ಹಿರಿಯ ಕಾಂಗ್ರೆಸ್ ನಾಯಕ, ಬಿಲ್ಲವ ಮುಖಂಡ ಜನಾರ್ಧನ ಪೂಜಾರಿಯವರ ಕ್ರಾಂತಿಕಾರಿ ನಡೆಯಾದ ವಿಧವೆ ಅರ್ಚಕಿಯಿಂದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಎದುರು ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನಾರಾಯಣ ಗುರು ಮೂರ್ತಿಗೆ ಪೂಜೆ ನಡೆಯಿತು.
ಸಿದ್ದರಾಮಯ್ಯ ಉಳ್ಳಾಲದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದು ಆ ಸಂದರ್ಭ ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ತೆರಳಿ ದೇವರಿಗೆ ವಿಶೇಷ ಸಲ್ಲಿಸಿದರು. ಆ ಸಂದರ್ಭ ಅರ್ಚಕರು ಮುಂದೆ ಉತ್ತಮ ಆಡಳಿತ ನೀಡಿ ಎಂದು ಆಶೀರ್ವಾದಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಳಿನ್ ಕುಮಾರ್ ನನ್ನು ಬಿಜೆಪಿಯ ಜೋಕರ್ ಎಂದರು. ಅವರ ಮಾತಿಗೆ ನನ್ನ ಅಭಿಪ್ರಾಯವಿಲ್ಲ ಎಂದ ಸಿದ್ದು ನಳಿನ್ ವಿದುಷಕರು ಎಂದರು. ತನ್ನನ್ನು ಜೈಲಿಗೆ ಹಾಕಲಾಗುವುದು ಎನ್ನುವ ಕಟೀಲ್ ಮಾತಿಗೆ , ಜೈಲಿಗೆ ಹಾಕುವುದು ಕೋರ್ಟ್, ಕಟೀಲ್ ಹಾಕಲು ಆಗ್ತದಾ ಇದೊಂದು ಬಾಲಿಶ ಹೇಳಿಕೆ, ಇದಕ್ಕೆ ನಾನು ಕಟೀಲ್ ಹೇಳಿಕೆಗೆ ಉತ್ತರಿಸುವುದಿಲ್ಲ ಎಂದರು.




ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೆದುರು ಮಾತನಾಡುವ ಧೈರ್ಯ ಇಲ್ಲ, ಬೇರೆಯವರ ಧಮ್, ತಾಕತ್ ಪ್ರಶ್ನಿಸುವ ಬೊಮ್ಮಾಯಿಯೇ ಸ್ವತಃ ಮೋದಿಯವರನ್ನು ಕಂಡ್ರೆ ಹೆದರುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದೆ. ಅದನ್ನು ಅನವಶ್ಯಕವಾಗಿ ವಿವಾದ ಮಾಡಲಾಗಿದೆ.ಪುಕ್ಕಲು ಸ್ವಭಾವದವರು, ಧೈರ್ಯ ಇಲ್ಲದವರು ಎನ್ನುವ ಅರ್ಥದಲ್ಲಿ ಹಳ್ಳಿ ಭಾಷೆಯಲ್ಲಿ ನಾಯಿ ಮರಿ ಎಂದಿದ್ದೇ ಹೊರತು ಮುಖ್ಯಮಂತ್ರಿಗಳನ್ನು ವ್ಯಕ್ತಿಗತವಾಗಿ ನಿಂದಿಸುವ ದುರುದ್ದೇಶ ಖಂಡಿತ ಇರಲಿಲ್ಲ.
ಪ್ರಾಣಿ-ಪಕ್ಷಿ-ಹೂ-ಹಣ್ಣುಗಳನ್ನು ಅವುಗಳ ಸ್ವಭಾವಗಳ ಸಾಮ್ಯತೆಗೆ ಅನುಗುಣವಾಗಿ ಮನುಷ್ಯರಿಗೆ ಹೋಲಿಸುವುದು ಜನಪದ ಸಂಸ್ಕೃತಿ.ಯಾವ ಪ್ರಾಣಿ-ಪಕ್ಷಿಯೂ ಕೀಳೂ ಅಲ್ಲ, ಮೇಲು ಅಲ್ಲ.ಹುಲಿ ಮನುಷ್ಯರನ್ನು ಕೊಂದು ತಿನ್ನುವ ಪ್ರಾಣಿ. ಬಿಜೆಪಿಯವರೇ ಯಡಿಯೂರಪ್ಪನವರನ್ನು ರಾಜಾ ಹುಲಿ ಎಂದು ಬಣ್ಣಿಸುತ್ತಾರೆ. ಅದನ್ನೂ ಅವಮಾನ ಎಂದು ತಿಳಿದುಕೊಳ್ಳಬಹುದಲ್ಲಾ ? ಟಿವಿ ಚಾನೆಲ್‌ನವರು ಪ್ರತಿದಿನ ನನ್ನನ್ನು ‘ಟಗರು’ ‘ಟಗರು’ ಎಂದು ಹಾಡು ಕಟ್ಟಿ ತೋರಿಸುತ್ತಾರೆ.ಟಗರು ಗುಮ್ಮುತ್ತೆ, ನಾನು ಯಾರಿಗೆ ಗುಮ್ಮಿದ್ದೇನೆ? ನಾನೂ ಅವಮಾನ ಮಾಡಿದ್ದಾರೆ ಎಂದು ಕೋಪಮಾಡಿಕೊಳ್ಳಬಹುದಲ್ಲಾ?
