ಪುತ್ತೂರು : ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಗೃಹ ಸಚಿವ ಹಾಗೂ ಅಡಿಕೆ ಟಾಸ್ಕ್ ಪೊರ್ಸ್ ಸಮಿತಿ ಅಧ್ಯಕ್ಷರಾದ ಅರಗ ಜ್ಞಾನೇಂದ್ರರವರು ಅಡಿಕೆ ಕುರಿತಾಗಿ ನೀಡಿದ ಹೇಳಿಕೆ ವಾಸ್ತವಾಂಶದಿಂದ ಕೂಡಿದೆ ಎಂದು ತಿಳಿಸಿರುವ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಸಚಿವರ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ಆಹಾರದ ಬೆಳೆಯಲ್ಲ. ಅದು ಜಗಿದು ಉಗಿಯುವ ಪದಾರ್ಥ. ಇದರ ಉತ್ಪಾದನೆ ಜಾಸ್ತಿಯಾದಷ್ಟು ಅಪಾಯ ಇದೆ ಎಂದು ಈ ಹಿಂದೆ ಕ್ಯಾಂಪ್ಕೂ ಅಧ್ಯಕ್ಷರಾಗಿದ್ದ ರಾಮ್ ಭಟ್ ಆತಂಕ ವ್ಯಕ್ತಪಡಿಸಿದ್ದರು. ಅದೇ ರೀತಿಯ ಆತಂಕವನ್ನು ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವ್ಯಕ್ತಪಡಿಸಿದ್ದಾರೆ. ಅಡಿಕೆ ಬೆಳೆ ಜಾಸ್ತಿ ವಿಸ್ತರಣೆಯಾದಷ್ಟು ಕಷ್ಟ ಇದೆ. ರೈತರಿಗೆ ಮತ್ತು ಪಾರಂಪರಿಕ ಬೆಳೆಗಾರರಿಗೆ ಸಮಸ್ಯೆ ಬರಬಹುದು ಎಂದು ಹೇಳಿದ್ದಾರೆ ಹೊರತು ಅಡಿಕೆ ಬ್ಯಾನ್ ಆಗುತ್ತದೆ ಎಂದು ಹೇಳಿಲ್ಲ. ವಾಸ್ತವ ವಿಚಾರವನ್ನು ಅವರು ಜನರ ಮುಂದೆ ಇಟ್ಟಿದ್ದಾರೆ. ಎಂದು ತಿಳಿಸಿದರು.
ಕಳೆದ ವಾರ ಮುಕ್ತಾಯಗೊಂಡ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಅಡಿಕೆ ಕುರಿತಾದ ಚರ್ಚೆಯ ಸಂದರ್ಭ ಮಧ್ಯೆ ಪ್ರವೇಶಿಸಿ ಮಾತನಾಡಿದ ಅಡಕೆ ಬೆಳೆಗಾರರೂ ಆಗಿರುವ ಅರಗ ಜ್ಞಾನೇಂದ್ರರವರು “ ಅಡಿಕೆಗೆ ಭವಿಷ್ಯವಿಲ್ಲ. ಅದಕ್ಕೆ ಸರಕಾರ ಪ್ರೋತ್ಸಾಹ ಕೊಡಬಾರದು. ಅಡಿಕೆ ಬೆಳೆ ಸಿಕ್ಕಾಪಟ್ಟೆ ವಿಸ್ತರಣೆಯಾಗುತ್ತಿದ್ದು, ಇದರಿಂದಾಗಿ ಅಡಿಕೆಯ ಬೆಲೆ ಕುಸಿದು ಅಡಿಕೆ ಬೆಳೆಗಾರರಿಗೆ ಮಾರಕವಾಗಿ ಪರಿಣಮಿಸಲಿದ್ದು ,ಬೆಳೆಗಾರರು ಮುಂದಿನ 5-10 ವರ್ಷಗಳಲ್ಲಿ ಬೀದಿಗೆ ಬೀಳುವ ಸಾಧ್ಯತೆಯಿದೆ ಎಂದು ಹೇಳಿದರು.
