Jaleel Murder case : ಸುರತ್ಕಲ್ ನಲ್ಲಿ ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಲಕ್ಷ್ಮೀಶ ದೇವಾಡಿಗ (28) ಬಂಧಿತ ಆರೋಪಿ.
ಈ ಹತ್ಯೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕೃಷ್ಣಾಪುರ ನೈತಂಗಡಿ ನಿವಾಸಿ ಶೈಲೇಶ್ ಅಲಿಯಾಸ್ ಶೈಲೇಶ್ ಪೂಜಾರಿ(21), ಉಡುಪಿಯ ಹೆಜಮಾಡಿ ನಿವಾಸಿ ಸವಿನ್ ಕಾಂಚನ್ ಅಲಿಯಾಸ್ ಮುನ್ನ (24) ಹೆಜಮಾಡಿ ಉಡುಪಿ ಹತ್ಯೆಯಲ್ಲಿ ನೇರವಾಗಿ ಭಾಗಿಯಾದವರು . ಇವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಹತ್ಯೆ ಮಾಡಿದ ಆರೋಪಿಗಳಿಗೆ ಪರಾರಿಯಾಗಲು ಸಹಕರಿಸಿದ ಆರೋಪದಲ್ಲಿ ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು (23) ಎಂಬಾತನನ್ನು ಪೊಲೀಸರು ಡಿ 25 ರಂದು ರಾತ್ರಿ ಬಂಧಿಸಿದ್ದರು.
ಹತ್ಯೆಯ ಸೂತ್ರದಾರ ಲಕ್ಷ್ಮೀಶ ದೇವಾಡಿಗನ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ ನಾಲ್ಕಕ್ಕೆರಿದೆ. ಹಿಂದೂ ಮಹಿಳೆಯೊಂದಿಗೆ ಜಲೀಲ್ ನಿರಂತರ ಸಂಪರ್ಕದಲ್ಲಿ ಇದ್ದದ್ದೇ ಹತ್ಯೆಗೆ ಪ್ರಮುಖ ಕಾರಣ ಎಂದು ವರದಿಗಳು ತಿಳಿಸಿವೆ . ಆದರೇ ಪೊಲೀಸ್ ಇಲಾಖೆ ಇವರೆಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹತ್ಯೆ ಮಾಡಿದವರು ಸ್ಥಳೀಯವಾಗಿ ಪರಿಚಿತರೇ ಆಗಿದುದರಿಂದ ಆರೋಪಿಗಳ ಬಂಧನ ಶೀಘ್ರವಾಗಿ ಆಗಿದೆ ಎಂದು ತಿಳಿದು ಬಂದಿದೆ.
ಡಿಸೆಂಬರ್ 24ರಂದು ಫ್ಯಾನ್ಸಿಯಲ್ಲಿ ಕರ್ತವ್ಯದಲ್ಲಿದ್ದ ವೇಳೆಯೇ ಜಲೀಲ್ ಅವರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು. ಘಟನೆ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸುರತ್ಕಲ್, ಕಾವೂರು, ಬಜಪೆ ಮತ್ತು ಪಣಂಬೂರು ಪ್ರದೇಶಗಳಲ್ಲಿ ಡಿಸೆಂಬರ್ 29ರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ವಿಧಿಸಲಾಗಿದೆ.