ಬಂಟ್ವಾಳ : ಅಡಿಕೆ ಬೆಳೆ ಹಾಗೂ ಬೆಳೆಗಾರರ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ (Araga Arecanut Statement )ಸದನದಲ್ಲಿ ಹಗುರವಾಗಿ ಮಾತನಾಡಿದರೂ ಖಂಡನೆ ವ್ಯಕ್ತಪಡಿಸದೆ ಮೌನವಾಗಿರುವ ಕರಾವಳಿಯ ಶಾಸಕರು ರಾಜೀನಾಮೆ ನೀಡಿ ಮನೆಗೆ ಹೋಗುವುದು ಸೂಕ್ತ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿಯಿಂದ ಶನಿವಾರ ಬಿ.ಸಿ.ರೋಡಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಭೂ ಮಸೂದೆ ಬಳಿಕ ಕರಾವಳಿಯಲ್ಲಿ ಅಡಿಕೆ ಬೆಳೆಗಾರರ ಸಂಖ್ಯೆ ಹೆಚ್ಚಾಗಿದ್ದು, ಅಡಿಕೆ ಬೆಳೆಗಾರರು ನಿರಂತರ ಒಂದಿಲ್ಲ ಒಂದು ಸಂಕಷ್ಟವನ್ನು ಎದುರಿಸುತ್ತಾ ಬಂದಿದ್ದಾರೆ. ಪ್ರತಿ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಸರಕಾರ ಅಡಿಕೆ ಬೆಳೆಗಾರರಿಗೆ ನೆರವು ನೀಡುತ್ತಾ ಬಂದಿದೆ. ಹೀಗಾಗಿ ಈ ಬೆಳೆ ಇಂದಿಗೂ ಉತ್ತಮ ರೀತಿಯಲ್ಲಿ ಮುಂದುವರಿದಿದೆ ಎಂದರು.
ರಾಜ ವ್ಯಾಪಾರಿ ಆದರೆ ಪ್ರಜೆಗಳು ಬಿಕಾರಿ ಆಗಲಿದ್ದಾರೆ. ಅದನ್ನು ಇಂದು ನಾವು ದೇಶದಲ್ಲಿ ಕಾಣುತ್ತಿದ್ದೇವೆ. ಮಾರ್ವಾಡಿಗಳಿಗೆ ನೆರವಾಗಲು ದೇಶದ ರೈತರನ್ನು ಬಲಿ ಕೊಡುವ ಕೆಲಸವನ್ನು ಕೇಂದ್ರ, ರಾಜ್ಯದ ಬಿಜೆಪಿ ಸರಕಾರ ಮಾಡುತ್ತಿದೆ. ಇಡೀ ದೇಶ ಮಾರ್ವಾಡಿಗಳ ಕೈಯಲ್ಲಿ ನಲುಗುತ್ತಿದೆ ಎಂದರು.
ಅಡಿಕೆ ಬೆಳೆಗೆ ಹಳದಿ, ಕೊಳೆ ರೋಗ ಬಂದಾಗ ಕಾಂಗ್ರೆಸ್ ಸರಕಾರ ಸೂಕ್ತ ಪರಿಹಾರ ನೀಡಿ ಅಡಿಕೆ ಬೆಲೆಗಾರರಿಗೆ ಶಕ್ತಿ ತುಂಬಿದ ಕೆಲಸ ಮಾಡಿದೆ. ಸಂಕಷ್ಟದಲ್ಲಿ ಇರುವ ಅಡಿಕೆ ಬೆಳೆಗಾರರಿಗೆ ನೆರವಾಗಬೇಕಾದ ಸರಕಾರ ಅಡಿಕೆ ಬೆಳೆಗೆ ಭವಿಷ್ಯ ಇಲ್ಲ ಎಂದು ಹೇಳುತ್ತಿದೆ. ಅಡಿಕೆ ಬೆಳೆಗಾರರ ವಿರುದ್ಧ ಗೃಹ ಸಚಿವ ಸದನದಲ್ಲಿ ನೀಡಿರುವ ಹೇಳಿಕೆ ಆತಂಕ ಉಂಟು ಮಾಡಿದೆ ಎಂದು ಹೇಳಿದರು.
ಅಡಿಕೆ ಬೆಳೆಗಾರರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅಡಿಕೆ ಬೆಳೆ ನಷ್ಟ ಆದವರಿಗೆ ಸೂಕ್ತ ಪರಿಹಾರ ನೀಡಬೇಕು. ದೇಶದ ರೈತರನ್ನು ಅವರಷ್ಟಕ್ಕೆ ಬದುಕಲು ಬಿಡಿ ಎಂದು ನಾನು ಕೇಂದ್ರ ಮತ್ತು ರಾಜ್ಯ ಸರಕಾರದ ಜೊತೆ ಮನವಿ ಮಾಡುತ್ತಿದ್ದೇನೆ. ರೈತರ ಬದುಕಲ್ಲಿ ಆಟವಾಡುವ ಕೆಲಸ ಮುಂದುವರಿಸಿದರೆ ಹೋರಟ ಹೆಚ್ಚಿಸುವ ಅನಿವಾರ್ಯ ಬರಲಿದೆ ಎಂದರು.