ಸುಬ್ರಹ್ಮಣ್ಯ/ Subrahmanya :
ಸುಬ್ರಹ್ಮಣ್ಯ : ಜ 6 : ಹಿಂದೂ ವಿದ್ಯಾರ್ಥಿನಿಯೊಂದಿಗೆ ಮುಸ್ಲಿಂ ಹುಡುಗ ತಿರುಗಾಡುತ್ತಿದ್ದಾನೆಂದು ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಲ್ಲುಗುಂಡಿ ಯುವಕನೋರ್ವ ಸುಳ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ ನನ್ನ ಮಗಳಿಗೆ ಪ್ರೀತಿಸುವಂತೆ ಒತ್ತಡ ಹಾಕಿ ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿಯ ತಂದೆ ಹಲ್ಲೆಗೊಳಗಾದ ಯುವಕನ ವಿರುದ್ಧ ದೂರು ನೀಡಿದ್ದು ಸುಬ್ರಹ್ಮಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಜ.5ರಂದು ಸುಬ್ರಹ್ಮಣ್ಯ ಗ್ರಾಮದ ಕುಮಾರಧಾರ ಜಂಕ್ಷನ್ ಬಳಿ ನಡೆದಿದೆ.
ಸಂಪಾಜೆ ಗ್ರಾಮದ ಕಲ್ಲುಗುಂಡಿ ಹನೀಫ್ ಎಂಬವರ ಮಗ ಅಫೀದ್ (20) ಹಲ್ಲೆಗೊಳಗಾದ ಯುವಕ ಹಾಗೂ ಮಾನಭಂಗ ಪ್ರಕರಣದ ಆರೋಪಿ. 17ರ ಹರೆಯದ ಕುಕ್ಕೆ ಸುಬ್ರಹ್ಮಣ್ಯದ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಂತ್ರಸ್ತ ಬಾಲಕಿ.
ಅಫೀದ್ ಕೊಟ್ಟ ದೂರಿನಲ್ಲಿ ಏನಿದೆ?
ಅಫೀದ್ ಎಂಬಾತನಿಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ನಲ್ಲಿ ಸುಬ್ರಹ್ಮಣ್ಯದ ವಿದ್ಯಾರ್ಥಿನಿಯ ಪರಿಚಯವಾಗಿದ್ದು, ಆತ ಆಕೆಯನ್ನು ಈ ಹಿಂದೆ 2-3 ಸಲ ಸುಬ್ರಹ್ಮಣ್ಯಕ್ಕೆ ಬಂದು ಭೇಟಿಯಾಗಿದ್ದ. ಅದರಂತೆ ಗುರುವಾರವೂ ಸುಬ್ರಹ್ಮಣ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಕ್ದಾಣಕ್ಕೆ ಬಂದಿದ್ದು ಅವಳು ಕಾಲೇಜಿನಿಂದ ಸಂಜೆ ಬಸ್ ನಿಲ್ದಾಣಕ್ಕೆ ಬಂದ ವೇಳೆ ಆತ ಆಕೆಗೆ ಚಾಕಲೇಟ್ ನೀಡಿ ಮಾತನಾಡುತ್ತಿದ್ದ ವೇಳೆ ಪರಿಚಯವಿಲ್ಲದ 2-3 ಮಂದಿ ಬಂದು ಅಫೀದ್ ನನ್ನು ಎಳೆದುಕೊಂಡು ಜೀಪೊಂದರಲ್ಲಿ ಹಾಕಿದ್ದು, ಆಗ ಅಲ್ಲಿಗೆ 5-6 ಮಂದಿ ಬಂದು ಜೀಪಿನಲ್ಲಿ ಸುಬ್ರಹ್ಮಣ್ಯದ ಕುಮಾರಧಾರ ಜಂಕ್ಷನ್ ಬಳಿಯ ಹಳೆ ಕಟ್ಟಡದ ಕೋಣೆಯೊಳಗ ಕೂಡಿ ಹಾಕಿ 10-12 ಜನರು ಕೈಯಲ್ಲಿ ಮರದ ದೊಣ್ಣೆ, ಬೆತ್ತಗಳಿಂದ ಹೊಡಿದಿದ್ದು, ಒಬ್ಬಾತ ಚಾಕುವಿನಿಂದ ತಿವಿಯಲು ಪ್ರಯತ್ನಿಸಿದ್ದಾನೆ. ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಫೀದ್ ಸುಬ್ರಹ್ಮಣ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ಯುವಕನ ವಿರುದ್ಧ ಮಾನಭಂಗಕ್ಕೆ ಯತ್ನಿಸಿದ ಆರೋಪ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ವಿರುದ್ಧ ಯುವತಿಯ ತಂದೆ ದೂರು ನೀಡಿದ್ದಾರೆ. ನನ್ನ ಮಗಳು ಮನೆಗೆ ಹಿಂತಿರುಗಲು ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೇಳೆ ಹಫೀದ್ ಎಂಬಾತ ಮಗಳನ್ನು ಪ್ರೀತಿಸುವಂತೆ ಒತ್ತಡ ಹಾಕಿ, ಮಗಳ ದೂರವಾಣಿ ಸಂಖ್ಯೆ ಕೇಳಿದ್ದು, ನಿರಾಕರಿಸಿದ ಸಂದರ್ಭದಲ್ಲಿ ಅವಳ ಕೈ ಹಿಡಿದು ಎಳದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಎರಡೂ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.