ತಿರುವನಂತಪುರಂ: ಪಂಚತಾರಾ ಹೋಟೆಲ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಬಂಧಿಸಲಾಗಿದೆ. ತಮಿಳುನಾಡು ನಿವಾಸಿ ವಿನ್ಸೆಂಟ್ ಜಾನಿ (63) ಬಂಧಿತ ಕಳ್ಳ. ಈತನನ್ನು ತಿರುವನಂತಪುರಂ ಕಂಟೋನ್ಮೆಂಟ್ ಪೊಲೀಸರು ಕೊಲ್ಲಂ ನಲ್ಲಿ ಬಂಧಿಸಿದ್ದಾರೆ.
ತಿರುವನಂತಪುರದ ಪಂಚತಾರಾ ಹೋಟೆಲ್‌ನಿಂದ ಲ್ಯಾಪ್‌ಟಾಪ್ ಕಳ್ಳತನ ನಡೆಸಿದ ಪ್ರಕರಣದಲ್ಲಿ ಜಾನಿಯನ್ನು ಬಂಧಿಸಲಾಗಿದೆ.ಈತನ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.ಪಂಚತಾರಾ ಹೊಟೇಲ್‌ಗಳಲ್ಲಿ ಉಳಿದುಕೊಂಡು ಲ್ಯಾಪ್‌ಟಾಪ್ ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನು ಕದಿಯುವುದು ಈತನ ಮೋಡ್ ಅಫ್ ಅಪೆರೆಂಡಿ ( ಕಳ್ಳತನದ ಶೈಲಿ) ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರದ ಪಂಚತಾರಾ ಹೊಟೇಲ್‌ನಿಂದ ಲ್ಯಾಪ್‌ಟಾಪ್ ಕಳ್ಳತನವಾಗಿತ್ತು. ಹೋಟೆಲ್ ಸಿಬ್ಬಂದಿಗಳು ಕಂಟೋನ್ಮೆಂಟ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹೊಟೇಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕುಖ್ಯಾತ ಕಳ್ಳ ವಿನ್ಸೆಂಟ್ ಜಾನಿಯ ಕೈವಾಡವನ್ನು ಗುರುತಿಸಿದ್ದಾರೆ. ಬಳಿಕ ಸೈಬರ್ ಸೆಲ್ ಸಹಾಯದಿಂದ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಕೊಲ್ಲಂ ರೈಲು ನಿಲ್ದಾಣದಿಂದ ಆತನನ್ನು ಬಂಧಿಸಲಾಗಿದೆ.
ಇಂಗ್ಲಿಷ್ ಚೆನ್ನಾಗಿ ಮಾತನಾಡುವ ವಿನ್ಸೆಂಟ್ ಜಾನಿ ಉದ್ಯಮಿ ಎಂದು ಪರಿಚಯಿಸಿಕೊಂಡು ಪಂಚತಾರಾ ಹೋಟೆಲ್ ಗಳಲ್ಲಿ ರೂಂ ಬಾಡಿಗೆಗೆ ಪಡೆಯುತ್ತಿದ್ದ. ತನ್ನ ಮಾತಿನ ಚಾತುರ್ಯದಿಂದ ಸಿಬ್ಬಂದಿಯನ್ನು ಸ್ವಾಧೀನಪಡಿಸಿ ಕೊಠಡಿ ಬಾಡಿಗೆ ಮತ್ತು