ಕಾಣಿಯೂರು : ಡಿ 27 : ಭಜನೆ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರು ಹಾಕಿದ ಪೋಸ್ಟ್ ವೊಂದು ಹಿಂದುತ್ವವಾದಿ ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪೊಸ್ಟ್ ಹಾಕಿದ ಬಳಿಕ ತಂಡವೊಂದು ರಾತ್ರಿ ವೇಳೆ ಮನೆ ಬಳಿ ಬಂದು ಕೈ ಬಾಂಬುಗಳನ್ನು ಸಿಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿರುವುದಾಗಿ ಸಂಜೀವ ಪೂಜಾರಿಯವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಅಪರಿಚಿತ ಆರೋಪಿಗಳ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣಿಯೂರು ಪರಿಸರದ ಅಸುಪಾಸಿನ ಗ್ರಾಮದ ನಿವಾಸಿಗಳಾದ ವಸಂತ ಎಂ, ತೀರ್ಥೇಶ್ ಎಂ., ಬಿ.ಜಯಂತ ಕುಮಾರ್, ಚೇತನ್, ಸಂತೋಷ್ ದೋಳ, ರವಿಕುಮಾರ್, ಲೋಕೇಶ್, ಪ್ರಸನ್ನ, ಲಕ್ಷ್ಮೀನಾರಾಯಣ ಬೆದರಿಕೆ ಹಾಕಿದವರು ಎಂದು ದೂರುದಾರರು ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಡಿ 20 ರಂದು ರಾತ್ರಿ 12 ಗಂಟೆಯ ಸುಮಾರಿಗೆ ಕೃತ್ಯ ನಡೆದಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. 15 ರಿಂದ 20 ಜನರ ತಂಡ ಕಾಣಿಯೂರಿನಲ್ಲಿರುವ ಸಂಜೀವ ಪೂಜಾರಿಯವರ ಮನೆ ಬಳಿ ಬಂದು ಮನೆಯ ಅಂಗಳದಲ್ಲಿ ಕೈ ಬಾಂಬುಗಳನ್ನು ಸಿಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಬಳಿಕ ಕಿಟಕಿಯ ಬಾಗಿಲು ಮತ್ತು ಮನೆಯ ಬಾಗಿಲುಗಳಿಗೆ ಬಡಿದಿದ್ದಾರೆ. ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ತಿಳಿಸಿದಾಗ ರಾತ್ರಿ ಕರ್ತವ್ಯದಲ್ಲಿದ್ದ ಸುಳ್ಯ ಪೊಲೀಸರು ಬಂದು ಧೈರ್ಯ ತುಂಬಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿ 21 ರಂದು ಪೂರ್ವಾಹ್ನ ಪುತ್ತೂರು ವಲಯ ಅರಣ್ಯ ಅಧಿಕಾರಿಯವರ ಕಚೇರಿಗೆ ನುಗ್ಗಿದ ಮುರಳೀಕೃಷ್ಣ ಹಸಂತಡ್ಕ ಎಂಬವರ ನೇತೃತ್ವದಲ್ಲಿ 50ಕ್ಕೂ ಅಧಿಕ ಜನರಿದ್ದ ತಂಡ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ. ಅದೇ ದಿನ ಸಂಜೆ 4 ಗಂಟೆಗೆ ಕುದ್ಮಾರಿನಲ್ಲಿರುವ ತಂಗಿಯ ಮನೆಗೆ 100ಕ್ಕಿಂತ ಅಧಿಕ ಜನರ ತಂಡ ಬಂದು ಕೊಲೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಬೆಳ್ಳಾರೆ ಠಾಣೆಯ ಪೊಲೀಸ್ ಕೃಷ್ಣಪ್ಪರವರಿಗೆ ದೂರವಾಣಿ ಮೂಲಕ ತಿಳಿಸಿದ್ದು ಗೃಹ ಸಚಿವರಿಗೆ ಬರೆದ ಪತ್ರದ ನಕಲನ್ನು ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟಿದ್ದೇನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಗಳ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯ ಎಲ್ಲಾ ಪೊಲೀಸರಿಗೂ ಗೊತ್ತಿದ್ದರೂ, ನಾನು ಹಾಗೂ ನನ್ನ ಪತ್ನಿಗೆ ಬಹಿರಂಗ ಬೆದರಿಕೆ ಹಾಕಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಸಂಜೀವ ಪೂಜಾರಿಯವರು ದೂರಿನಲ್ಲಿ ಆರೋಪಿಸಿದ್ದಾರೆ.
ಇವರು ನೀಡಿದ ದೂರಿನಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಇದೀಗ ಬೆಳ್ಳಾರೆ ಠಾಣೆ ಪೊಲೀಸರು ಐಪಿಸಿ ಕಲಂ 143, 447, 504, 506, 149, 9ಬಿ1 ಸಿಬಿ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.