ ಹೇಳಿದರು.
ವಾರಣಾಸಿ ಸುಬ್ರಾಯ ಭಟ್ಟರ ಕಾಲದಿಂದಲೇ ಕ್ಯಾಂಪ್ಕೋ ಸಂಸ್ಥೆ ಬೆಳೆಗಾರರ ಪರವಾಗಿಯೇ ಕೆಲಸ ಮಾಡುತ್ತಾ ಬಂದಿದೆ. ಸಮಗ್ರ ಕೃಷಿಗೆ ಆದ್ಯತೆ ನೀಡುವ ಅಗತ್ಯವನ್ನು ಸುಬ್ರಾಯ ಭಟ್ಟರು ಅಂದೇ ಪ್ರತಿಪಾದಿಸಿದ್ದರು. ಅದರಂತೆ ಕ್ಯಾಂಪ್ಕೋ ಅಡಕೆಯ ಜತೆಗೆ ರಬ್ಬರ್, ಕಾಳುಮೆಣಸು, ಕೊಕ್ಕೊ ಇತ್ಯಾದಿಗಳನ್ನು ಖರೀದಿಸಲು ಅರಂಭಿಸಿತು. ಮುಂದಿನ 3 ತಿಂಗಳಲ್ಲಿ ಗೇರು ಖರೀದಿಸಲು ಅರಂಭಿಸಲಿದ್ದೇವೆ. ತೆಂಗು ಕೂಡ ಖರೀದಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಅದು ಕೂಡ ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ರೈತ ಬೆಳೆಯುವ ಎಲ್ಲ ಉತ್ಪನ್ನಗಳನ್ನು ಖರೀದಿಸುವುದು ನಮ್ಮ ಧ್ಯೇಯವಾಗಿದೆ ಎಂದರು.
ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿರುವ ಅಡಕೆ ಪರಂಪರಾಗತವಾಗಿ ಬೆಳೆಯುತ್ತಿದ್ದ ಸಾಂಪ್ರದಾಯಿಕ ಬೆಳೆಯಾಗಿದ್ದರೂ, ಈಗ ಕರಾವಳಿ ಮಲೆನಾಡುಗಳಿಂದ ಬಯಲುಸೀಮೆಗೆ ವಿಸ್ತರಣೆಯಾಗುತ್ತಿದೆ. ಅಸ್ಸಾಂ, ಮೇಘಾಲಯ ಮುಂತಾದ ರಾಜ್ಯಗಳಿಗೂ ವಿಸ್ತರಣೆಯಾಗುತ್ತಿದೆ. ಇವತ್ತು ಯಾರೂ ನಿರೀಕ್ಷೆ ಮಾಡಿರದ ಧಾರಣೆ ಅಡಕೆಗೆ ಬಂದಿದೆ. ಆದರೆ ಪೂರೈಕೆ ಸಿಕ್ಕಾಪಟ್ಟೆ ಜಾಸ್ತಿಯಾದರೆ, ಬೇಡಿಕೆ ಹಿಂದೆ ಉಳಿದರೆ ಸಮಸ್ಯೆಯಾಗಬಹುದು. ತಿಂದು ಉಗುಳುವ ಅಡಕೆಯ ಮೌಲ್ಯವರ್ಧನೆ ಆದರೆ ಉತ್ತಮ. ಕೆಂಪಡಕೆಯ ಸಿಪ್ಪೆಯಿಂದ ಜೈವಿಕ ಇಂಧನ ತಯಾರಿಸಬಹುದಾಗಿದೆ ಎಂದು ಹೇಳಿದ ಅವರು, ಅಡಕೆಗೆ ಧಾರಣೆ ಕುಸಿಯದಂತೆ ಸೂಕ್ತ ಕ್ರಮಗಳನ್ನು ಕ್ಯಾಂಪ್ಕೋ ಕೈಗೊಳ್ಳುತ್ತದೆ. ೧.೩೦ ಲಕ್ಷ ಸದಸದ್ಯರನ್ನು ಹೊಂದಿರುವ ಕ್ಯಾಂಪ್ಕೋ ಸಂಸ್ಥೆ ಹಿಂದೆಯೂ ಬೆಳೆಗಾರರ ಪರವಾಗಿ ನಿಂತಿದೆ. ಮುಂದೆಯೂ ನಿಲ್ಲಲಿದೆ. ಬೆಳೆಗಾರರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದರು.
ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಸಾಬೀತು ಮಾಡಲಿದ್ದೇವೆ
ಸುಪ್ರೀಂ ಕೋರ್ಟಿನಲ್ಲಿ ಗೆಲ್ಲಿಸುತ್ತೇವೆ ಅಡಿಕೆ ಆರೋಗ್ಯಕ್ಕೆ ಹಾನಿಕರ, ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಮಾಹಿತಿ ಮುಂದಿಟ್ಟುಕೊಂಡು ಅಡಿಕೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಇದರ ವಿರುದ್ಧ ಇಬ್ಬರು ವಕೀಲರ ಮೂಲಕ ಕ್ಯಾಂಪ್ಕೋ ಸಮರ್ಥವಾಗಿ ವಾದ ಮಂಡಿಸುತ್ತಿದ್ದು, ಅಡಿಕೆಯನ್ನು ಗೆಲ್ಲಿಸುವ ಕೆಲಸ ಮಾಡಲಿದೆ. ಇದೇ ವೇಳೆ ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬ ಅಂಶವನ್ನು ನಿಟ್ಟೆ ವಿವಿಯಲ್ಲಿ ಸಂಶೋಧನೆ ಮಾಡಲಾಗುತ್ತಿದ್ದು, ಶೀಘ್ರ ವರದಿ ಬರಲಿದೆ. ಬಾಯಿ ಕ್ಯಾನ್ಸರ್‌ಗೆ ಅಡಕೆ ಔಷಧವಾಗಿದೆ ಎಂಬ ವರದಿಯೂ ಇದೆ. ಇದು ನಮಗೆ ಸು.ಕೋರ್ಟ್‌ನಲ್ಲಿ ಗೆಲ್ಲಲು ಪೂರಕವಾಗಲಿದೆ ಎಂದು ಶಂ.ನಾ. ಖಂಡಿಗೆ ಹೇಳಿದರು.
ಸಭೆಯ ಉದ್ಘಾಟನೆಗೂ ಮೊದಲು ವಿವೇಕಾನಂದ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು .








