Siddeshwara Swamiji | ಜಾತಿಗೆ ಮೀಸಲಾಗದೆ ಎಲ್ಲಾ ಧರ್ಮದಲ್ಲೂ ಭಕ್ತಗಣ ಹೊಂದಿದ್ದ ಶತಮಾನದ ಸಂತ, ನಡೆದಾಡುವ ದೇವರು, ಪ್ರಚಾರದಿಂದ ದೂರವಿದ್ದ ವಿಜಯಪುರ ಶರಣ ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ

FB_IMG_1672719737177
Ad Widget

Ad Widget

Ad Widget

ವಿಜಯಪುರ: ಪ್ರವಚನ ಮೂಲಕ ವಿಶ್ವಕ್ಕೆ ಜ್ಞಾನ ಪ್ರಸಾರ ಮಾಡಿ ಶತಮಾನದ ಸಂತರೆನಿಸಿಕೊಂಡ, ನಡೆದಾಡುವ ದೇವರು, ಸರಳತೆಯ ಸಾಕಾರಮೂರ್ತಿ, ಪ್ರಚಾರದಿಂದ ದೂರವೇ ಇದ್ದ ನುಡಿದಂತೆ ನಡೆದ ಶರಣ ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿ (82) (Siddeshwara Swamiji) ಸೋಮವಾರ ಸಂಜೆ 6.05ಗಂಟೆಗೆ ಇಹಲೋಕ ತ್ಯಜಿಸಿದರು.

Ad Widget

ಪ್ರಸ್ತುತ ದಿನಗಳಲ್ಲಿ ಜಾತಿಗೊಂದು, ಜನಾಂಗಕ್ಕೊಂದು ಪೀಠ, ಆಶ್ರಮ, ಮಠ ಕಟ್ಟಿ ಮೆರೆಯುತ್ತಿರುವ ಸ್ವಾಮೀಜಿ, ಸಂತರ, ಶರಣರ ನಡುವೆ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಮಾತ್ರ ವಿಶಿಷ್ಟ ಸ್ವಾಮೀಜಿಗಳಾಗಿ ಕಾಣಿಸುತ್ತಾರೆ.

Ad Widget

Ad Widget

Ad Widget

ಜಾತಿ, ಜನಾಂಗ, ಧರ್ಮಕ್ಕಿಂತ ಮಿಗಿಲಾಗಿ ಭಕ್ತರ ಮನದಲ್ಲಿ ನಡೆದಾಡುವ ದೇವರೆಂದೇ ಸಿದ್ದೇಶ್ವರ ಶ್ರೀಗಳು ನೆಲೆ ನಿಂತಿದ್ದಾರೆ. ಪ್ರಚಾರಕ್ಕಾಗಿ ಹಾತೊರೆಯುವ ಸ್ವಾಮೀಜಿಗಳಿರುವಾಗ ಶ್ರೀಗಳು ಪ್ರಚಾರದಿಂದ ದೂರವೇ ಇದ್ದವರು. ವಿವಾದ, ರಾಜಕೀಯ, ಸಂಘ-ಸಂಸ್ಥೆಗಳಿಂದ ಬಹು ಅಂತರ ಕಾಯ್ದುಕೊಂಡಿದ್ದ ಶ್ರೀಗಳು, ಯಾರನ್ನೋ ಓಲೈಸುವ, ಪರವಾಗಿ ಮಾತನಾಡುವಂತಹ ವ್ಯಕ್ತಿತ್ವವನ್ನು ಸಮಾಜದೆದುರು ಎಂದೂ ಪ್ರದರ್ಶಿಸಲಿಲ್ಲ.

Ad Widget

ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮೂರು ಬಾರಿ ಕಲಬುರಗಿ ಜಿಲ್ಲೆಗೆ ಆಗಮಿಸಿ ಜನರಿಗೆ ಪ್ರವಚನ ನೀಡಿ ಜ್ಞಾನದ ಬೆಳಕು ನೀಡಿದ್ದಾರೆ. ಕಲಬುರಗಿಯಲ್ಲಿ 2018 ರಲ್ಲಿ ಪ್ರವಚನಕ್ಕೆ ಆಗಮಿಸಿದಾಗಲೇ ಕೇಂದ್ರ ಸರಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ಆದರೆ, ಈ ಪ್ರಶಸ್ತಿಯನ್ನು ಅಂದು ಅತ್ಯಂತ ನಯವಾಗಿ, ಗೌರವಯುತವಾಗಿ ತಿರಸ್ಕರಿಸಿದ್ದರು.

Ad Widget

Ad Widget

ಶ್ರೀ ಸಿದ್ದೇಶ್ವರ ಸ್ವಾಮೀಜಿ ಇದುವರೆಗೆ ಯಾವುದೇ ಜಿಲ್ಲೆಗೆ ತೆರಳಿ ಮೂರು ಬಾರಿ ಪ್ರವಚನ ನೀಡಿಲ್ಲ. ಆದರೆ, ಕಲಬುರಗಿ ಜಿಲ್ಲೆಗೆ ಮಾತ್ರ ಮೂರು ಬಾರಿ ಪ್ರವಚನಕ್ಕೆ ಆಗಮಿಸಿದ್ದರು ಎಂಬುದು ವಿಶೇಷ. ಈ ಜ್ಞಾನಯೋಗಿಯ ಪ್ರವಚನ ದಿನಾಂಕ ಕೇಳಲು ಕನಿಷ್ಠ 5 ರಿಂದ 6 ವರ್ಷಗಳ ಮುಂಚೆಯೇ ಬುಕ್‌ ಮಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಬಿಟ್ಟರೆ ರಾಜ್ಯದ ಯಾವುದೇ ಕಡೆ ಮೂರು ಬಾರಿ ಪ್ರವಚನ ನೀಡಿಲ್ಲ ಎಂದು ಅವರನ್ನು ಹತ್ತಿರದಿಂದ ಕಂಡವರು ಹೇಳುತ್ತಾರೆ.

ಸಾಮಾನ್ಯರಲ್ಲೇ ಸಾಮಾನ್ಯರಂತೆ ಬದುಕಿದ ಸಿದ್ದೇಶ್ವರ ಶ್ರೀಗಳು ಭಕ್ತರಿಗೆ ಮಾತ್ರ ದೇವತಾ ಮನುಷ್ಯರಾಗಿದ್ದರು. ಯಾವಾಗಲೂ ಸಮ ಸಮಾಜಕ್ಕಾಗಿ ಮನ ಮಿಡಿಯುತ್ತಿದ್ದ ಶ್ರೀಗಳು ಭಕ್ತರಿಗೆ, ಸ್ವಾಮೀಜಿಗಳಿಗೆ ಸಾಕಷ್ಟು ಆದರ್ಶ ಗುಣಗಳನ್ನೇ ಬಿತ್ತಿದ್ದಾರೆ. ಯಾರೇ ಭಕ್ತರು ಹೋದರೂ ಆಶೀರ್ವಾದಿಸಿ ಕಳಿಸುತ್ತಿದ್ದರು. ಎಲ್ಲ ಧರ್ಮಗಳಲ್ಲೂ ಶ್ರೀಗಳನ್ನು ಆರಾಧಿಸುವ ಕೋಟಿ ಕೋಟಿ ಭಕ್ತಗಣವಿದೆ. ಅವರ ಪ್ರವಚನಗಳ ಸಾರವನ್ನು ಅಳವಡಿಸಿಕೊಂಡ ಎಷ್ಟೋ ಭಕ್ತರು ಜೀವನದಲ್ಲಿ ಬದಲಾವಣೆಯಾಗಿದ್ದಾರೆ. ಈಗ ಸುಂದರ ಬದುಕು ಸಾಗಿಸುತ್ತಿದ್ದಾರೆ. ಅವರ ವ್ಯಕ್ತಿತ್ವವೇ ಬೇರೆ ಇತ್ತು. ಯಾರಲ್ಲೂ ಕಾಣದಂತಹ ದೈವಿ ರೂಪವಿತ್ತು. ಒಂದರ್ಥದಲ್ಲಿಈ ಶತಮಾನದ ಮಾದರಿ ಸಂತ ಎಂದರೆ ಕಿಂಚಿತೂ ತಪ್ಪಾಗಲಾರದು.

