ಹಾಸನ ನಗರದಲ್ಲಿರುವ ಕೊರಿಯರ್ ಕಚೇರಿಯಲ್ಲಿ ನಡೆದಿದ್ದ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತನ್ನ ಪ್ರೇಯಸಿಗೆ ಪಾಠ ಕಲಿಸಲು ಮುಂದಾಗಿದ್ದ ಪಾಗಲ್ ಪ್ರೇಮಿಯೊಬ್ಬನ ಪ್ರಯತ್ನ ಗುರಿ ತಪ್ಪಿ ಕೊರಿಯರ್ ಮಾಲಿಕ ಗಾಯಗೊಂಡಿದ್ದಾನೆ ಎಂಬ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ‘ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೂ, ಹಾಸನದ ಮಿಕ್ಸಿ ಸ್ಫೋಟ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇದು ವೈಯಕ್ತಿಕ ದ್ವೇಷದಿಂದ ನಡೆದ ಕೃತ್ಯ. ಇದರಲ್ಲಿ ಉಗ್ರ ಸಂಘಟನೆಗಳ ಪಾತ್ರವಿಲ್ಲ ಎಂದು ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ರಾತ್ರಿ ಹಾಸನ ನಗರದ ಕುವೆಂಪುನಗರ ಬಡಾವಣೆಯಲ್ಲಿರುವ ಕೊರಿಯರ್ ಕಚೇರಿಗೆ ಪಾರ್ಸಲ್‌ನಲ್ಲಿ ಬಂದಿದ್ದ ಮಿಕ್ಸಿ ಸ್ಫೋಟವಾಗಿ ಮಾಲೀಕ ಶಶಿಕುಮಾರ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದರು. ಮಹಿಳೆಯೊಬ್ಬರಿಗೆ ಬಂದ ಪಾರ್ಸಲನ್ನು ಅದನ್ನು ಕಳುಹಿಸಿದವರ ವಿಳಾಸ ಸರಿಯಿಲ್ಲ ಎಂಬ ಕಾರಣಕ್ಕೆ ಆಕೆ ತಿರಸ್ಕರಿಸಿದ್ದು, ಅದನ್ನು ಕೊರಿಯರ್ ಕಛೇರಿಯ ಒಪನ್ ಮಾಡುವ ವೇಳೆ ಅದು ಸ್ಪೋಟಗೊಂಡಿತ್ತು. ಇತ್ತೀಚೆಗೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿದ್ದ ಹಿನ್ನೆಲೆಯಲ್ಲಿ ಮಿಕ್ಸಿ ಸ್ಫೋಟ ಸಾಕಷ್ಟು ಆತಂಕ ಮೂಡಿಸಿತ್ತು.
ಈ ಸ್ಪೋಟ ಕೂಡ ಉಗ್ರರ ಕೃತ್ಯ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದರು. ಅದರೆ,. ‘ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೂ, ಹಾಸನದ ಮಿಕ್ಸಿ ಸ್ಫೋಟ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇಬ್ಬರು ವ್ಯಕ್ತಿಗಳ ನಡುವಿನ ದ್ವೇಷದಿಂದ ಒಬ್ಬರನ್ನು ಟಾರ್ಗೆಟ್ ಮಾಡಿರುವ ಕೃತ್ಯವಾಗಿದೆ’ ಎಂದು ಎಸ್‌ಪಿ ಹರಿರಾಂ ಶಂಕರ್ ಮಂಗಳವಾರ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
‘ಸಣ್ಣಮಟ್ಟದ ಸ್ಫೋಟಕವನ್ನು ಬಳಸಲಾಗಿದೆ. ಮಿಕ್ಸಿ ಆನ್ ಮಾಡುತ್ತಿದ್ದಂತೆ ಸ್ಫೋಟವಾಗಿದೆ. ಇಬ್ಬರ ನಡುವೆ ದ್ವೇಷ ಯಾವ ಕಾರಣಕ್ಕೆ ಇತ್ತು ಎಂಬ ಕುರಿತು ತನಿಖೆ ಮುಂದುವರಿದಿದೆ. ಫ್ಲೊರೆನ್ಸಿಕ್ ಸೈನ್ಸ್ ಲ್ಯಾಬ್ (ಎಫ್‌ಎಸ್‌ಎಲ್) ತಜ್ಞರ ತಂಡ, ಆಂತರಿಕ ಭದ್ರತಾ ಪಡೆಯೂ ಆಗಮಿಸಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಸಾಕಷ್ಟು ಸುಳಿವು ದೊರೆತಿದ್ದು, ಈ ಪ್ರಕರಣದಲ್ಲಿ ಇನ್ನು ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ’ ಎಂದರು.
ತೀವ್ರ ತಪಾಸಣೆ ಆಂತರಿಕ ಭದ್ರತಾ ಪಡೆ ಮುಖ್ಯಸ್ಥ ಪ್ರಕಾಶ್‌ಗೌಡ, ಕರ್ನಲ್ ಬಾಲಕೃಷ್ಣ ನೇತೃತ್ವದ ತಂಡ ಮಧ್ಯಾಹ್ನ 12 ಗಂಟೆಯಿಂದ ಸುದೀರ್ಘ ಎರಡು ಗಂಟೆಗೂ ಹೆಚ್ಚು ಕಾಲ ಕೊರಿಯರ್ ಅಂಗಡಿಯನ್ನು ಜಾಲಾಡಿ ಅಗತ್ಯ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡರು.
ತನಿಖೆ ಹಿನ್ನೆಲೆಯಲ್ಲಿ ಡಿಟಿಡಿಸಿ ಕೊರಿಯರ್ ಅಂಗಡಿ ಅಕ್ಕ, ಪಕ್ಕದ ಅಂಗಡಿಗಳ ಬಾಗಿಲು ಮುಚ್ಚಿಸಲಾಗಿತ್ತು. ಬ್ಯಾರಿಕೇಡ್ ಹಾಕಿ ಕುವೆಂಪುನಗರದಿಂದ ರಿಂಗ್‌ರಸ್ತೆಯ ಸಂಪರ್ಕ ರಸ್ತೆಯಲ್ಲಿ ಜನ ಹಾಗೂ ವಾಹನ ಸಂಚಾರವನ್ನು ಮಧ್ಯಾಹ್ನದವರೆಗೂ ಸ್ಥಗಿತಗೊಳಿಸಲಾಗಿತ್ತು. ಎಎಸ್‌ಪಿ ತಮ್ಮಯ್ಯ, ಡಿವೈಎಸ್‌ಪಿ ಉದಯ ಭಾಸ್ಕರ್, ಸಿಪಿಐ ಕೃಷ್ಣರಾಜು ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಭಗ್ನಪ್ರೇಮಿ ಕೃತ್ಯ?
ಬಲ್ಲ ಮೂಲವೊಂದರ ಪ್ರಕಾರ ಇದು ಭಗ್ನಪ್ರೇಮಿಯೊಬ್ಬನ ಕೃತ್ಯ. ವಿಚ್ಛೇದಿತ ಗೃಹಿಣಿ ಹಾಗೂ ಪತ್ನಿ ಪರಿತ್ಯಕ್ತ ವ್ಯಕ್ತಿ ನಡುವೆ ಕೆಲ ತಿಂಗಳ ಹಿಂದೆ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದೆ. ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಪಾಗಲ್ ಪ್ರೇಮಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಅನಿಲ್ ರಾಜ್ ಎಂದು ತಿಳಿದು ಬಂದಿದೆ. ಅನಿಲ್ ತನ್ನ ಪ್ರೆಯಸಿ ಹಾಸನದ ಮಹಿಳೆಗೆ ಆಗಾಗ ಬೆಂಗಳೂರಿನಿಮದ ಗಿಪ್ಟ್ ಗಳನ್ನು ಕೊರಿಯರ್ ಮೂಲಕ ಕಳುಹಿಸುತ್ತಿದ್ದ.
ಇತ್ತೀಚೆಗೆ ಅವರಿಬ್ಬರ ನಡುವೆ ವೈಮನಸ್ಸು ಮೂಡಿದ್ದು, ಆಕೆ ಸ್ನೇಹವನ್ನು ನಿರಾಕರಿಸಿದಳು ಎನ್ನಲಾಗಿದೆ. ಹೀಗಾಗಿ ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮಿಕ್ಸಿಯಲ್ಲಿ ಡಿಟನೇರ್ ಬಳಸಿ ಕೊರಿಯರ್ ಮಾಡಿದ್ದ. ಅದರ ಸ್ವಿಚ್ ಹಾಕುತ್ತಿದ್ದಂತೆ ಸ್ಫೋಟಗೊಳ್ಳುವಂತೆ ವ್ಯವಸ್ಥೆ ಮಾಡಿದ್ದ. ಕುವೆಂಪುನಗರ ಬಡಾವಣೆಯ ಮಹಿಳೆ ಕೊರಿಯರ್ ಸ್ವೀಕರಿಸಿದ್ದು, ನಂತರ ಅದರಲ್ಲಿ ಕಳುಹಿಸಿದವರ ವಿಳಾಸ ಇಲ್ಲದ ಹಿನ್ನೆಲೆಯಲ್ಲಿ ಕೊರಿಯರ್ ಕಚೇರಿಗೆ ಹಿಂತಿರುಗಿಸಿದ್ದಳು. ಅದನ್ನು ವಾಪಸ್ಸು ಕಳುಹಿಸಲು ಕೊರಿಯರ್ ನವರು ರೂ 350 ಕೇಳಿದ್ದಾರೆ. ಅದರಲ್ಲಿ ವಿಳಾಸವೇ ಇಲ್ಲ ನಾನ್ಯಾಕೆ ಕೊಡಬೇಕು ಎಂದು ಆಕೆ ದಬಾಯಿಸಿದ್ದಾಳೆ. ನೀವು ಏನೂ ಬೇಕಾದರೂ ಮಾಡಿ ಎಂದು ಮಹಿಳೆ ಪಾರ್ಸೆಲ್ ಅನ್ನು ಕೊರಿಯರ್ ಅಫೀಸಿನಲ್ಲಿ ಬಿಟ್ಟು ಹೋಗಿದ್ದಾಳೆ.
ಕುತೂಹಲ ತಡೆಯಲಾರದ ಕೊರಿಯರ್ ಕಚೇರಿ ಮಾಲೀಕ ಶಶಿಕುಮಾರ್ ಬಾಕ್ಸ್ ಒಪನ್ ಮಾಡಿದ್ದು , ಅದರಲ್ಲಿದ್ದ ಮಿಕ್ಸಿಯನ್ನು ಪರೀಕ್ಷಿಸಲು ಆನ್ ಮಾಡಿದಾಗ ಸ್ಫೋಟಗೊಂಡಿದೆ ಎಂದು ಪೊಲೀಸ್ ಮೂಲವೊಂದು ತಿಳಿಸಿದೆ. ಈ ಕುರಿತು ತನಿಖೆ ಮುಂದುವರಿದಿದ್ದು, ಬಂಧಿತರಿಂದ ಮಾಹಿತಿ ಪಡೆಯಲಾಗುತ್ತಿದೆ.