ಉಪ್ಪಿನಂಗಡಿ: ಸ್ನೇಹಿತನ ಜತೆ ಮೀನು ಹಿಡಿಯಲೆಂದು ತೆರಳಿದ್ದ ವ್ಯಕ್ತಿ ನದಿಗೆ ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ಎಂಬಲ್ಲಿ ಡಿ 26 ರಂದು ನಡೆದಿದೆ. ಶವವು ನೀರು ಪಾಲಾದ ಸ್ಥಳದಿಂದ 10 ಮೀ ದೂರದಲ್ಲಿ ಡಿ.27ರಂದು ಬೆಳಿಗ್ಗೆ ಪತ್ತೆಯಾಗಿದೆ.
ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ದಂಡುಗ ನಿವಾಸಿ ಜನಾರ್ದನ (40ವ.) ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿ. ಜನಾರ್ದನ ರವರು ತನ್ನಸ್ನೇಹಿತ ಪದ್ಮುಂಜ ಸಮೀಪದ ಬೋಲೋಡಿ ನಿವಾಸಿ ಮಹೇಶ್ ಎಂಬವರ ಜತೆ ಮುಗೇರಡ್ಕದ ಕಾಮಗಾರಿ ಹಂತದಲ್ಲಿರುವ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಬಲೆ ಹಾಕಲು ಡಿ 26 ರಂದು ಸಂಜೆ ಬಂದಿದ್ದರು. ನದಿಗೆ ಬಲೆ ಇಳಿಸುವ ಸಂದರ್ಭ ಆಯತಪ್ಪಿ ಜನಾರ್ದನ ಅವರು ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಅಣಿಕಟ್ಟುನಿರ್ಮಾಣವಾಗುತ್ತಿದ್ದ ಸ್ಥಳವಾಗಿದ್ದರಿಂದ ಅದು ಕೆಸರು ತುಂಬಿ ಅಪಾಯಕಾರಿಯಾಗಿತ್ತು. ಹೀಗಾಗಿ ಮೊದಲು ನೀರಿಗಿಳಿದ ಜನಾರ್ದನ ಮುಳುಗಿ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಜತೆಯಲ್ಲಿದ್ದ ಮಹೇಶ್ ಸ್ನೇಹಿತನನ್ನು ರಕ್ಷಿಸುವ ಯಾವ ಕಾರ್ಯವೂ ಮಾಡದೇ , ಸಮೀಪದಲ್ಲೇ ಇದ್ದ ಭಜನಾ ಮಂದಿರದ ಸದಸ್ಯರು ಮತ್ತಿತರರ ಸ್ಥಳೀಯರ ಸಹಕಾರ ಪಡೆದು ರಕ್ಷಿಸುವ ಕಾರ್ಯಕ್ಕೆ ಮುಂದಾಗಲಿಲ್ಲ ಎನ್ನಲಾಗುತ್ತಿದೆ. ಸ್ನೇಹಿತ ನೀರು ಪಾಲಾಗುತ್ತಲೇ ಮಹೇಶ್ ರವರು ತನ್ನ ಪಾಡಿಗೆ ವಾಪಸ್ ಬಂದು ಸ್ಥಳೀಯ ಬಾರ್ ಗೆ ಬಂದಿದ್ದಾರೆ. ಬಂದು ಅಲ್ಲಿ ಮದ್ಯ ಸೇವಿಸಿ ಆಮಲೇರಿದ ಬಳಿಕ ಬಾರಲ್ಲಿದ್ದವರಲ್ಲಿ ಜನಾರ್ಧನ್ ನದಿಗೆ ಬಿದ್ದಿರುವ ವಿಷಯ ತಿಳಿಸಿದ್ದಾರೆ.
ಬಳಿಕ ಮುಳುಗಿದ ಸ್ಥಳ ತೋರಿಸಲು ಬಾರಿನಲ್ಲಿದ್ದ ಮಹೇಶನನ್ನು ಜನಾರ್ದನ ಅವರ ಸಂಬಂಧಿಕರು ಹಾಗೂ ಗೆಳೆಯರು ಘಟನಾ ಸ್ಥಳಕ್ಕೆ ಕರೆ ತಂದಿದ್ದು, ರಕ್ಷಣೆಗೆ ನೆರವು ಪಡೆಯದಿರುವ ಕುರಿತು ಸಂಶಯಿಸಿ ಹಲ್ಲೆ ನಡೆಸಿದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಉಪ್ಪಿನಂಗಡಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದ್ದು ಇಂದು ಮೃತದೇಹ ಪತ್ತೆಯಾಗಿದೆ.