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಸೈನಿಕ ಶಾಲೆ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳವಾರ ಬೆಳಗ್ಗೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5 ಗಂಟೆ ನಂತರ ಆಶ್ರಮದ ಆವರಣದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲು ಸರಕಾರ ಸಿದ್ಧತೆ ಕೈಗೊಂಡಿದೆ. ಸಿದ್ಧೇಶ್ವರ ಸ್ವಾಮೀಜಿ ಅವರು 2014ರಲ್ಲಿ ಬರೆಸಿದ್ದ ಅಂತಿಮ ಅಭಿವಂದನ ಪತ್ರದ ಸಾಲುಗಳು ಇಲ್ಲಿವೆ-

‘ ಬದುಕು ಅನುಭವಗಳ ಪ್ರವಾಹ. ಅದರ ಸಿರಿವಂತಿಕೆಯು ವಿಶ್ವ ಚಿಂತನೆ ಹಾಗೂ ಸತ್ಯ ಶೋಧನೆಗಳಿಂದ. ಅದರ ಸೌಂದರ್ಯವು ರಾಗ, ದ್ವೇಷ ರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ಸಾಧನೆ. ಅಂತಹ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ. ಅದು ಸ್ವ-ಪರ ನೆಮ್ಮದಿಗೆ ಕಾರಣ.

ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು. ಅದನ್ನು ರೂಪಿಸಿದವರು ಗುರುದೇವರು. ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸಹ- ಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು.

ನಿಸರ್ಗವು ಮೈಮನಸ್ಸುಗಳಿಗೆ ತಂಪನ್ನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿ ಬೆಳಗ ಹರಡಿವೆ. ಜಾಗತಿಕ ತತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಠಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ. ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ಉಪಕೃತ.

ಬದುಕು ಮುಗಿಯುತ್ತಿದೆ. ದೀಪ ಆರಿದಂತೆ. ತೆರೆ ಅಡಗಿದಂತೆ. ಮೇಘ ಕರಗಿದಂತೆ. ಉಳಿಯುವುದು ಬರೀ ಬಯಲು. ಮಹಾಮೌನ, ಶೂನ್ಯ ಸತ್ಯ. ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ; ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು. ಅದಕ್ಕಾಗಿ ಈ ಅಂತಿಮ ಅಭಿವಂದನ ಪತ್ರ.

ದೇಹದ ವಿಷಯದಲ್ಲಿ ಒಂದೆರೆಡು ಆಶಯಗಳು:

  • ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯರ್ಪಿತ ಮಾಡುವುದು
  • ಶ್ರಾದ್ದಿಕ ವಿಧಿ- ವಿಧಾನಗಳು ಅನಗತ್ಯ
  • ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು
  • ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು.

ಅಂತಿಮ ನೆನಹು

ಸತ್ಯವೂ ಇಲ್ಲ, ಅಸತ್ಯವೂ ಇಲ್ಲ.

ಸಹಜವೂ ಇಲ್ಲ, ಅಸಹಜವೂ ಇಲ್ಲ.

ನಾನೂ ಇಲ್ಲ, ನೀನೂ ಇಲ್ಲ. ಇಲ್ಲ, ಇಲ್ಲಎಂಬುದು ತಾನಿಲ್ಲ.

ಗುಹೇಶ್ವರನೆಂಬುದು ತಾ ಬಯಲು. ಅಂತ್ಯ ಪ್ರಣಮಾಂಜಲಿ !’

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: