jalil Murder case ಮಂಗಳೂರು : ಡಿ 27 : ಸುರತ್ಕಲ್ ಸಮೀಪದ ಕೃಷ್ಣಾಪುರದ ನೈತಂಗಡಿ ಎಂಬಲ್ಲಿ ಶನಿವಾರ ನಡೆದಿದ್ದ ಅಂಗಡಿ ಮಾಲೀಕ ಜಲೀಲ್ (43) ಕೊಲೆ ಆರೋಪದಲ್ಲಿ ಮೂವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾದ ಜಲೀಲ್ ಲತೀಫಾ ಎಂಬ ಹೆಸರಿನ ಫ್ಯಾನ್ಸಿ ಶಾಪ್ ನಡೆಸುತ್ತಿದ್ದರು. ಇದೇ ಫ್ಯಾನ್ಸಿ ಶಾಪ್ ನಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಇಬ್ಬರು ದುಷ್ಕರ್ಮಿಗಳು ಚಾಕು ಇರಿದು ಹತ್ಯೆ ಮಾಡಿದ್ದರು.
ಕೃಷ್ಣಾಪುರ ನೈತಂಗಡಿಯ ಶೈಲೇಶ್ ಯಾನೆ ಶೈಲೇಶ್ ಪೂಜಾರಿ (26), ಹೆಜಮಾಡಿ ಎನ್.ಎಸ್.ರೋಡ್ನ ಸವಿನ್ ಕಾಂಚನ್ ಯಾನೆ ಮುನ್ನ (24) ಮತ್ತು ಕಾಟಿಪಳ್ಳ ಮೂರನೇ ಬ್ಲಾಕ್ನ ಪವನ್ ಯಾನೆ ಪಚ್ಚು (23) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ಪೈಕಿ ಇಬ್ಬರು 5 ವರ್ಷದ ಹಿಂದೆ ಹತ್ಯೆಯಾದ ಸುರತ್ಕಲ್ ನಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಕೊಲೆ ಆರೋಪಿ ಪಿಂಕಿ ನವಾಜ್ ನ ಕೊಲೆ ಯತ್ನ ಪ್ರಕರಣದ ಆರೋಪಿಗಳಾಗಿದ್ದಾರೆ.
ಪ್ರತ್ಯಕ್ಷದರ್ಶಿ ಸೇರಿದಂತೆ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು, ಅವರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಜಲೀಲ್ಗೆ ಹಿಂದೂ ಮಹಿಳೆಯೊಬ್ಬರ ಜತೆ ಸುಮಾರು ಎಂಟು ವರ್ಷಗಳಿಂದ ಸಂಬಂಧವಿತ್ತೆಂದು ಇದುವೆ ಕೊಲೆಗೆ ಹೇತುವಾಯಿತೆಂದು ಹೇಳಲಾಗುತ್ತಿದೆ. ಇದನ್ನು ವಿರೋಧಿಸುತ್ತಾ, ಆ ಮಹಿಳೆಯೊಂದಿಗೆ ಸಲುಗೆಯಿಂದಿರಲು ಬಯಸುತ್ತಿದ್ದ ವ್ಯಕ್ತಿಯೇ ಕೊಲೆಯ ಮಾಸ್ಟರ್ ಮೈಂಡ್ . ಈತ ಇದೆ ವಿಚಾರವಾಗಿ ಜಲೀಲ್ ಜೊತೆ ಗಲಾಟೆ ಮಾಡುತ್ತಿದ್ದ. ಸದ್ಯ ಆತ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಬ್ಬರಿಗೆ ಕ್ರಿಮಿನಲ್ ಹಿನ್ನಲೆ :
ಬಂಧಿತ ಶೈಲೇಶ್ ಸುರತ್ಕಲ್ ಠಾಣೆಯ ರೌಡಿಶೀಟರ್ ಆಗಿದ್ದು, ಆತನ ವಿರುದ್ಧ ಎರಡು ಕೊಲೆ ಯತ್ನ ಪ್ರಕರಣಗಳಿವೆ. ಸವಿನ್ ಎಂಬಾತ ಮೂಲ್ಕಿ ಮತ್ತು ಸುರತ್ಕಲ್ ಠಾಣೆಯ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಮೂಲ್ಕಿ, ಮೈಸೂರಿನ ನರಸಿಂಹರಾಜ, ಪಡುಬಿದ್ರಿ ಮತ್ತು ಸುರತ್ಕಲ್ ಠಾಣೆಯಲ್ಲಿ ಕೇಸುಗಳಿವೆ. ಪಡುಬಿದ್ರಿ ಠಾಣೆಯಲ್ಲಿ ಮಾದಕ ವ್ಯಸನ ಸೇವನೆ ಪ್ರಕರಣವೂ ದಾಖಲಾಗಿದೆ. ಪವನ್ ಮೇಲೆ ಯಾವುದೇ ಪ್ರಕರಣಗಳಿಲ್ಲ.
