ಅಯ್ಯೋಧ್ಯ: ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಉತ್ತರ ಪ್ರದೇಶ ಪ್ರವೇಶಿಸಿದೆ. ಈ ನಡುವೆ ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕ (Ram Temple Chief Priest) ಆಚಾರ್ಯ ಸತ್ಯೇಂದ್ರ ದಾಸ್ (Acharya Satyendra Das) ಅವರು ಈ ಯಾತ್ರೆಯನ್ನು ಶ್ಲಾಘಿಸಿದ್ದಾರಲ್ಲದೆ ಶ್ರೀ ರಾಮನ ಅನುಗ್ರಹ ಸದಾ ರಾಹುಲ್ ಗಾಂಧಿ ಮೇಲಿರಲಿದೆ ಎಂದಿದ್ದಾರೆ.
ಈ ಕುರಿತು ರಾಹುಲ್ ಗಾಂಧಿ ಅವರಿಗೆ ಸತ್ಯೇಂದ್ರ ದಾಸ್ ಪತ್ರ ಬರೆದಿದ್ದಾರೆ ಹಾಗೂ ದೇಶದಲ್ಲಿ ಒಗ್ಗಟ್ಟು ಮೂಡಿಸುವ ಈ ಯಾತ್ರೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
“ನಿಮ್ಮ ಈ ಯಾತ್ರೆಯ ಉದ್ದೇಶ ಈಡೇರಲಿ, ನಿಮ್ಮ ದೀರ್ಘಾಯುಷ್ಯಕ್ಕಾಗಿ ಆಶೀರ್ವದಿಸುತ್ತೇನೆ,” ಎಂದು ಆಚಾರ್ಯ ಸತ್ಯೇಂದ್ರ ದಾಸ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
“ನೀವು ಸರ್ವಜನ್ ಹಿತಯ್ ಸರ್ವಜನ್ ಸುಖಾಯ್” ಎಂಬ ಉದಾತ್ತ ಧ್ಯೇಯಕ್ಕಾಗಿ ಹೋರಾಡುತ್ತಿದ್ದೀರಿ. ಶ್ರೀ ರಾಮನ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ,” ಎಂದು ಅವರು ಆಶೀರ್ವದಿಸಿದ್ದಾರೆ.
“ಕೆಲವು ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ. ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಯಾತ್ರೆಗೆ ಶುಭಕೋರಿ ಎಂದು ನಾಯಕರು ಕೋರಿಕೊಂಡರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಶುಭಕೋರಿದ್ದೇನೆ,” ಎಂದು ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ಭಾರತದ ಗುಪ್ತಚರ ವಿಭಾಗ ಮತ್ತು ‘ರಾ’ (ರಿಸರ್ಚ್ & ಅನಲೈಸ್ ವಿಂಗ್) ಮಾಜಿ ಮುಖ್ಯಸ್ಥರಾದ ಎ.ಎಸ್ ದುಲತ್ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ನಡೆದಿದ್ದಾರೆ. ದಲುತ್ ಅವರು ನಿವೃತ್ತಿ ನಂತರ ಅವರು ವಾಜಪೇಯಿ ಸರ್ಕಾರದಲ್ಲಿ ಜಮ್ಮು ಕಾಶ್ಮೀರದ ಸಲಹೆಗಾರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದರು. ಇವರು ವಾಜಪೇಯಿ ಆಪ್ತರಲ್ಲಿ ಓರ್ವರಾಗಿದ್ದರು.