ಇದರ ಕುರಿತಾಗಿ ಮಾತನಾಡಲು ಡಿ 2 ರಂದು ಪತ್ರಿಕಾಗೋಷ್ಟಿ ನಡೆಸಿದ ಶಾಸಕ ಮಠಂದೂರು “ಚುನಾವಣಾ ಜ್ವರ ಜಾಸ್ತಿಯಾಗುತ್ತಿದ್ದಂತೆ ಕಾಂಗ್ರೆಸಿನವರು ಅಡಿಕೆ ಬೆಳಗಾರರನ್ನು ಮತ ಬ್ಯಾಂಕಾಗಿ ವರ್ತಿಸುವ ಕಾರಣಕ್ಕಾಗಿ ಈಗ ರಸ್ತೆಗಿಳಿದಿದ್ದಾರೆ. ಅವರಿಗೆ ಅಡಿಕೆ ಬೆಳೆಗಾರರ ಮೇಲೆ ಆಸಕ್ತಿಯಿಲ್ಲ. ಅಡಿಕೆ ಬೆಳೆಗಾರರ ಮತದ ಮೇಲೆ ಆಸಕ್ತಿ . ಅಡಿಕೆ ಗೊನೆ ಮಾರ್ಗದಲಿಟ್ಟು ಪ್ರತಿಭಟನೆ ಮಾಡುವವರಿಗೆ ಅಡಿಕೆ ಗೊನೆಯಲ್ಲಿ ಆಗುತ್ತದೆ ಎಂದು ಗೊತ್ತಿದೆಯೋ ಇಲ್ಲವೋ ? ಎಂದು ವ್ಯಂಗ್ಯವಾಡಿದರು
ಅಡಿಕೆ ಬೆಳೆಗಾರರ ಹಿತ ಕಾಯಲು ಬಿಜೆಪಿ ಸರ್ಕಾರಗಳು, ಕ್ಯಾಂಪ್ಕೋ ಸಂಸ್ಥೆ, ಸಹಕಾರಿ ಭಾರತಿ ಸೇರಿದಂತೆ ಬಿಜೆಪಿಯ ಸಹಕಾರಿ ಸಂಘಗಳು ಏನೆಲ್ಲಾ ಮಾಡಿವೆ, ಅಡಿಕೆ ಬೆಳೆಗಾರರು ಪ್ರಸ್ತುತ ಒಳ್ಳೆಯ ಪರಿಸ್ಥಿತಿಯಲ್ಲಿರಲು ಕಾರಣರು ಯಾರು ಎಂಬುವುದು ಎಲ್ಲಾ ಜನತೆಗೆ ಗೊತ್ತಿದೆ. ಆದರೆ ಚುನಾವಣಾ ಜ್ವರ ಜಾಸ್ತಿಯಾಗುತ್ತಿದ್ದಂತೆ ಕಾಂಗ್ರೆಸಿನವರು ಅಡಿಕೆ ಬೆಳಗಾರರನ್ನು ಮತ ಬ್ಯಾಂಕಾಗಿ ವರ್ತಿಸುವ ಕಾರಣಕ್ಕಾಗಿ ಈಗ ರಸ್ತೆಗಿಳಿದಿದ್ದಾರೆ ಎಂದು ಟೀಕಿಸಿದರು.
ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ಮಾರುಕಟ್ಟೆಗೆ ಆತಂಕ ತರುವ ಪರಿಸ್ಥಿತಿಯನ್ನು ಕಾಂಗ್ರೆಸಿಗರು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಅಡಿಕೆ ಧಾರಣೆ ಕಡಿಮೆಯಾಗದಂತೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಅದಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಲಿದೆ ಎಂದರು.
