ಅಡಿಕೆ ಬೆಳೆಗೆ (Arecanut) ಎಲೆಚುಕ್ಕಿ ರೋಗ, ಹಳದಿ ರೋಗ ಅದರ ಜೊತೆಗೆ ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ. ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಹೋರಾಟದ ಮಾರ್ಗವೇ ಅನಿವಾರ್ಯವಾದರೆ ಮುಂಚೂಣಿಯಲ್ಲಿರಲು ನಾನು ಸಿದ್ಧ ಎಂದು ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಆಪ್ತ, ಪುತ್ತೂರು ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ತನ್ನ ಫೇಸ್ಬುಕಲ್ಲಿ ಪೋಸ್ಟ್ ಹಾಕಿದ್ದಾರೆ.
ಅಡಿಕೆ ಬರೀ ಜಗಿದು ಉಗುಳಲಿಕ್ಕೆ ಇರುವಂಥದ್ದು… ಅದರಿಂದ ಹೊಟ್ಟೆ ತುಂಬುವುದಿಲ್ಲ ಅಂತ ಅಡ್ಡ ಮಾತಾಡುವವರಿದ್ದಾರೆ… ಆದರೆ ಇವತ್ತು ನಾನು ತಿನ್ನುವ ಪ್ರತಿಯೊಂದು ಅನ್ನದ ಅಗುಳಿನಲ್ಲೂ ಅಡಿಕೆಯ ಋಣ ಇದೆ. ಇವತ್ತು ನಾನು ಉದ್ಯಮಿಯಾಗಿ ಬೆಳೆಯಲಿಕ್ಕೂ ಅಡಿಕೆ ಎಂಬ ಬೆಳೆಯಿಂದ ಬಂದ ಆರ್ಥಿಕ ಶಕ್ತಿಯೇ ಮೂಲಾಧಾರವಾಗಿದೆ. ಈ ಹೊತ್ತಿಗೆ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಕೊಡಿದ್ದರೂ ನಾನು ಇವತ್ತಿಗೂ ಮೂಲತಃ ಕೃಷಿಕನೇ… ಅದರಲ್ಲೂ ಹೆಚ್ಚಾಗಿ ಅಡಿಕೆ ಕೃಷಿಕನೇ.
ಇವತ್ತು ಅಡಿಕೆ ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಆತನ ತೋಟಗಳಿಗೆ ಎಲೆಚುಕ್ಕಿ ರೋಗ, ಹಳದಿ ರೋಗದಂಥಾ ಮಹಾಮಾರಿ ಬಂದೆರಗಿದೆ. ನೋಡನೋಡುತ್ತಲೇ ಕಣ್ಣೆದುರಿಗೆ ಹಚ್ಚ ಹಸಿರಾಗಿ ನಳನಳಿಸುತ್ತಿದ್ದ ಅಡಿಕೆ ಮರದ ಗರಿಗಳಲ್ಲಿ ಕಪ್ಪು ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳತೊಡಗಿತು… ಕೊಂಚ ಸಮಯದಲ್ಲಿ ಇಡೀ ಗರಿಯೇ ಒಣಗಿ ಕೊನೆಗೆ ಮರವೇ ಸಾಯುವ ಪರಿಸ್ಥಿತಿ. ಎಲೆ ಚುಕ್ಕಿ ರೋಗವೆಂಬ ಈ ಮಾರಕ ರೋಗದಿಂದಾಗಿ ಇದೆ ಅಡಿಕೆ ಕೃಷಿಯೇ ವಿನಾಶದತ್ತ ಮುಖಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುಪಾಲು ವಾಣಿಜ್ಯ ವ್ಯವಹಾರ ಅಡಿಕೆ ಕೃಷಿಯ ಮೇಲೆಯೇ ಅವಲಂಬಿತವಾಗಿದೆ. ಹಾಗಾಗಿ ಈ ರೋಗ ವ್ಯಾಪಕವಾಗಿ ಹರಡುವ ಮೊದಲು ಅದಕ್ಕೆ ಪರಿಹಾರೋಪಾಯಗಳು ಆಗಲೇ ಬೇಕಾಗಿದೆ. ಸ್ವತಃ ಅಡಿಕೆ ಕೃಷಿಕನಾಗಿರುವ ನನಗೆ ಇದನ್ನೆಲ್ಲಾ ಮೂಕ ಪ್ರೇಕ್ಷಕನಾಗಿದ್ದುಕೊಂಡು ಸಹಿಸಲಿಕ್ಕೂ ಆಗುವುದಿಲ್ಲ.
ಅಡಿಕೆ ಕೃಷಿಕರ ಪಾಲಿಗೆ ಈ ವರ್ಷ ಪ್ರಕೃತಿಯೂ ಮುನಿಸಿಕೊಂಡಿದೆ. ಯಾರ ಲೆಕ್ಕಾಚಾರಕ್ಕೂ ಸಿಗದಂಥಾ ಅನಿಶ್ಚಿತ ಮಳೆ, ಅತಿವೃಷ್ಟಿ ಯಿಂದಾಗಿ ಮೊದಲೇ ಕೊಳೆ ರೋಗ, ಹಳದಿ ರೋಗಗಳಿಂದ ಜರ್ಜರಿತನಾಗಿದ್ದ ಅಡಿಕೆ ಕೃಷಿಕ ಈಗ ಈ ಎಲೆ ಚುಕ್ಕಿ ರೋಗದಿಂದ ಕಂಗಾಲಾಗಿದ್ದಾನೆ. ಆದರೆ ಆತನ ಸಹಾಯಕ್ಕೆ ಬರಬೇಕಿದ್ದವರು ಬರುತ್ತಿಲ್ಲ. ಸರಕಾರಗಳು, ಅದರ ಮಂತ್ರಿಗಳು ಆಡಿದ ಮಾತುಗಳ ಮೇಲೆ, ನೀಡಿದ ಭರವಸೆಗಳ ಮೇಲೆ, ಮಾಡುತ್ತಿರುವ ಕೆಲಸಗಳ ಮೇಲೆ ಅಡಿಕೆ ಕೃಷಿಕನಿಗೆ ನಂಬಿಕೆ ಹುಟ್ಟುತ್ತಿಲ್ಲ… ಅಡಿಕೆ ಮರಗಳಿಗೆ ಬಂದಿರುವ ರೋಗಕ್ಕಿಂತಲೂ ದೊಡ್ಡ ರೋಗ ನಮ್ಮನ್ನಾಳುವ ಮಂದಿಗಿದೆ ಎಂಬುದು ಆತನಿಗೆ ಮೊದಲೇ ಗೊತ್ತಿದೆ.
ಹಾಗಾಗಿ ಈ ಸರಕಾರಗಳು ನಿದ್ದೆಯಿಂದ ಎಚ್ಚೆತ್ತು, ಮಲಗಿದ್ದಲ್ಲಿಂದ ಎದ್ದು, ಅಡಿಕೆ ಕೃಷಿಗೆ ಬಂದಿರುವ ಎಲೆಚುಕ್ಕಿ ರೋಗದ ಬಗ್ಗೆ ಪರಿಶೀಲಿಸಿ, ಸರ್ವೇ ನಡೆಸಿ, ವರದಿ ತರಿಸಿಕೊಂಡು, ಟಾಸ್ಕ್ ಫೋರ್ಸ್ ರಚಿಸಿ, ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ರಚಿಸಿ, ಸಂಶೋಧನೆಗೆ ಅತ್ಯುನ್ನತ ಮಟ್ಟದ ವಿಜ್ಞಾನಿಗಳ ತಂಡವನ್ನು ಕಳುಹಿಸಿ, ವರದಿ ತರಿಸಿ, ಎಲೆಚುಕ್ಕಿ ರೋಗವನ್ನು ತಡೆಗಟ್ಟಲಿಕ್ಕಾಗಿ ಸಂಶೋಧನೆ ನಡೆಸಲು ತ್ವರಿತವಾಗಿ ಮಾಡಲು ಹತ್ತಿಪ್ಪತ್ತು ಕೋಟಿ ರೂಪಾಯಿಗಳಷ್ಟು ಹಣ ಬಿಡುಗಡೆ ಮಾಡುತ್ತೇವೆಂದು ಘೋಷಿಸಿ, ಬಳಿಕ ಅದಕ್ಕೆ ಸಂಬಂಧಪಟ್ಟ ದಾಖಲೆಗಳಿಗೆ ಉನ್ನತ ಅಧಿಕಾರಿಗಳ ಸಹಿಯಾಗಿ, ಕೊನೆಗೆ ಹಣ ಬಿಡುಗಡೆಯಾಗಿ, ಎಲೆಚುಕ್ಕಿ ರೋಗ ತಡೆಗಟ್ಟಲು ಶಿಲೀಂಧ್ರ ನಾಶಕ ಔಷಧಿಯನ್ನು ಕೃಷಿಕರಿಗೆ ಉಚಿತವಾಗಿ ಹಂಚುವ ಹೊಸ ಯೋಜನೆಗೆ ಅನುಮೋದನೆ ನೀಡಿ, ಅದಕ್ಕಾಗಿ ಔಷಧ ಖರೀದಿಗಾಗಿ ತಕ್ಷಣಕ್ಕೆ ಹತ್ತಿಪ್ಪತ್ತು ಕೋಟಿ ರೂಪಾಯಿಗಳ ಅನುದಾನ ಘೋಷಣೆ ಮಾಡಿ, ಆ ಬಳಿಕ ಅನುದಾನ ಬಿಡುಗಡೆಯಾಗಿ, ಆ ಬಳಿಕ ಔಷಧ ಖರೀದಿ ಪ್ರಕ್ರಿಯೆ ಶುರುಮಾಡಿ, ಬಳಿಕ ಆ ಔಷಧ ಸರಕಾರಕ್ಕೆ ಬಂದು, ಆ ಬಳಿಕ ಕೃಷಿ ಇಲಾಖೆಯ ಮೂಲಕ ನಮ್ಮ ಅಡಿಕೆ ಕೃಷಿಕರಿಗೆ ಉಚಿತವಾಗಿ ತಲುಪಿ, ಆ ನಂತರ ಕೃಷಿಕರು ಈ ಔಷಧವನ್ನು ತಮ್ಮ ಅಡಿಕೆಮರಗಳಿಗೆ ಎರಡು ಬಾರಿ ಸ್ಪ್ರೇ ಮಾಡಿ, ಮೂರನೆಯ ಬಾರಿ ಸ್ಪ್ರೇ ಮಾಡಲು ಔಷಧದ ಪೂರೈಕೆಯಿಲ್ಲದೆ ಒದ್ದಾಡಿ ತಮ್ಮ ತಮ್ಮ ಅಡಿಕೆ ಮರಗಳನ್ನು ರಕ್ಷಿಸಿಕೊಳ್ಳುವಷ್ಟರಲ್ಲಿ ತಮ್ಮ ಜೀವನಕ್ಕೆ ಏಕಮಾತ್ರ ಆಧಾರವಾಗಿರುವ ಅಡಿಕೆ ತೋಟವೇ ನಾಶವಾಗಿಬಿಡುತ್ತದೋ ಎಂಬ ಆತಂಕ ಮನೆಮಾಡಿದೆ…!
ವಿಪರೀತ ಮಳೆ, ಅದರಿಂದಾಗಿ ಉಂಟಾದ ವಿಪರೀತ ತೇವಾಂಶದಿಂದಾಗಿಯೇ ಈ ಎಲೆ ಚುಕ್ಕಿ ರೋಗವೆಂಬ ಈ ಶಿಲೀಂಧ್ರ ಸೋಂಕು ವ್ಯಾಪಕವಾಗಿ ಹರಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅಡಿಕೆ ಕೃಷಿಗೆ ಹೆಚ್ಚಾಗಿ ಬಾಧಿಸುವುದು ಈ ಶಿಲೀಂಧ್ರ ಸೋಂಕುಗಳೇ. ಆದರೆ ಈ ಬಾರಿ ವ್ಯಾಪಕವಾಗಿ ಹರಡತೊಡಗಿರುವ ಈ ಎಲೆಚುಕ್ಕಿ ರೋಗಕ್ಕೆ ಕಾರಣವಾಗಿರುವುದು phyllosticta arecae ಮತ್ತು Colletotrichum Gloeosporioides ಎಂಬ ಎರಡು ರೀತಿಯ ಫಂಗಸ್ ಅಥವಾ ಶಿಲೀಂದ್ರಗಳಿಂದ ಬರುವಂಥಹ ರೋಗ. ಇದಕ್ಕೆ ಆಂಟಿ ಫಂಗಲ್ ಅಥವಾ ಶಿಲೀಂಧ್ರನಾಶಕಗಳೇ ಬೇಕು. ಅಡಿಕೆ ಬೆಳೆಯಲ್ಲಿ ಈ ಎರಡು ಶಿಲೀಂಧ್ರಗಳ ಸೋಂಕು ಪತ್ತೆಯಾಗಿ ಆಗಲೇ ಐವತ್ತು ಅರವತ್ತು ವರ್ಷಗಳೇ ಆಯಿತು… ಅಡಿಕೆ ಕೃಷಿಕರು ಇದಕ್ಕೆ ಶಿಲೀಂಧ್ರನಾಶಕಗಳಾಗಿ carbendaziim ಮತ್ತು mancozeb ಇವುಗಳನ್ನು ಬಳಸುತ್ತಿದ್ದರು.
ಆದರೆ ಇತ್ತೀಚೆಗೆ ಈ ಔಷಧಗಳಿಗೆ ಎಲೆ ಚುಕ್ಕಿ ರೋಗ ಬಗ್ಗುತ್ತಿಲ್ಲ… ಅಷ್ಟೇ ಅಲ್ಲದೆ ಈ ಎರಡು ಶಿಲೀಂಧ್ರ ನಾಶಕಗಳಿಂದ ಅಡ್ಡಪರಿಣಾಮಗಳಿವೆಯೆಂದು ಸಾಬೀತಾಗಿರುವುದರಿಂದ ಪಾಶ್ಚಾತ್ಯ ದೇಶಗಳಲ್ಲಿ ಇವುಗಳ ಬಳಕೆಯನ್ನು ನಿಧಾನವಾಗಿ ನಿಷೇಧಿಸುತ್ತಿದ್ದಾರೆ. ಆದರೆ phyllosticta arecae ಮತ್ತು Colletotrichum Gloeosporioides ಎಂಬ ಈ ಎರಡು ಶಿಲೀಂಧ್ರಗಳ ಸೋಂಕು ಬೇರೆ ಬೆಳೆಗಳಿಗೂ ಬಾಧಿಸುತ್ತದೆ. ಹಾಗಾಗಿ ಬಹಳ ಹಿಂದೆಯೇ ಈ ಶಿಲೀಂಧ್ರಗಳಿಗೆ ಪರಿಣಾಮಕಾರಿಯಾದ Triazole ಸಮೂಹದಿಂದ ಆಯ್ದುಕೊಂಡ ನೂತನ ಫಂಗಿಸೈಡ್ ಗಳ ಬಗ್ಗೆ ಸಂಶೋಧನೆ ನಡೆದಿದೆ ಮತ್ತು ಈಗ ಇವನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ ಕೂಡಾ. Hexaconazole ಅಥವಾ Propiconazole ಮುಂತಾದ ಫಂಗಿಸೈಡ್ ಗಳು ಅಡಿಕೆಯ ಎಲೆಚುಕ್ಕಿ ರೋಗಕ್ಕೂ ಪರಿಣಾಮಕಾರಿ ಎಂಬ ಸಂಶೋಧನೆ ಕೂಡಾ ಈಗಾಗಲೇ ನಡೆದಿದೆ. ಈಗ ಸರಕಾರ ಅಡಿಕೆ ಕೃಷಿಕರಿಗೆ ಉಚಿತವಾಗಿ ಪೂರೈಕೆ ಮಾಡುತ್ತೇವೆ ಅಂತ ಹೇಳಲಾಗುತ್ತಿರುವ ಫಂಗಿಸೈಡ್ ಗಳು ಯಾವುದು ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಈ ಬಾರಿ ಹರಡುತ್ತಿರುವ ಶಿಲೀಂಧ್ರ ಸೋಂಕಿಗೆ ಬಹಳ ಪ್ರಬಲವಾದ ಶಿಲೀಂಧ್ರಗಳ ಪ್ರಬೇಧ ಕಾರಣವಿರಬಹುದು.. ಅದಕ್ಕಾಗಿ ಹಳೆಯ ಶಿಲೀಂಧ್ರ ನಾಶಕಗಳಿಂದ ಆಧುನಿಕ ಶಿಲೀಂಧ್ರ ನಾಶಕಗಳನ್ನೇ ಪೂರೈಕೆ ಮಾಡಬೇಕು ಎಂಬುದು ಕೃಷಿಕರ ಒತ್ತಾಯ.
ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಕೂಡಾ ಅಡಿಕೆ ಕೃಷಿಕರ ಹಿತರಕ್ಷಣೆಗಾಗಿ ಸಾಕಷ್ಟು ಕ್ರಮಕೈಗೊಳ್ಳುತ್ತಿದ್ದೇವೆ ಅಂತ ತೋರ್ಪಡಿಕೆ ಮಾಡುತ್ತಿದೆಯಾ ಎಂಬ ಸಂಶಯ ಈ ಭಾಗದ ಅಡಿಕೆ ಕೃಷಿಕರಿಗಿದೆ. ಸ್ವಯಂ ಅಡಿಕೆ ಕೃಷಿಕರೇ ಆಗಿರುವ ಮಲೆನಾಡಿನ ಆರಗ ಜ್ಞಾನೇಂದ್ರ ಟಾಸ್ಕ್ ಫೋರ್ಸ್ ನ ಅಧ್ಯಕ್ಷರಾಗಿದ್ದಾರೆ… ಆದರೆ ವಿಧಾನಸೌಧದ ಸದನದೊಳಗೆಯೇ “ಅಡಿಕೆ ಕೃಷಿಗೆ ಭವಿಷ್ಯವೇ ಇಲ್ಲ… ಇನ್ನು ಹತ್ತು ವರ್ಷದೊಳಗೆ ಅಡಿಕೆ ಮರಗಳನ್ನು ಕತ್ತರಿಸಿ ಹಾಕಿ ಬೇರೆ ಕೃಷಿ ಮಾಡುವ ಪರಿಸ್ಥಿತಿ ಬರಲಿದೆ ..” ಅಂತ ಹೇಳಿ ಮೊದಲೇ ಕಂಗಾಲಾಗಿದ್ದ ಅಡಿಕೆ ಕೃಷಿಕರ ನೈತಿಕ ಸ್ಥೈರ್ಯವನ್ನೇ ಕುಗ್ಗಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ನಿನ್ನೆಯಿಂದ ಅಡಿಕೆಗೆ ಎಲೆ ಚುಕ್ಕಿ ರೋಗದ ಜೊತೆಗೆಯೇ ‘ಆರಗ ರೋಗ’ ಕೂಡಾ ಬಡಿದಿದೆ..!
