ಕಡಬ: ಸುಳ್ಯ ಶಾಸಕ (Sullia) ಸಚಿವ ಅಂಗಾರರಿಗೆ ರಸ್ತೆ ಅಭಿವೃದ್ದಿ ವಿಷಯದಲ್ಲಿ ಬಿಜೆಪಿ ಕಾರ್ಯಕರ್ತರಿಂದಲೇ ಪ್ರತಿರೋಧ ವ್ಯಕ್ತವಾದ ಬೆನ್ನಲ್ಲೆ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ಜಿ ಅವರ ತವರು ಗ್ರಾಮ ಪೆರಾಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂತೂರು ಗ್ರಾಮದಲ್ಲಿ ಮತದಾನ ಬಹಿಷ್ಕಾರದ ನಿರ್ಧಾರಕ್ಕೆ ಊರವರು ಬಂದಿದ್ದಾರೆ.
ಕಡಬ ತಾಲೂಕಿನ ಕುಂತೂರು ಒಂದನೇ ವಾರ್ಡ್‌ನಲ್ಲಿ ಬರುವ ಮಾಪಲ-ಬೋಳ್ತಿಮಾರು-ಪುಳಿತ್ತಡಿ ರಸ್ತೆಯನ್ನು ಕಾಂಕ್ರೀಟ್ ಅಥವಾ ಡಾಂಬರು ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿ ಮಾಪಲದಲ್ಲಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ಒಂದು ವೇಳೆ ಬೇಡಿಕೆ ಈಡೇರದಿದ್ದಲ್ಲಿ ಮುಂಬರುವ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಮಾಪಲದಲ್ಲಿ 30 ಮನೆಗೂ ಹೆಚ್ಚು ರಸ್ತೆ ಫಲಾನುಭವಿಗಳು ಪ್ರತಿಭಟನೆ ನಡೆಸಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದರು. ಮಾಪಲ-ಬೋಳ್ತಿಮಾರು-ಪುಳಿತ್ತಡಿ ರಸ್ತೆ ತೀರ ಹದಗೆಟ್ಟಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ವಾಹನ ಸಂಚಾರ ಕಷ್ಟವಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು 20 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಬದಲಿ ರಸ್ತೆಯೂ ಇಲ್ಲದಿರುವುದರಿಂದ ಈ ಭಾಗದ ಕೃಷಿಕರು, ಶಾಲಾ ಮಕ್ಕಳು, ಹೈನುಗಾರರು ಇದೇ ರಸ್ತೆಯಲ್ಲಿ ಬಿದ್ದು ಎದ್ದು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.
ಆಲಂಕಾರಿನಲ್ಲಿ ನಡೆದ ದ.ಕ. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಸಂದರ್ಭ ಈ ರಸ್ತೆ ಸಮಸ್ಯೆ ವೇಳೆ ಜಿಲ್ಲಾಧಿಕಾರಿ ಸೂಚನೆಯಂತೆ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ರಸ್ತೆ ವೀಕ್ಷಣೆ ಮಾಡಿದ್ದು, ಮುಂದಿನ ಪ್ರತಿಕ್ರಿಯೆ ಸಿಕ್ಕಿಲ್ಲ. ಸಚಿವರು, ಶಾಸಕರು, ಜಿಲ್ಲಾ ಪಂಚಾಯಿತಿ, ತಾಪಂ, ಗ್ರಾಪಂ ಸದಸ್ಯರಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. 30ಕ್ಕೂ ಹೆಚ್ಚು ಮನೆಯವರು ಈ ರಸ್ತೆಯನ್ನು ಬಳಸುತ್ತಿದ್ದಾರೆ. ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂಬರುವ ಮತದಾನ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿರುವ ಗ್ರಾಮಸ್ಥರು ಈ ಬಗ್ಗೆ ಮಾಪಲದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.
ಗ್ರಾಮಸ್ಥ ಶಿವಕುಮಾರ್ ಭಟ್ ಮಾತನಾಡಿ, ಸಮರ್ಪಕ ರಸ್ತೆ ಆಗುವ ತನಕ ಮತದಾನ ಮಾಡದಿರುವ ನಿರ್ಧಾರಕ್ಕೆ ಬಂದಿದ್ದೇವೆ. ಜನಪ್ರತಿನಿಧಿಗಳ ಸ್ಪಂಧನೆಯೇ ಇಲ್ಲವಾಗಿದೆ ಎಂದರು. ಯಾವೂದೇ ಆಶ್ವಾಸನೆಗೂ ಬಗ್ಗುವುದಿಲ್ಲ ಎಂದರು.
ಗ್ರಾಮಸ್ಥರಾದ ಪ್ರಭಾಕರ ಗೌಡ, ಚೋಮ ನಾಯ್ಕ, ರಾಜೇಶ್ ಶೆಟ್ಟಿ, ಶಂಕರ, ಚಂದ್ರಶೇಖರ, ಗಣೇಶ್ ಶೆಟ್ಟಿ, ಲಲಿತಾ, ಶೋಭಾ, ರಮಾನಂದ ರೈ, ಬಾಲಕೃಷ್ಣ ರೈ, ಮಹಾಬಲ ರೈ, ದಿನೇಶ್, ಯೋಗೀಶ್, ಕಮಲ್ ಮಾಪಲ, ಗೋಪಾಲಕೃಷ್ಣ ರೈ, ರಾಧಾಕೃಷ್ಣ, ಲಕ್ಷ್ಮೀಶ ಶೆಟ್ಟಿ, ಕಮಲಾಕ್ಷ ಶೆಟ್ಟಿ, ಸುರೇಶ್, ಬಾಲಕ, ಸುಶೀಲಾ, ಜತ್ತಪ್ಪ ರೈ, ಅಕ್ಷತಾ, ದಾಮೋದರ, ಸರಸ್ವತಿ, ಉಮಾವತಿ ಮತ್ತಿತರರು ಉಪಸ್ಥಿತರಿದ್ದರು.
ಮತದಾನ ಬಹಿಷ್ಠಾರ: ಮಾಪಲ-ಬೋಳ್ತಿಮಾರು-ಪುಳಿತ್ತಡಿ ರಸ್ತೆಗೆ ಈ ತನಕ ಯಾವುದೇ ಅನುದಾನ ನೀಡಿಲ್ಲ. ಬೇಸಿಗೆಯಲ್ಲಿ 3-4 ತಿಂಗಳು ಮಾತ್ರ ರಸ್ತೆಯಲ್ಲಿ ಸಂಚಾರ ಸಾಧ್ಯವಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿಯೇ ನೀರು ಹರಿದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗ್ರಾಪಂನಿಂದ ಕಳೆದ ಸಲ 5 ಸಾವಿರ ಹಾಗೂ ಈ ಸಲ 15 ಸಾವಿರ ರೂ.ಅನುದಾನ ಇಟ್ಟು ದುರಸ್ತಿ ಮಾಡಲಾಗಿದೆ. ಕೂಡಲೇ ಶಾಶ್ವತ ಪರಿಹಾರವಾಗಬೇಕು. ಆದ್ದರಿಂದ ರಸ್ತೆ ಸರಿಯಾಗುವ ತನಕ ಮತದಾನ ಮಾಡದಿರುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಗ್ರಾಮಸ್ಥರಾದ ಪ್ರಭಾಕರ ಶೆಟ್ಟಿ ಹೇಳಿದರು.