ದ.ಕ. ಜಿಲ್ಲೆ ಆರ್ಥಿಕವಾಗಿ ಇಷ್ಟೊಂದು ಪ್ರಗತಿ ಸಾಧಿಸಲು ಇಲ್ಲಿನ ಆರ್ಥಿಕ ಬೆಳೆಯಾದ ಅಡಿಕೆಯೇ ಕಾರಣ. ಅಡಿಕೆಯನ್ನು ದ.ಕ, ಉಡುಪಿ, ಶಿವಮೊಗ್ಗ, ಕಾಸರಗೋಡು ಭಾಗದಲ್ಲಿ ಪಾರಂಪರಿಕ ಬೆಳೆಯಾಗಿ ಬೆಳೆಯಲಾಗುತ್ತಿದ್ದು, ಅಡಿಕೆ ತೋಟ ಮತ್ತು ಉತ್ಪಾದನೆ ಜಾಸ್ತಿಯಾದಲ್ಲಿ ಅಪಾಯವಿದೆ ಎಂಬ ವಿಚಾರವನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರೂ, ಅಡಿಕೆ ಬೆಳೆಗಾರರೂ ಆಗಿದ್ದ ಮಾಜಿ ಶಾಸಕ ರಾಮ ಭಟ್ ಅವರು 25 ವರ್ಷಗಳ ಹಿಂದೆಯೇ ಹೇಳಿದ್ದರು. ಇದೀಗ ಅಡಿಕೆ ಕೃಷಿ ತುಮಕೂರು, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಬಯಲು ಸೀಮೆಯಲ್ಲಿ ವಿಸ್ತರಿಸಿಕೊಂಡಿದೆ, ಈ ಹಿನ್ನಲೆಯಲ್ಲಿ ಅಡಿಕೆ ಟಾಸ್ಕ್‍ಫೋರ್ಸ್ ಸಮಿತಿಯ ರಾಜ್ಯಾಧ್ಯಕ್ಷರೂ ಆದ ರಾಜ್ಯದ ಗೃಹ ಸಚಿವರು ವಾಸ್ತವ ವಿಚಾರವನ್ನು ಮುಂದಿಟ್ಟಿದ್ದಾರೆ. ಅಡಿಕೆ ಬೆಳೆಗಾರರ ಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಇದನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಕ್ಕಿಳಿದಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೂರಕ್ಕೆ ನೂರರಷ್ಟು ಅಡಿಕೆ ಬೆಳೆಗಾರರ ಪರ ನಿಂತಿದೆ. ಅಡಿಕೆ ಆಮದು ನಿಲ್ಲಿಸುವ ಕೆಲಸ ಮಾಡಿದೆ. ಅಡಿಕೆ ಹಳದಿ ರೋಗ ಪರಿಹಾರವಾಗಿ ಪರ್ಯಾಯ ಬೆಳೆ ಪ್ರೋತ್ಸಾಹಿಸಲು 2020-21ನೇ ಸಾಲಿನ ಬಜೆಟ್‍ನಲ್ಲಿ ರಾಜ್ಯ ಸರ್ಕಾರ ರೂ. 25 ಕೋಟಿ ಇಟ್ಟಿದೆ. ಹಳದಿ ರೋಗದ ಸಂಶೋಧನೆಗಾಗಿ ಸಿಪಿಸಿಆರ್‍ಐಗೆ ರೂ.1.50 ಕೋಟಿ ನೀಡಿದೆ. ಅಡಿಕೆ ಎಲೆಚುಕ್ಕಿ ರೋಗಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಿದೆ. ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವ ಉದ್ದೇಶದಿಂದ ಎಪಿಎಂಸಿ ತೆರಿಗೆಯನ್ನು ಶೇ.3ರಿಂದ 0.75ಕ್ಕೆ ಇಳಿಸಿದೆ. ಅಡಿಕೆ ಕೃಷಿ ತುಂತುರು ನೀರಾವರಿಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.90 ಮತ್ತು ಇತರರಿಗೆ ಶೇ.75 ಸಬ್ಸಿಡಿ, ಬೋರ್ಡೋ ಮಿಶ್ರಣಕ್ಕೆ ಸಬ್ಸಿಡಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಅಡಿಕೆ ಬೆಳೆಗಾರರ ಹಿತ ಕಾಯುವ ಎಲ್ಲಾ ಕೆಲಸಗಳನ್ನು ಸರ್ಕಾರ ಮಾಡಿದೆ ಎಂದರು.
ಇದೀಗ ಅಡಿಕೆ ಬೆಳೆಗಾರರ ಬಗ್ಗೆ ಮೊಸಳೆ ಕಣ್ಣೀರಿಡುತ್ತಾ ಅಡಿಕೆ ವಿಚಾರದಲ್ಲಿ ಆತಂಕ ಸೃಷ್ಟಿಸುವ ಕೆಲಸ ಮಾಡುತ್ತಿರುವ ಕಾಂಗ್ರೆಸಿಗರು ಇದಕ್ಕೆ ಮೊದಲು ಅಡಿಕೆ ಬೆಳೆಗಾರರ ಪರವಾಗಿ ಎಷ್ಟು ಹೋರಾಟ ಮಾಡಿದ್ದಾರೆ ಎಂಬುವುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಪುತ್ತೂರು ನಗರಸಭೆಯ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರ ಯೋಜನಾಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿನೆ ಮತ್ತು ನಿತೀಶ್‍ಕುಮಾರ್ ಶಾಂತಿವನ, ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ಶೆಟ್ಟಿ ಮತ್ತು ಯುವರಾಜ್ ಪೆರಿಯತ್ತೋಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.