ಎಲೆ ಚುಕ್ಕಿ ರೋಗದ ಅಪಾಯವನ್ನು ತಡೆಗಟ್ಟಲು ಕರ್ನಾಟಕದಿಂದ ಯಡಿಯೂರಪ್ಪನವರ ನೇತೃತ್ವದಲ್ಲಿ ಒಂದು ತಂಡ ಹೋಗಿ ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ಬಂದಿದೆ.. ಆದರೆ ಯಡಿಯೂರಪ್ಪನವರ ತಂಡದಲ್ಲಿ ಅಡಿಕೆ ಕೃಷಿಯ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಲು ನಮ್ಮ ಜಿಲ್ಲೆಯ ಒಬ್ಬೇ ಒಬ್ಬ ಜನಪ್ರತಿಧಿ ಕೂಡಾ ಇರಲಿಲ್ಲ..! ಬಹುಶಃ ಕೇಂದ್ರ ಕೃಷಿಯ ರಾಜ್ಯ ಸಚಿವರು ಸ್ವತಹಾ ಅಡಿಕೆ ಕೃಷಿಕರೂ ಆಗಿರುವ ದಕ್ಷಿಣ ಕನ್ನಡದ ಮೂಲದವರೇ ಎಂಬುದು ಕಾರಣವಿರಬಹುದಾ..? ಜಿಲ್ಲೆ, ರಾಜ್ಯ, ಕೇಂದ್ರ ಎಲ್ಲ ಕಡೆಯೂ ನಮ್ಮ ಅಡಿಕೆ ಕೃಷಿಕರೇ ಇದ್ದರೂ ನಮ್ಮವರಿಗೆ ನಮ್ಮವರಿಂದ ಏನಾದರೂ ಪ್ರಯೋಜನವಾದೀತೇ..? ಬಹುಶಃ ನಮ್ಮ ಪಕ್ಕದ ತಾಲೂಕಿನವರಿಗೆ ಇದ್ಯಾವುದರಿಂದಲೂ ನಮಗೆ ಪ್ರಯೋಜನವಿಲ್ಲವೆಂಬುದು ಗೊತ್ತಾಗಿಯೇ ಅವರು ಕೇಂದ್ರಕ್ಕೆ ನಮ್ಮ ಕಷ್ಟಗಳ ಸಮಾಚಾರ ಮುಟ್ಟಿಸಿ ಪರಿಹಾರ ಪಡೆಯಲು ರಾಜರ್ಷಿ ಶ್ರೀ ವೀರೇಂದ್ರ ಹೆಗ್ಗಡೆಯವರ ಸಹಾಯ ಪಡೆಯಲು ಹೊರಟದ್ದು ..!
ಆದರೆ ನಿಜಕ್ಕೂ ಹೇಳಿ… ಈ ರೀತಿ ನಿಯೋಗ ಹೋಗಿ ಮನವಿ ಕೊಡುವುದರಿಂದ ಏನಾದರೂ ಪ್ರಯೋಜನವಾಗಬಹುದೇ..? ಹಾಗಂತ ನಿಮಗನ್ನಿಸುತ್ತಿದೆಯೇ..? ಎಲೆಚುಕ್ಕಿ ರೋಗದ ಸಮಸ್ಯೆ ಕಾಡತೊಡಗಿ ಈಗಾಗಲೇ ಮೂರು ನಾಲ್ಕು ತಿಂಗಳು ಕಳೆಯಿತು. ಇಷ್ಟರಲ್ಲಿ ಎಲ್ಲ ಕೃಷಿಕರೂ ಕೂಡಾ ಎರಡೆರಡು ಸಲವಾದರೂ ಶಿಲೀಂಧ್ರನಾಶಕಗಳನ್ನು ಸಿಂಪಡಿಸಿ ಕನಿಷ್ಠಪಕ್ಷ ಈ ರೋಗವನ್ನು ಹತೋಟಿಗೆ ತರಲಿಕ್ಕಾದರೂ ಶ್ರಮಿಸಬಹುದಿತ್ತೋ ಏನೋ… ಅದೇ ಸಮಯಕ್ಕೆ ಅಡಿಕೆ ಧಾರಣೆಯೂ ಬಿದ್ದು ಹೋಗಿ ಕೆಲ ಸಮಯವಾಯಿತು… ಭೂತಾನಿನ ಗಡಿಯೊಳಗಿನಿಂದ ಹಸೀ ಅಡಿಕೆ ಭೂತದಂತೆ ಎದ್ದು ನಿಂತು ಕುಣಿಯಲು ಶುರುಮಾಡಿರುವುದರ ಜೊತೆಗೆ ಬೇರೆ ಬೇರೆ ದೇಶಗಳಿಂದ ನಮ್ಮ ಗಡಿಯೊಳಗೆ ಅಡಿಕೆಯನ್ನು ಕಳ್ಳಸಾಗಾಣಿಕೆ ಮಾಡಲು ಶುರುಮಾಡಿರುವುದರಿಂದಲೇ ನಮ್ಮಲ್ಲಿನ ಅಡಿಕೆಯ ಬೆಲೆ ಇಳಿಯಿತು ಅಂತ ತಿಳಿಯುವುದಕ್ಕೆ “ಬಲಿಮೆ’ ಇಡಬೇಕಾಗಿಲ್ಲ…
ಇದೆಲ್ಲವೂ ನಮ್ಮ ಜಿಲ್ಲೆ, ರಾಜ್ಯ, ಕೇಂದ್ರ ಎಲ್ಲ ಕಡೆಯೂ ಇರುವ ನಮ್ಮ ಪ್ರತಿನಿಧಿಗಳಂತಾಡುವ ಅಡಿಕೆ ಕೃಷಿಕರಿಗೆ ಗೊತ್ತಿದ್ದರೂ… ನಮ್ಮವರಿಗೆ ನಮ್ಮವರಿಂದ ಏನೂ ಪ್ರಯೋಜನವಾಗಲಿಲ್ಲ… ! ಈಗಲೂ ಪ್ರಯೋಜನವಾಗುವ ಲಕ್ಷಣಗಳಿಲ್ಲ..! ನಮ್ಮ ಹಿತ ರಕ್ಷಣೆಗೆ ನಾವೇ ಹೊಣೆ… ಯಾರನ್ನೋ ನಂಬಿ ಕೂರುವ ಬದಲಿಗೆ ಹೋರಾಟದ ಹಾದಿಯೇ ಲೇಸು… ಒಂದು ವೇಳೆ ದಕ್ಷಿಣ ಕನ್ನಡದ ಅಡಿಕೆ ಕೃಷಿಕರೆಲ್ಲಾ ಒಗ್ಗಟ್ಟಾಗಿ ಹೋರಾಟಕ್ಕೆ ತೊಡಗುವುದು ಅಂತಾದರೆ… ಈ ಅಶೋಕ್ ರೈ ಸದಾ ಮುಂದೆ… ಅಷ್ಟೇ ಅಲ್ಲ ಮುಂಚೂಣಿಯಲ್ಲೇ ನಿಂತು ಎಲ್ಲಾ ಜವಾಬ್ದಾರಿಯನ್ನೂ ತೆಗೆದುಕೊಳ್ಳಲು ಸಿದ್ಧ…! ಅಡಿಕೆ ಬೆಳೆಗಾರರ ನೋವಿಗೆ ಸ್ಪಂದಿಸಲು ನಾನು ಬದ್ಧ… ಎಂದು ಪೋಸ್ಟ್ ಹಾಕಿದ್ದಾರೆ .