ಕ್ರಿಕೆಟ್ ಆಟಗಾರರು, ಅಥಾವ ಜಾಗತಿಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಕ್ರೀಡಾಳುಗಳು ಪ್ರಖ್ಯಾತ ಉತ್ಪನ್ನಗಳ ರೂಪದರ್ಶಿಗಳಾಗವುದು ಸರ್ವೆ ಸಾಮಾನ್ಯ ವಿಚಾರ . ಆದರೇ ತುಳುನಾಡಿನಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಜಾನಪದ ಕ್ರೀಡೆ ಕಂಬಳದ ಕೋಣದ ದಾಖಲೆಯ ಓಟಗಾರರೊಬ್ಬರು ತಾನು ಕೂಡ ಯಾವುದೇ ಕ್ರಿಡಾಪಟುವಿಗೆ ಕಮ್ಮಿ ಇಲ್ಲ ಎನ್ನುವ ಹಾಗೇ ಉತ್ಪನ್ನವೊಂದರ ರೂಪದರ್ಶಿಯಾಗಿ ಕಂಗೋಳಿಸಿದ್ದಾರೆ. ಅವರೇ ಕಂಬಳ ಕೂಟದ ಉಸೇನ್ ಬೋಲ್ಟ್ ಖ್ಯಾತಿಯ 30ರ ಹರೆಯದ ಮಿಜಾರು ಶ್ರೀನಿವಾಸ ಗೌಡ (30).
ಉಡುಪಿಯ ಪ್ರಸಿದ್ಧ ಚಿನ್ನಾಭರಣ ಮಾರಾಟ ಸಂಸ್ಥೆ ಆಭರಣ ಇಂತಹದೊಂದು ಅವಕಾಶವನ್ನು ಕಂಬಳ ಓಟಗಾರನಿಗೆ ನೀಡಿದೆ. ಕರ್ನಾಟಕ, ಕರಾವಳಿಯ ಜಾಹೀರಾತು ಇತಿಹಾಸದಲ್ಲೇ ಕಂಬಳ, ಕೋಣ, ಓಟಗಾರನಿಗೆ ರೂಪದರ್ಶಿಯ ಮಾನ್ಯತೆ ಸಿಕ್ಕಿದ್ದು ಇದೇ ಮೊದಲು. ಕರಾವಳಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಬದಿ ಶೋಭಿಸುತ್ತಿರುವ ಆಭರಣದ ಜಾಹೀರಾತಿನಲ್ಲಿ ಮೈ ತುಂಬಾ ಅಕರ್ಷಕ ಚಿನ್ನಾಭರಣ ತೊಟ್ಟು ಅವರು ಕಂಗೋಳಿಸುತ್ತಿದ್ದಾರೆ . ಅವರ ಜತೆಗೆ ಕಂಬಳದ ಸ್ಟಾರ್ ಕೋಣ ಅಪ್ಪು ಅಲಂಕೃತಗೊಂಡು ಮಿರಿ ಮಿರಿ ಮಿಂಚುತ್ತಿದೆ.
ಆಭರಣ ಸಂಸ್ಥೆಯ ಜಾಹೀರಾತು, ಪ್ರಚಾರ ರಾಯಭಾರಿಯಾದ ಶ್ರೀನಿವಾಸ ಗೌಡ ಬೆರಗುಗಣ್ಣಿಂದ ನೋಡುವ ಕೋಣದ (ಅಪ್ಪು) ಮೂಗುದಾರ ಹಿಡಿದಿದ್ದಾರೆ. ಕೈಗಳ ಐದು ಬೆರಳಲ್ಲೂ ವಿವಿಧ ವಿನ್ಯಾಸ, ಗಾತ್ರದ ಚಿನ್ನದುಂಗುರ, ಕಡಗ ಹಾಗೂ ಕೊರಳಲ್ಲಿ ತಿರುಪತಿ ತಿಮ್ಮಪ್ಪನ ಪೆಂಡೆಂಡ್ ಸಹಿತ ಮೂರು ಭಾರೀ ಗಾತ್ರದ ಚಿನ್ನದ ಸರ ಧರಿಸಿ ಜನರ ಗಮನ ಸೆಳೆಯುತ್ತಿದ್ದಾರೆ.
ಆರು ತಿಂಗಳ ಹಿಂದೆ ಆಭರಣ ಜಾಹೀರಾತಿನ ಫೋಟೋ ಶೂಟ್ ನಡೆದಿತ್ತು. ಮಿಜಾರು ಶ್ರೀನಿವಾಸ ಗೌಡ 2022ನೇ ಸಾಲಿನ ಐದು ಕಂಬಳಗಳಲ್ಲಿ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ. ಕೋಣ ಅಪ್ಪು ಕಳೆದ ಐದು ವರ್ಷಗಳಲ್ಲಿ 75 ಕಂಬಳಗಳಲ್ಲಿ ಪಾಲ್ಗೊಂಡು ಬರೋಬ್ಬರಿ 76 ಪದಕಗಳಿಗೆ ಕೊರಳೊಡ್ಡಿದೆ. ಅಪ್ಪು ಕೋಣದ ಮಾಲಕ ಹಾಗು ಶ್ರೀನಿವಾಸ ಗೌಡರ ಯಜಮಾನ ಮಿಜಾರು ಪ್ರಸಾದ್ ಶೆಟ್ಟಿ,ಯವರಿಗೂ ಇದು ಖುಷಿಯ ವಿಚಾರವಾಗಿದೆ.