ಕೊಲೆ ಯಾಕಾಯಿತು ?
ಹಿಂದು ಮಹಿಳೆಯೊಬ್ಬರು ಕಳೆದ ಏಳೆಂಟು ವರ್ಷದಿಂದ ಕೃಷ್ಣಾಪುರದಲ್ಲಿ ಜಲೀಲ್ ಅಂಗಡಿಯ ಸ್ವಲ್ಪ ದೂರದಲ್ಲಿ ವಾಸವಿದ್ದರು. ಆಕೆಯ ಗಂಡ ಆರಂಭದಲ್ಲಿ ವಿದೇಶದಲ್ಲಿದ್ದು, ನಂತರ ಆರು ವರ್ಷಗಳಿಂದ ಎಂಆರ್ಪಿಎಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮಹಿಳೆಯು ಗಂಡನ ಹಣವನ್ನು ವಿವಿಧೆಡೆ ಹೂಡಿಕೆ ಮಾಡಿ, ಸಾಕಷ್ಟು ನಷ್ಟ ಅನುಭವಿಸಿದ್ದಳು. ಆರ್ಥಿಕ ಸಂಕಷ್ಟ ಎದುರಾದಾಗ ಜಲೀಲ್ ಅಂಗಡಿಯ ಪಕ್ಕದ ಮಹಿಳಾ ಟೈಲರ್ ಬಳಿ ಕೆಲಸಕ್ಕೆ ಸೇರಿದ್ದಳು. ಆ ಟೈಲರ್ ಮಹಿಳೆಯ ಚಿನ್ನದ ಸರವನ್ನೂ ಈಕೆ ಕೊಂಡು ಹೋಗಿ ಅದರಿಂದ ಸಾಲ ಪಡೆದು, ಮರಳಿಸದೆ ರಾದ್ಧಾಂತ ನಡೆದು, ರಾಜಿ ಪಂಚಾಯಿತಿಕೆ ಮಾಡಲಾಗಿತ್ತು.

ಮೂಲಗಳ ಪ್ರಕಾರ ಕಳೆದ ಐದಾರು ವರ್ಷಗಳಿಂದ ಜಲೀಲ್ ಗೆ ಆಕೆಯ ಜತೆ ಅಕ್ರಮ ಸಂಬಂಧ ಇತ್ತು. ಆಕೆ, ಜಲೀಲ್ನಿಂದ ದ್ವಿಚಕ್ರ ವಾಹನ ಸೇರಿದಂತೆ ಸಾಕಷ್ಟು ನೆರವು ಪಡೆದುಕೊಂಡಿದ್ದಳು ಎನ್ನಲಾಗುತ್ತಿದೆ. ಎರಡು ವರ್ಷ ಹಿಂದೆ ಇಬ್ಬರೂ ಅಂಗಡಿಯೊಳಗೆ ಜತೆಯಾಗಿದ್ದಾಗ ಸ್ಥಳೀಯರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಇದು ಮಹಿಳೆಯ ಮನೆಯವರಿಗೂ ಗೊತ್ತಾಗಿತ್ತು. ಆಗ ಆಕೆಯ ಪತಿ ವಿದೇಶದಲ್ಲಿದ್ದು, ಈಗ ಎಂಆರ್ ಪಿಎಲ್ನಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಜಲೀಲ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಯುವಕರು ಗಲಾಟೆ ನಡೆಸಿ ಆತನಿಗೆ ಎಚ್ಚರಿಕೆ ನೀಡಿದ್ದರು. ಆಗ ಎಚ್ಚರಿಕೆ ನೀಡಿದ ವ್ಯಕ್ತಿ ಈಗ ಕೊಲೆ ಘಟನೆಯ ರೂವಾರಿಯಾಗಿದ್ದು, ಆತ ತಲೆಮರೆಸಿದ್ದಾನೆ ಎನ್ನಲಾಗಿದೆ. ಎರಡು ವರ್ಷಗಳ ಹಿಂದೆ ಮಹಿಳೆಯು ಜಲೀಲ್ನ ಅಂಗಡಿಯೊಳಗೆ ಇದ್ದಾಗ ಈ ವ್ಯಕ್ತಿಯೇ ಹಲವರನ್ನು ಕರೆದುಕೊಂಡು ಬಂದು ರೆಡ್ ಹ್ಯಾಂಡ್ ಆಗಿ ಹಿಡಿದು, ಗಲಾಟೆ ನಡೆಸಿ, ಎಚ್ಚರಿಕೆ ಕೊಟ್ಟು ಹೋಗಿದ್ದ. ಒಂದು ಮೂಲದ ಪ್ರಕಾರ, ಆತ ಕೂಡ ಮಹಿಳೆ ಜತೆ ಸಂಪರ್ಕ ಬೆಳೆಸಲು ಪ್ರಯತ್ನಿಸುತ್ತಿದ್ದ. ಆದರೆ, ಆಕೆ ನಿರಾಕರಿಸಿ ಜಲೀಲ್ ಜತೆ ಇರುತ್ತಿದ್ದಳು.

ಸಂಜೆ ಜೀವ ಬೆದರಿಕೆಯೊಡ್ಡಿ ರಾತ್ರಿ ಹತ್ಯೆ
ಬಂಧಿತ ಆರೋಪಿಗಳಲ್ಲದೆ, ತಲೆಮರೆಸಿದ ಆರೋಪಿ ಸೇರಿ ಆಗಾಗ ಜಲೀಲ್ ಕಂಡಾಗ ಗಲಾಟೆ ತೆಗೆಯುತ್ತಿದ್ದರು. ಆತನ ಅಂಗಡಿಗೆ ಬಂದು ಕೂಡ ಗಲಾಟೆ ಮಾಡಿದ್ದರು. ಡಿ.24ರಂದು ಮಧ್ಯಾಹ್ನ ಬಂಧಿತ ಮೂವರು ಮತ್ತು ಆ ಪ್ರಮುಖ ಆರೋಪಿಯು ಶನಿವಾರ ಮಧ್ಯಾಹ್ನ ಪಕ್ಕದ ಶೇಂದಿ ಅಂಗಡಿ ಬಳಿಕ ಕುಳಿತು ಕೊಲೆಗೆ ಸ್ಕೆಚ್ ಹಾಕಿದ್ದರು. ಅದರಂತೆ ಸಂಜೆ ಜಲೀಲ್ ಅಂಗಡಿಗೆ ಬರುತ್ತಿದ್ದಾಗ, ಶೈಲೇಶ್ ಬೈಕ್ನಲ್ಲಿ ಅಡ್ಡಗಟ್ಟಿದ್ದ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಮಹಿಳೆಯ ವಿಚಾರವಾಗಿ ನಿನ್ನನ್ನು ಕೊಲ್ಲದೆ ಬೀಡುವುದಿಲ್ಲ ಎಂದು ಬೆದರಿಕೆ ಹಾಕಿ ತೆರಳಿದ್ದ.
ಬಳಿಕ ಸವಿನ್ನನ್ನು ಮನೆಯಿಂದ ಕರೆದುಕೊಂಡು ಬಂದು, ಸುಮಾರು ಏಳು ಗಂಟೆ ವೇಳೆಗೆ ಜಲೀಲ್ನನ್ನು ಅಂಗಡಿಯಲ್ಲೇ ಚೂರಿನಲ್ಲಿ ಇರಿದು ಇಬ್ಬರೂ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಜಲೀಲ್ನನ್ನು ಪಕ್ಕದ ಅಂಗಡಿ ಮಹಿಳೆ ರಕ್ಷಿಸುವ ಪ್ರಯತ್ನ ಮಾಡಿದ್ದರು. ನಂತರ ಆಸ್ಪತ್ರೆಗೆ ಕೊಂಡು ಹೋದರೂ, ಆತ ಕೊನೆಯುಸಿರೆಳೆದಿದ್ದರು.
ಪರಾರಿಯಾಗಲು ನೆರವಾಗಿ ಸಿಕ್ಕಿ ಹಾಕಿಕೊಂಡ
ಹತ್ಯೆ ನಡೆಸಿ ಬಂದ ಆರೋಪಿಗಳಿಗೆ ಪವನ್ ತನ್ನ ಬೈಕ್ನಲ್ಲಿ ಪರಾರಿಯಾಗಲು ನೆರವಾಗಿದ್ದ. ಪರಾರಿಯಾದ ಆರೋಪಿಗಳು ದಾರಿ ಮಧ್ಯೆ ಬಟ್ಟೆ ಬದಲಾಯಿಸಿ ಆಟೋರಿಕ್ಷಾದಲ್ಲಿ ಕಾಪುವಿನ ವಸತಿಗೃಹಕ್ಕೆ ಬಂದಿದ್ದರು. ಅಲ್ಲಿಂದ ಕೆಲವರನ್ನು ಸಂಪರ್ಕಿಸಿ ಹಣದ ವ್ಯವಸ್ಥೆ ಮಾಡಿಕೊಂಡು ಮಂಬಯಿಗೆ ಪರಾರಿಯಾಗುವ ಸಿದ್ಧತೆಯಲ್ಲಿದ್ದರು. ಈ ಮಧ್ಯೆ ಭಾನುವಾರ ರಾತ್ರಿ ಮೂವರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಮುಖ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.