ಆಹಾರದ ಬಿಲ್ ರೂಂ ಖಾಲಿ ಮಾಡುವ ದಿನ ಒಟ್ಟಿಗೆ ಪಾವತಿಸುವುದಾಗಿ ನಂಬಿಸಿದ್ದ. ಹೆಚ್ಚಿನ ಬೆಲೆಯ ಐಷಾರಾಮಿ ಕೋಣೆಯಲ್ಲಿ ಒಂದು ಅಥವಾ ಎರಡು ದಿನ ತಂಗಿ ದುಬಾರಿ ಬೆಲೆಯ ಮದ್ಯ ಹಾಗೂ ಆಹಾರವನ್ನು ಆರ್ಡರ್ ಮಾಡುವುದು, ಹೋಟೆಲ್‌ನಲ್ಲಿ ವ್ಯಾಪಾರ ಸಭೆಯನ್ನು ಆಯೋಜಿಸುವುದಾಗಿ ತಿಳಿಸಿ ಅದಕ್ಕಾಗಿ ಹೋಟೆಲ್‌ನ ಕಾನ್ಫರೆನ್ಸ್ ಹಾಲ್ ಬುಕ್ ಮಾಡುವುದು, ಈ ಮಧ್ಯೆ ತನ್ನ ಲ್ಯಾಪ್‌ಟಾಪ್ ಕೆಟ್ಟುಹೋಗಿದೆ ಎಂದು ಸಿಬ್ಬಂದಿಗೆ ತಿಳಿಸಿ ಬದಲಿ ಲ್ಯಾಪ್‌ಟಾಪ್ ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ಲ್ಯಾಪ್ ಟಾಪ್ ನೊಂದಿಗೆ ಹೋಟೆಲ್ ನಿಂದ ಪರಾರಿಯಾಗುವುದು ಈತನ ಖಯಾಲಿಯಾಗಿದೆ.
ಹೋಟೆಲ್ ರೂಂ ಬುಕ್ ಮಾಡಲು ನಕಲಿ ಗುರುತಿನ ದಾಖಲೆ ನೀಡುತ್ತಿದ್ದ ಈತ ತೇರಿನಾಥನ್, ವಿಜಯ್ಕರನ್, ಮೈಕಲ್ ಜೋಸೆಫ್, ದಿಲೀಪ್ ಸ್ಟೀಫನ್, ಮೈಕಲ್ ಫೆರ್ನಾಂಡೋ, ರಾಜೀವ್ ದೇಸಾಯಿ, ಎಸ್.ಪಿ.ಕುಮಾರ್ ಮತ್ತು ಸಂಜಯ್ ರಾಣೆ ಮೊದಲಾಗಿ 11ಕ್ಕೂಹೆಚ್ಚು ಹೆಸರುಗಳನ್ನು ಬಳಸುತ್ತಿದ್ದ.2018ರಲ್ಲಿ ಕೊಲ್ಲಂನ ಪಂಚತಾರಾ ಹೋಟೆಲ್‌ನಲ್ಲಿ ಇದೇ ರೀತಿಯ ವಂಚನೆಗೆ ವಿನ್ಸೆಂಟ್ ನನ್ನು ಬಂಧಿಸಲಾಗಿದೆ
.ಮುಂಬೈ ನಗರದಲ್ಲಿ ವಿನ್ಸೆಂಟ್ ವಿರುದ್ಧ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.ತಿರುವನಂತಪುರಂನಲ್ಲಿ ಈತನ ಬಂಧನದ ಬಗ್ಗೆ ಮಾಹಿತಿ ಪಡೆದ ಆಂಧ್ರ ಪೊಲೀಸರು ಕಂಟೋನ್ಮೆಂಟ್ ಠಾಣೆಯನ್ನು ಸಂಪರ್ಕಿಸಿದ್ದಾರೆ. ಕರ್ನಾಟಕ ಸಹಿತ ಇತರ ರಾಜ್ಯಗಳಲ್ಲೂ ಈತ ಇದೇ ರೀತಿ ವಂಚನೆ ನಡೆಸಿರುವ ಬಗ್ಗೆ ಮಾಹಿತಿ ಇದೆ.
Jaleel Murder : ಮಂಗಳೂರು : ಜಲೀಲ್ ಹತ್ಯೆ –ಮಹಿಳೆಯರ ಸಹಿತ ಐವರು ಪೊಲೀಸ್ ವಶ ? ಅಸಭ್ಯ ವರ್ತನೆ ಕೊಲೆಗೆ ಹೇತು ?