ಮೂಡಬಿದಿರೆಯ ಮಿಜಾರು ಅಶ್ವತ್ಥಪುರದ ಕೂಲಿ ಕಾರ್ಮಿಕ ಡೊಂಬಯ್ಯ, ದಿ.ಗಿರಿಜಾ ದಂಪತಿ ಪುತ್ರರಾದ ಶ್ರೀನಿವಾಸ ಗೌಡ 2020, ಫೆಬ್ರವರಿಯಲ್ಲಿ ಕಿನ್ನಿಗೋಳಿ ಸಮೀಪದ ಐಕಳ ಕಂಬಳದಲ್ಲಿ 142.5 ಮೀ.ಕಂಬಳ ಕರೆಯನ್ನು 13.62 ಸೆಕೆಂಡ್ಸ್ನಲ್ಲಿ ಓಡಿದ್ದರು. ಇದನ್ನು 100 ಮೀಟರಿಗೆ ಪರಿವರ್ತಿಸಿ 2009ರಲ್ಲಿ ಜಮೈಕಾದ ಉಸೇನ್ ಬೋಲ್ಟ್ ಜರ್ಮನಿಯ ಟ್ರ್ಯಾಕ್ ಆ್ಯಂಡ್ ಫೀಲ್ಡ್ ನಲ್ಲಿ 100ಮೀ. ಓಟವನ್ನು 9.58 ಸೆಕೆಂಡ್ಸ್ ನಲ್ಲಿ ಪೂರೈಸಿ ಮಾಡಿದ್ದ ದಾಖಲೆಯನ್ನು ಕಂಬಳ ಗದ್ದೆಯಲ್ಲಿ 9.55 ಸೆಕೆಂಡ್ಸ್ನಲ್ಲಿ ಬರಿಗಾಲಿನಿಂದ ಓಡಿದ ಶ್ರೀನಿವಾಸ್ ಗೌಡ ಮುರಿದಿದ್ದಾಗಿ ಪರಿಗಣಿಸಲಾಗಿತ್ತು.
ಕೇಂದ್ರ ಕ್ರೀಡಾ ಸಚಿವರಾಗಿದ್ದ ಕಿರಣ್ ರಿಜಿಜು ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕೋಚ್ಗಳಿಂದ ಶ್ರೀನಿವಾಸ ಗೌಡರಿಗೆ ಓಟದ ತರಬೇತಿ ಕೊಡಿಸುವ ಭರವಸೆ ನೀಡಿದ್ದರು. ಆದರೆ ಶ್ರೀನಿವಾಸ ಗೌಡ ಆನ್ ಟ್ರ್ಯಾಕ್ಗಿಂತ ಕಂಬಳ ಗದ್ದೆಯಲ್ಲಿ ಓಟ ಭಿನ್ನವೆಂದು ನಿರಾಕರಿಸಿದ್ದರು.
ರಾಜ್ಯ ಸರಕಾರ 3 ಲಕ್ಷ ರೂ. ನೆರವಿನ ಚೆಕ್ ನೀಡಿತ್ತು. ಈ ಮಧ್ಯೆ ಬಜಗೋಳಿಯ ನಿಶಾಂತ್ ಶೆಟ್ಟಿ 2020 ಫೆಬ್ರವರಿ ತಿಂಗಳಲ್ಲೇ ವೇಣೂರು ಕಂಬಳದಲ್ಲಿ 9.51 ಸೆಕೆಂಡ್ಸ್ನಲ್ಲಿ ಓಡಿ ಶ್ರೀನಿವಾಸ ಗೌಡರ ದಾಖಲೆ ಮುರಿದಿದ್ದರು. ನಂತರ ಪುನಃ 2021ರ ಮಾರ್ಚ್ನಲ್ಲಿ ಶ್ರೀನಿವಾಸ ಗೌಡರು ವೇಣೂರು ಕಂಬಳದಲ್ಲಿ 125 ಮೀ. ಕಂಬಳ ಕರೆಯನ್ನು 11.22 ಸೆಕೆಂಡ್ಸ್ನಲ್ಲಿ ಓಡಿದ್ದು ಇದನ್ನು 100 ಮೀಟರಿಗೆ ಪರಿವರ್ತಿಸಿದಾಗ 8.96 ಸೆಕೆಂಡ್ಸ್ ಗಳ ದಾಖಲೆಯಾಗಿ ಪರಿಗಣಿಸಲಾಗಿತ್ತು. ಬಳಿಕ ಕಕ್ಕೆಪದವು ಕಂಬಳದಲ್ಲಿ 100 ಮೀಟರನ್ನು 8.78 ಸೆಕೆಂಡ್ಸ್ ನಲ್ಲಿ ಓಡಿ ಹೊಸ ದಾಖಲೆ ಬರೆದಿದ್ದಾರೆ.