ಸಾವಿರಾರು ಮಂದಿ ಹತ್ಯೆಗೀಡಾದ ಗುಜರಾತ್ ಗಲಭೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ‘ “ಕಾರಿಗೆ ಅಡ್ಡಬಂದು ನಾಯಿಮರಿ ಸತ್ತರೆ ಏನು ಮಾಡೋಣ” ಎಂದು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಹೇಳಿದ್ದರು. ಇದೂ ವಿವಾದವಾಗಿತ್ತಲ್ಲವೇ? ನಾಯಿ ಸ್ವಾಮಿ ನಿಷ್ಠೆಗೆ ಹೆಸರಾದರೆ, ನಾಯಿಮರಿ ಪುಕ್ಕಲು ಸ್ವಭಾವಕ್ಕೆ ಕುಖ್ಯಾತಿಪಡೆದಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಪ್ರಧಾನಿ ಎದುರು ತುಟಿ ಬಿಚ್ಚಲಾಗದ ಮುಖ್ಯಮಂತ್ರಿಯನ್ನು ಹುಲಿ-ಸಿಂಹಕ್ಕೆ ಹೋಲಿಸಲಾಗುತ್ತಾ? ನಾಯಿ ಮರಿ, ಬೆಕ್ಕಿನ ಮರಿಗಳಿಗೆ ಹೋಲಿಸಬೇಕಲ್ಲಾ?
ನಮಗೆ ನಾಡಿನ ಹಿತ ಮುಖ್ಯ. 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶಿಫಾರಸು ಮಾಡಿದ್ದ 5,495 ಕೋಟಿ ವಿಶೇಷ ಅನುದಾನವನ್ನು ನೀಡಲು ನಿರ್ಮಲಾ ಸೀತಾರಾಮನ್ ಅವರು ನಿರಾಕರಿಸಿದರು, ಅವರೊಂದಿಗೆ ಮಾತನಾಡಿ ಈ ಅನುದಾನ ತರಲು ಬೊಮ್ಮಾಯಿ ಅವರಿಂದ ಸಾಧ್ಯವಾಗಿಲ್ಲ. ಇದರಿಂದ ನಷ್ಟವಾಗಿದ್ದು ರಾಜ್ಯಕ್ಕಲ್ಲವೇ? ರಾಜ್ಯಕ್ಕೆ ಸಿಗಬೇಕಾದ ಅನುದಾನ ಸರಿಯಾದ ಪ್ರಮಾಣದಲ್ಲಿ ಸಿಕ್ಕಿಲ್ಲ, ಪೂರ್ಣಪ್ರಮಾಣದ ಜಿಎಸ್‌ಟಿ ಪರಿಹಾರ ಬಂದಿಲ್ಲ, ಬರ, ನೆರೆ ಪರಿಹಾರದ ಹಣ ಬಂದಿಲ್ಲ. ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರೋರು ಇದನ್ನೆಲ್ಲ ಗಟ್ಟಿ ಧ್ವನಿಯಲ್ಲಿ ಕೇಳದೆ ಹೆದರಿ ಸುಮ್ಮನಿದ್ರೆ ನಾಡಿಗೆ ಅನ್ಯಾಯವಾಗಲ್ವ?
ಬಸವರಾಜ ಬೊಮ್ಮಾಯಿ ಅವರು ನಮ್ಮ ಒಡನಾಟದವರು, ಅವರೇನು ಬೇಸರ ಮಾಡಿಕೊಂಡಿರಲಾರರು. ಸುತ್ತಲಿನ ವಂದಿ-ಮಾಗದರು ಅವರನ್ನು ಓಲೈಸಲಿಕ್ಕಾಗಿ ಖಂಡಿಸಿ, ಮಂಡಿಸಿ ವಿವಾದ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಬೊಮ್ಮಾಯಿಯವರು ಜಾಗರೂಕರಾಗಿರುವುದು ಒಳ್ಳೆಯದು.
ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮಿಯವರು ಮಂಗಳೂರಿನಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಈಡಿಗ ಬಿಲ್ಲವ ನಾಮಧಾರಿ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮನವಿ ಮಾಡಿದರು. ಶ್ರೀಗಳ ಮನವಿ ಸ್ವೀಕರಿಸಿದ ಬಳಿಕ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮಂಗಳೂರಿನಲ್ಲಿ ಇಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಜೊತೆ ಪಕ್ಷ ಸಂಘಟನೆ, ಚುನಾವಣಾ ತಯಾರಿ ಮುಂತಾದ ಪ್ರಮುಖ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದೆ. ದಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ , ಮಾಜಿ ಸಚಿವರಾದ ರಮಾನಾಥ ರೈ ,ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಯು.ಟಿ. ಖಾದರ್ , ಶಕುಂತಲ ಶೆಟ್ಟಿ , ಮಿಥುನ್ ರೈ ಇನ್ನಿತರ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.