ಬೆಂಗಳೂರು: ಪಹಣಿ(RTC) ಬೆಲೆಯನ್ನು ಒಮ್ಮೆಲೆ ಹತ್ತು ರೂಪಾಯಿ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಗ್ರಾಮೀಣರಿಗೆ ಬಿಗ್ ಶಾಕ್ ನೀಡಿದೆ. ಈ ಮೊದಲು ಹದಿನೈದು ರೂಪಾಯಿ ಪಾವತಿಸಿ ರೈತರು ಪಹಣಿ ಪಡೆಯುತ್ತಿದ್ದು, ಕಳೆದೆರಡು ದಿನಗಳಿಂದ ಇದರ ಬೆಲೆಯನ್ನು ರೂಪಾಯಿ 25 ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ಭೂ ಹಿಡುವಳಿ ರೈತ ಸಮುದಾಯ ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೂ ಪಹಣಿ ಕಡ್ಡಾಯಗೊಳಿಸಲಾಗಿದೆ.
ಆಸ್ತಿ ಮಾರುವಾಗ, ಸಬ್ಸಿಡಿಗೆ ಅರ್ಜಿ ಸಲ್ಲಿಸಲು, ನರೇಗಾ, ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದೂ ಸೇರಿ ಒಂದಲ್ಲ ಒಂದು ಕಾರಣಕ್ಕೆ ಪಹಣಿ ಸಲ್ಲಿಸಲೇಬೇಕಾಗಿದೆ. ತಹಸೀಲ್ದಾರ್ ಕಚೇರಿ, ಇಲ್ಲವೇ ನಾಡಕಚೇರಿಗೆ ಹೋದರೆ ಪಹಣಿ ಪಡೆಯಲು ಸಾಲುಗಟ್ಟಿದ ರೈತರ ದೊಡ್ಡ ಸರತಿ ಸಾಮಾನ್ಯವಾಗಿ ಕಾಣಸಿಗುತ್ತದೆ.
ಮೊದಲು ಗ್ರಾಮ ಲೆಕ್ಕಿಗರು ಕೈಯಲ್ಲಿ ಪಹಣಿ ಬರೆದುಕೊಡುವಾಗ ಸ್ಟಾಂಪ್ ಅಂಟಿಸಿ ಕೊಡುವಲ್ಲಿಂದ ಇಷ್ಟರವರೆಗೆ 15 ರೂಪಾಯಿ ನಿಗದಿಮಾಡಲಾಯಿತು. ಇದೀಗ ಒಮ್ಮೆಲೆ ಮತ್ತೆ 10 ರೂಪಾಯಿ ಜಾಸ್ತಿ ಮಾಡಿ ಪಹಣಿ ದರ 25 ರೂಪಾಯಿಕ್ಕೇರಿಸಲಾಗಿದೆ.
ಮೊದಲು ಎಷ್ಟೇ ಪುಟಗಳಿದ್ದರೂ 15 ರೂ ಇತ್ತು ಇನ್ನು ಮುಂದೆ ನಾಲ್ಕು ಪೇಜ್ ಗೆ 25ರೂಪಾಯಿ ಇದ್ದರೆ ಮುಂದುವರಿದ ಪುಟ ಒಂದಕ್ಕೆ 5 ರೂ ಹೆಚ್ಚಳ ಮಾಡಲಾಗಿದೆ. ಮ್ಯೂಟೇಷನ್ ಮೊದಲು ಎಷ್ಟೇ ಪುಟ ಇದ್ದರೂ 25 ರೂ ಗೆ ಸಿಗ್ತಿತು. ಈಗ ನಾಲ್ಕರ ನಂತರದ ಪ್ರತಿ ಪುಟಕ್ಕೆ 5 ರೂ. ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ದರ ಹೆಚ್ಚಳದ ಪ್ರಮಾಣವನ್ನು ಭೂಮಿ ಸಾಫ್ಟ್ ವೇರ್ ಗೆ ದಾಖಲಿಸಲಾಗಿದೆ. ಪಹಣಿ ತೆಗೆದು ರೈತರಿಗೆ ಕೊಡುವಾಗಲೇ ರೂ.25 ಮೊತ್ತ ಕಂಪ್ಯೂಟರ್‌ನಲ್ಲಿ ಜನರೇಟ್ ಆಗುತ್ತಿದೆ. ಕಾಮನ್ ಸರ್ವಿಸ್ ಸೆಂಟರ್(ಖಾಸಗಿಯಲ್ಲಿ)ಪಹಣಿ ಪಡೆಯುವಾಗ ಈ ಮೊದಲು ಅವರು 5 ರೂ ಸೇವಾ ಶುಲ್ಕ ವಸೂಲು ಮಾಡುತ್ತಿದ್ದರು. ಈಗ ಮೂವತ್ತು ರುಪಾಯಿ ಪಾವತಿಸಿ ಪಹಣಿ ಪಡೆಯಬೇಕಾಗಿದೆ. ಇದು ಹೊಸ ವರ್ಷದಿಂದ ಅನ್ವಯವಾಗಲಿದೆ.
ಸರ್ಕಾರದ ಎಲ್ಲಾ ಸೌಲಭ್ಯಗಳಿಗೆ ಮತ್ತು ಸಹಕಾರಿ ಬ್ಯಾಂಕ್ ನ ವ್ಯವಹಾರಕ್ಕೆ ಪಹಣಿ(RTC) ಕಡ್ಡಾಯವಾಗಿ ಕೊಡಬೇಕಾಗುತ್ತದೆ.