ಮಹಿಳೆಯು ಇನ್ನೊಬ್ಬಾಕೆಯಿಂದ ಟೈಲರಿಂಗ್ ಕಲಿತಿದ್ದಳು. ಅಲ್ಲಿಯೇ ಹೊಲಿಗೆ ನಡೆಸುತ್ತಿದ್ದುದರಿಂದ ಸಮೀಪದ ಅಂಗಡಿಯ ಜಲೀಲ್ನ ಪರಿಚಯವಾಗಿ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಬಂಧಿತ ಆರೋಪಿಗಳ ಪ್ರಕಾರ, ಜಲೀಲ್ ತನ್ನ ಅಂಗಡಿಗೆ ಬರುವ ಹಿಂದೂ ಮಹಿಳೆಯರೊಂದಿಗೆ ಅನುಚಿತಾಗಿ ವರ್ತಿಸುತ್ತಿದ್ದ. ಟೈಲರ್ ಮಹಿಳೆ ಮಾತ್ರವಲ್ಲ, ಆಕೆಗೆ ಟೈಲರಿಂಗ್ ಹೇಳಿಕೊಟ್ಟಾಕೆಯ ಜತೆಗೂ ಸಲುಗೆಯಿಂದ ಇರುತ್ತಿರುವ ಸಾಧ್ಯತೆಯ ಬಗ್ಗೆ ವಿಚಾರಣೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಆರೋಪಿಗಳಿಗೆ ಪೊಲೀಸ್ ಕಸ್ಟಡಿ
ಜಲೀಲ್ ಹತ್ಯೆಯ ಮೂವರು ಆರೋಪಿಗಳನ್ನು ಬಂಧಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಪಿಂಕಿ ನವಾಜ್ ಕೊಲೆ ಯತ್ನದ ಆರೋಪಿಗಳು
ಜಲೀಲ್ ಕೊಲೆ ಪ್ರಕರಣದಲ್ಲಿ ಬಂಧಿತ ಶೈಲೇಶ್ ಮತ್ತು ಸವಿನ್ ಕಾಂಚನ್ ಇಬ್ಬರೂ ಪಿಂಕಿ ನವಾಜ್ ಕೊಲೆ ಯತ್ನ ಪ್ರಕರಣದ ಆರೋಪಿಗಳು. 2021ರ ಫೆ.10ರಂದು ರೌಡಿಶೀಟರ್ ಪಿಂಕಿ ನವಾಜ್ ಹತ್ಯೆ ಯತ್ನ ನಡೆದಿತ್ತು. 2018ರಲ್ಲಿ ಸುರತ್ಕಲ್ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆಯ ಪ್ರಮುಖ ಆರೋಪಿ ಪಿಂಕಿ ನವಾಜ್ ಆಗಿದ್ದ. ಕೆಲವು ವರ್ಷಗಳ ಹಿಂದೆ ಕಾಟಿಪಳ್ಳದಲ್ಲಿ ನಡೆದಿದ್ದ ರವೂಫ್ ಹತ್ಯೆ ಆರೋಪಿ ಕೇಶವನ ಪುತ್ರ ಶೈಲೇಶ್ ಪೂಜಾರಿ ಎಂದು ಮೂಲಗಳು ತಿಳಿಸಿವೆ.
ನಿಷೇಧಾಜ್ಞೆ ಮುಂದುವರಿಕೆ
ಸುರತ್ಕಲ್ನ ಕೃಷ್ಣಾಪುರದಲ್ಲಿ ಅಬ್ದುಲ್ ಜಲೀಲ್ ಹತ್ಯೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಡಿ.29ರಂದು ಬೆಳಗ್ಗೆ ಆರು ಗಂಟೆ ತನಕ ವಿಸ್ತರಿಸಿ ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಆದೇಶಿಸಿದ್ದಾರೆ.