ಮೈಸೂರು: ಮೈಸೂರು ತಾಲೂಕಿನ ಕಡಕೊಳ ಬಳಿ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರು ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ಅಪಘಾತಕ್ಕೀಡಾಗಿದ್ದು, ಪ್ರಹ್ಲಾದ್ ಮೋದಿ, ಅವರ ಪುತ್ರ ಹಾಗೂ ಸೊಸೆ ಗಾಯಗಳಾಗಿವೆ. ಪ್ರಹ್ಲಾದ್ ಮೋದಿ ಅವರ ದವಡೆಗೆ ಗಾಯಗಳಾಗಿದ್ದು, ಅವರ ಸೊಸೆ ತಲೆಗೆ ಗಾಯವಾಗಿದೆ. ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪ್ರಹ್ಲಾದ್ ಮೋದಿ ಅವರು ಇಂದು ಬೆಳಗ್ಗೆ ಬೆಂಗಳೂರಿನಿಂದ ಬಂಡೀಪುರಕ್ಕೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಖಾಸಗಿ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಕಡಕೋಳ ಕೈಗಾರಿಕಾ ಪ್ರದೇಶದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಪ್ರಹ್ಲಾದ್ ಮೋದಿ, ಅವರ ಮಗ, ಸೊಸೆ, ಮೊಮ್ಮಗ ಮತ್ತು ಚಾಲಕ ಇದ್ದರು. ಗಾಯಗೊಂಡಿರುವ ಅವರನ್ನು ಕೂಡಲೇ ಮೈಸೂರಿನ ಎಂಜಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಮೈಸೂರು ಎಸ್.ಪಿ ಸೀಮಾ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಮರ್ಸಿಡಿಸ್ ಬೆಂಜ್ ಕಾರು ಜಖಂಗೊಂಡಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಅಪಘಾತವಾದ ಅರ್ಧಗಂಟೆಯೊಳಗೆ ಪ್ರಹ್ಲಾದ್ ಮೋದಿ ಅವರ ಮಗ ಹಾಗೂ ಸೊಸೆಯನ್ನ ಜೆಎಸ್ಎಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಯಾವುದೇ ದೊಡ್ಡ ಸಮಸ್ಯೆ ಎದುರಾಗಿಲ್ಲ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ. ಸದ್ಯ ದೂರು ದಾಖಲಿಸಿರುವ ಪೊಲೀಸರು ಅಪಘಾತಕ್ಕೆ ಸೂಕ್ತ ಕಾರಣ ತಿಳಿಯಲು ಮುಂದಾಗಿದ್ದಾರೆ.
ಇನ್ನೂ ಕಾರು ಅಪಘಾತವಾದ ಬಳಿಕ ಪೊಲೀಸರು ಕಾರನ್ನ ಲಿಫ್ಟ್ ಮಾಡಿದ್ದಾರೆ. ಕಾರಿನಲ್ಲಿ ಒಟ್ಟು 5 ಮಂದಿ ಪ್ರಯಾಣ ಮಾಡುತ್ತಿದ್ದರು. ಈ ಐವರ ಪೈಕಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಗುವಿನ ಕಾಲು ಮುರಿದಿದೆ ಎನ್ನಲಾಗಿದೆ. ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ಮತ್ತೊಬ್ಬ ಮಗಳ ಯಾವುದೇ ಅಪಘಾತವಾಗಿಲ್ಲ.
ವಿಡಿಯೋ ನೋಡಿ
PM Modi's relatives injured in an accident. Their car was travelling towards Bandipur when the accident happened. Prahlad Modi, His son and daughter in law injured in the accident. They have been rushed to hospital #Karnataka pic.twitter.com/hLJ9IuqJQj
— Imran Khan (@KeypadGuerilla) December 27, 2022
ಸಿಎಂ ಕಚೇರಿಗೆ ಮಾಹಿತಿ
ಅಪಘಾತದ ಘಟನೆ ಬಗ್ಗೆ ಸಿಎಂ ಕಾರ್ಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಕನಿಷ್ಠ 24 ಗಂಟೆಗಳ ಕಾಲ ಅಡ್ಮಿಟ್ ಆಗಿರುವ ಪ್ರತಿಯೊಬ್ಬರ ಮೇಲೂ ನಿಗಾವಹಿಸಲು ವೈದ್ಯರು ತೀರ್ಮಾನ ಮಾಡಿದ್ದಾರೆ . ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆ ಬಳಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಸಂಸದ ಪ್ರತಾಪ್ ಸಿಂಹ ಬೇಟಿ
ಇನ್ನೂ ಆಸ್ಪತ್ರೆಗೆ ತೆರಳಿದ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಹ್ಲಾದ್ ಮೋದಿ ಕುಟುಂಬಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಡಕೊಳ ಬಳಿ ಡಿವೈಡರ್ಗೆ ಕಾರು ಡಿಕ್ಕಿಯಾಗಿ ಅಪಘಾತವಾಗಿದೆ. ಕಾರಿನಲ್ಲಿ ಚಾಲಕ ಸೇರಿ ಐವರು ಪ್ರಯಾಣ ಮಾಡುತ್ತಿದ್ದು, ಪ್ರಹ್ಲಾದ್ ಮೋದಿ, ಮಗ ಸೊಸೆಗೆ ಮುಖದಲ್ಲಿ ಗಾಯವಾಗಿದೆ. ಮೋದಿ ಮೊಮ್ಮಗುವಿಗೆ ಎಡಕಾಲಿನ ಮಂಡಿ ಬಳಿ ಮೂಳೆಗೆ ಗಾಯವಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದರು.
ಎಮೆರ್ಜೆನ್ಸ್ಇ ವಾರ್ಡ್ನಿಂದ ಸಾಮಾನ್ಯ ವಾರ್ಡ್ಗೆ ಶಿಫ್ಟ್ ಮಾಡಲಿದ್ದು, ನಾಳೆಯವರೆಗೂ ನಿಗಾ ವಹಿಸಲಿದ್ದು, ನಿದ್ದೆ ಮಂಪರಿನ ಹಿನ್ನೆಲೆ ಕಾರು ಚಾಲಕ ಡಿವೈಡರ್ಗೆ ಗುದ್ದಿದ್ದಾನೆ. ಸದ್ಯ ಎಲ್ಲರೂ ಅರಾಮವಾಗಿದ್ದಾರೆ. ಪ್ರಹ್ಲಾದ್ ಮೋದಿ ಕುಟುಂಬ ಇದೇ ಮೊದಲ ಬಾರಿ ಕರ್ನಾಟಕಕ್ಕೆ ಬಂದಿಲ್ಲ. ಈ ಹಿಂದೆಯೂ ಅರಮನೆ ನೋಡಲು ಬಂದಿದ್ದಾರೆ. ನಾನೆ ಎಲ್ಲರನ್ನೂ ಕರೆದುಕೊಂಡು ಓಡಾಡಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳೀದರು.
ಗಾಯಾಳುಗಳನ್ನು ಉಪಚರಿಸಿದ ಡಾಕ್ಟರ್ ಮಧು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸುಮಾರು ಒಂದು ಗಂಟೆಗೆ ಸಮಯಕ್ಕೆ ಅಪಘಾತವಾಗಿದೆ. ನಮ್ಮ ಆಸ್ಪತ್ರೆಗೆ ಐದು ಜನರು ದಾಖಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕುಟುಂಬಸ್ಥರು ಎಂದು ತಿಳಿದು ಬಂದಿದೆ. ಮೋದಿ ತಮ್ಮ ಪ್ರಹ್ಲಾದ್ ಮೋದಿ 70 ವರ್ಷದವರು, ಪತ್ನಿ ಜಿಂದಾಲ್ ಮೋದಿ, ಚಾಲಕ ಸತ್ಯನಾರಾಯಣ್, ಮಾಸ್ಟರ್ ಮೆಹುಲ್ ಮೋದಿ ಆರು ವರ್ಷದ ಮೊಮ್ಮಗು ಎಡಗಾಲಿನಲ್ಲಿ ಗಾಯವಾಗಿದೆ. ಮೆಹುಲ್ ಪ್ರಹ್ಲಾದ್ ಭಾಯ್ಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಇನ್ನು ಯಾರ ಪ್ರಾಣಕ್ಕೂ ತೊಂದರೆ ಇಲ್ಲ, ಎಲ್ಲರೂ ಆರೋಗ್ಯವಾಗಿದ್ದಾರೆ. ನಾವೂ ಎಲ್ಲಾ ಪರೀಕ್ಷೆಗಳನ್ನ ಮಾಡುತ್ತಿದ್ದೇವೆ ಎಂದು ಹೇಳಿದರು.