ಬೆಂಗಳೂರು, ಜ.1: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಸೇರಿದಂತೆ ಆರು ಜನರ ಹೆಸರನ್ನು ಬರೆದಿಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ನೆಟ್ಟಿಗೆರೆ ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ನಿವಾಸಿಯಾಗಿರುವ ಪ್ರದೀಪ್ (47) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ತಿಳಿದು ಬಂದಿದೆ.
ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಆರು ಜನರ ಹೆಸರನ್ನು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದ್ದು, ಕಾರಿನಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಮಾಜಿ ಸಚಿವ ಅರವಿಂದ ಲಿಂಬಾವಳಿ, ಜಿ.ರಮೇಶ್ ರೆಡ್ಡಿ, ಕೆ.ಗೋಪಿ, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಹೆಸರು ಉಲ್ಲೇಖಿಸಿ 6 ಜನರ ಮೇಲೆ ಕ್ರಮ ಜರುಗಿಸಿ ನನ್ನ ಸಾವಿಗೆ ನ್ಯಾಯ ಒದಗಿಸಿ ಎಂದು ಪ್ರದೀಪ್ ಡೆತ್ನೋಟ್ನಲ್ಲಿ ಮನವಿ ಮಾಡಿದ್ದಾರೆ. ಹೆಸರಿನ ಮುಂದೆ ಮೊಬೈಲ್ ನಂಬರ್ ಬರೆದು ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಣಕಾಸಿನ ವ್ಯವಹಾರದಲ್ಲಿ ವಂಚನೆ ಸಂಬಂಧ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆ.ಗೋಪಿ ಮತ್ತು ಸೋಮಯ್ಯ ಅವರಿಗೆ ಅರವಿಂದ ಲಿಂಬಾವಳಿ ಅವರು ಬೆಂಬಲ ನೀಡಿದ್ದಾರೆ ಎಂದು ಪ್ರದೀಪ್ ಹೇಳಿದ್ದಾರೆ.