ಮಂಗಳೂರು: ಅಡಿಕೆ(Arecanut) ಪ್ರೋತ್ಸಾಹ ಬೇಡ ಎನ್ನುವ ಗೃಹ ಸಚಿವ ಅರಗ ಜ್ಞಾನೇಂದ್ರರು ಆಮದು ಮಾಡಿಕೊಳ್ಳುವುದು ನಿಲ್ಲಿಸಲಿ , ಕಳ್ಳಸಾಗಣಿಕೆಯಲ್ಲಿ ಬರುವ ಅಡಿಕೆ ನಿಲ್ಲಿಸಲಿ , ಗೃಹ ಸಚಿವರ ಹೇಳಿಕೆ ಹಿಂದೆ ಭಾರಿ ದೊಡ್ಡ ಷಡ್ಯಂತ್ರವಿದೆ. ಹೇಳಿಕೆಯಿಂದ ಅಡಿಕೆ ಬೆಲೆ ಕುಸಿಯಲಿದೆ ಈ ಬಗ್ಗೆ ಶನಿವಾರ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.
ಕೋವೀಡ್ ಸಂದರ್ಭ ಬೇರೆ ಎಲ್ಲಾ ಕಡೆ ಸಮಸ್ಯೆ ಆದರೂ ದಕ್ಷಿಣ ಕನ್ನಡದಲ್ಲಿ ಏನೂ ಸಮಸ್ಯೆ ಆಗಿರಲಿಲ್ಲ ಅದಕ್ಕೆ ಕಾರಣ ಅಡಿಕೆ ಬೆಲೆ. ಅಡಿಕೆ ಪ್ರೋತ್ಸಾಹ ಬೇಡ ಎನ್ನುವ ಗೃಹ ಸಚಿವರ ಸದನದಲ್ಲೇ ಹೇಳಿಕೆ ಹಿಂದೆ ಹಿಂದೆ ಯಾರದೋ ಒತ್ತಾಯ ಇದೆ ಎಂದು ರಮಾನಾಥ ರೈ ಹೇಳಿದರು.
ಈಗಾಗಲೇ ಅಡಿಕೆಯನ್ನು ಬಾಂಗ್ಲಾದೇಶ, ಭೂತಾನ್, ವಿಯೇಟ್ನಾಂ ನಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಅಡಿಕೆ ಬೆಲೆ ಕುಸಿತ ಪ್ರಾರಂಭವಾಗಿದೆ. ಅಡಿಕೆ ಬಗ್ಗೆ ಅರಗ ಹೇಳಿಕೆಯ ಹಿಂದೆ ದೊಡ್ಡ ಕುಲಗಳ ಕೈವಾಡವಿದೆ ಎಂದು ಆರೋಪಿಸಿದರು.
ಒಂದು ಹೇಳಿಕೆ ಮಾರುಕಟ್ಟೆಯ ಮೇಲೆ ಹೇಗೆ ದುಷ್ಪರಿಣಾಮ ಬೀರಬಹುದು ಎಂದು ಗೊತ್ತಿದೆ. ಈಗಾಗಲೇ ಅಡಿಕೆ ಕೃಷಿಕರು ಭಯಭೀತರಾಗಿದ್ದಾರೆ ಎಂದರು.
ಅಡಿಕೆ ವಿಸ್ತರಣೆ ಬಗ್ಗೆ ಭಯಪಡುವುದು ಬಿಟ್ಟು , ಅಡಿಕೆಗೆ ಬಂದಿರುವ ಮಾರಕ ಎಲೆಚುಕ್ಕಿ ರೋಗಕ್ಕೆ ಔಷಧಿ ಬಗ್ಗೆ ಯೋಚಿಸಬೇಕು ಎಂದರು.
ಗೃಹಸಚಿವರ ಹೇಳಿಕೆಗಳು ರೈತರಿಗೆ ಮರಣಶಾಸಕಗಳಾಗುವ ಭಯ ಕಾಡುತ್ತಿದೆ ಎಂದು ರಮಾನಾಥ ರೈ ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ರೈತರ ವಿರೋಧಿ ಪಕ್ಷ ಅದೇನಿದ್ದರು ಬಂಡವಾಳಶಾಯಿಗಳ ಪಕ್ಷ ಎಂದ ರೈಗಳು, ಈ ಹೇಳಿಕೆ ಹಿಂದೆ ಇದೇ ಅನುಮಾನ ವ್ಯಕ್ತವಾಗುತ್ತಿದೆ ಎಂದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೊಳೆರೋಗ ಪಿಡೀತ ಅಡಿಕೆ ಕೃಷಿಕರ ಅಡಿಕೆಗೆ ಕ್ಯಾಂಪ್ಕೋದಲ್ಲೂ ಬೆಂಬಲ ಬೆಲೆ ಘೋಷಿಸಿದ್ದೆವು ಎಂದರು.
ಡಿ.31 ರಂದು ಕಾಂಗ್ರೆಸ್ಸಿನ ಕಿಶನ್ ಸೆಲ್ ಮೂಲಕ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರದಲ್ಲೂ ಪ್ರತಿಭಟನೆ ಮಾಡುತ್ತೇವೆ ಎಂದು ರಮಾನಾಥ ರೈಗಳು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹಾಗೂ ಇತರರು ಉಪಸ್ಥಿತರಿದ್ದರು.