ಕೋಝಿಕ್ಕೋಡ್: ಯುವತಿಯೊಬ್ಬಳು ದುಬೈನಿಂದ ಕರಿಪ್ಪುರ್ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ 1 ಕೋಟಿ ಮೌಲ್ಯದ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ನೆಕ್ರಾಜೆ ಉದ್ದಂ ಹೌಸ್ ನ ಶಹಲಾ (19) ಬಂಧಿತ ಯುವತಿ. ಈಕೆ ಒಳ ಉಡುಪಿನಲ್ಲಿ 1.884 ಕೆಜಿ ಚಿನ್ನದ ಮಿಶ್ರಣವನ್ನು ಬಚ್ಚಿಟ್ಟು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರಾತ್ರಿ 10:30ಕ್ಕೆ ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಬಂದಿದ್ದ ಶಹಲಾ ಕಸ್ಟಮ್ಸ್ ತಪಾಸಣೆ ಮುಗಿಸಿ 11 ಗಂಟೆಗೆ ವಿಮಾನ ನಿಲ್ದಾಣದಿಂದ ಹೊರಗೆ ಬಂದಾಗ, ಖಚಿತ ಮಾಹಿತಿ ಮೇರೆಗೆ ಪೊಲೀಸರು ಆಕೆಯನ್ನು ತಡೆದು ನಿಲ್ಲಿಸಿ ವಶಕ್ಕೆ ಪಡೆದಿದ್ದಾರೆ.
ಗಂಟೆಗಳ ಕಾಲ ವಿಚಾರಣೆ ನಡೆಸಿದರೂ ಯುವತಿ ಚಿನ್ನ ಇರುವುದನ್ನು ಒಪ್ಪಿಕೊಂಡಿರಲಿಲ್ಲ.ಪೊಲೀಸರ ಪ್ರಶ್ನೆಗಳಿಗೆ ಸಮರ್ಥನೆ ನೀಡಿ ಉತ್ತರಿಸಿದ್ದಾಳೆ.ಲಗೇಜ್ ತಪಾಸಣೆಗೆ ಒಳಪಡಿಸಲಾದರೂ ಚಿನ್ನ ಪತ್ತೆಯಾಗಿಲ್ಲ. ಬಳಿಕ ದೇಹ ತಪಾಸಣೆ ನಡೆಸಿದಾಗ , ಒಳ ಉಡುಪಿನಲ್ಲಿ ಮೂರು ಪ್ಯಾಕೆಟ್‌ಗಳಲ್ಲಿ ಚಿನ್ನ ಪತ್ತೆಯಾಗಿದೆ. ಒಳ ಉಡುಪಿನಲ್ಲಿ ನಾಜೂಕಾಗಿ ಚಿನ್ನದ ಪ್ಯಾಕೆಟ್ ಗಳನ್ನು ಹೊಲಿಯಲಾಗಿತ್ತು.
ಯುವತಿಯನ್ನು ಸಮಗ್ರ ವಿಚಾರಣೆ ನಡೆಸುವ ಮೂಲಕ ಚಿನ್ನ ಕಳ್ಳ ಸಾಗಾಟದ ಹಿಂದಿನ ಜಾಲವನ್ನು ಬೇಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.ವಶಪಡಿಸಿಕೊಂಡ ಚಿನ್ನವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಸಲಾಗುವುದು ಮತ್ತು ಹೆಚ್ಚಿನ ತನಿಖೆಗೆ ಕಸ್ಟಮ್ಸ್‌ಗೆ ವಿವರವಾದ ವರದಿ ಸಲ್ಲಿಸಲಾಗುವುದು.ಕೋಝಿಕ್ಕೋಡ್ ವಿಮಾನ ನಿಲ್ದಾಣದ ಹೊರಗೆ ಇತ್ತೀಚಿನ ದಿನಗಳಲ್ಲಿ ಪೊಲೀಸರು ವಶಪಡಿಸಿದ 87ನೇ ಚಿನ್ನ ಸಾಗಾಟ ಪ್ರಕರಣ ಇದಾಗಿದೆ.