ಹೊಸದಿಲ್ಲಿ: ಪುರಾಣದಲ್ಲಿ ಉಲ್ಲೇಖವಿರುವ ರಾಮಸೇತು (Ramasethu) ಭಾರತ ಮತ್ತು ಶ್ರೀಲಂಕಾದ ನಡುವಿನ ಪ್ರಾಂತ್ಯದಲ್ಲಿದೆ ಎಂದು ತಿಳಿಯಲಾಗಿದೆಯಾದರೂ ಈ ಪ್ರಾಂತ್ಯದ ಉಪಗ್ರಹ ಚಿತ್ರಗಳು ಈ ಭಾಗದಲ್ಲಿ ದ್ವೀಪಗಳು ಮತ್ತು ಸುಣ್ಣದ ಕಲ್ಲುಗಳನ್ನು ಪತ್ತೆಹಚ್ಚಿದ್ದರೂ ಅವುಗಳೇ ರಾಮಸೇತುವಿನ ಪಳೆಯುಳಿಕೆ ಎಂದು ನಿಖರವಾಗಿ ಹೇಳಲು ವಿಶ್ವಾಸಾರ್ಹವಾದ ಪುರಾವೆಗಳಿಲ್ಲ ಎಂದು ಆಡಳಿತರೂಡ ಮೋದಿ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಇದೇ ಮಾತನ್ನು 2007ರಲ್ಲಿ ಕಾಂಗ್ರೇಸ್ ಹೇಳಿದಾಗ ಬಿಜೆಪಿ ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸಿತ್ತು.
ಭಾರತದ ಇತಿಹಾಸದ ಕುರಿತು ವೈಜ್ಞಾನಿಕ ಅಧ್ಯಯನವನ್ನು ನಡೆಸಲು ಸರಕಾರ ಶ್ರಮಿಸುತ್ತಿದೆಯೇ ಎಂದು ಬಿಜೆಪಿ ಸಂಸದ ಕಾರ್ತಿಕೇಯ ಶರ್ಮ ಅವರ ಮೌಖಿಕ ಪ್ರಶ್ನೆಗೆ ಬಾಹ್ಯಾಕಾಶ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಪ್ರತಿಕ್ರಿಯಿಸುತ್ತಿದ್ದರು.
ಬಾಹ್ಯಾಕಾಶ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ, ಆದರೆ ರಾಮಸೇತು ವಿಚಾರದಲ್ಲಿ ಕೆಲವೊಂದು ಇತಿಮಿತಿಗಳಿವೆ ಏಕೆಂದರೆ ಈ ಇತಿಹಾಸ 18,000 ವರ್ಷಗಳಷ್ಟು ಹಳೆಯದು ಹಾಗೂ ಇತಿಹಾಸದ ಪ್ರಕಾರ ಈ ಸೇತುವೆ 56 ಕಿಮೀ ಉದ್ದವಿತ್ತು ಎಂದು ಸಚಿವರು ಹೇಳಿದರು.
ಉಪಗ್ರಹ ಚಿತ್ರಗಳಿಂದ ಅಲ್ಲಿ ಹಿಂದೆ ಇದ್ದ ನಿಖರ ನಿರ್ಮಾಣದ ಕುರಿತು ಹೇಳುವುದು ಕಷ್ಟ, ಆದರೆ ಆ ನಿರ್ಮಾಣಗಳು ಅಸ್ತಿತ್ವದಲ್ಲಿದ್ದವು ಎಂಬುದನ್ನು ನೇರವಾಗಿ ಅಥವಾ ಪರೋಕ್ಷವಾಗಿ ಕೆಲವೊಂದು ಅಂಶಗಳು ಸೂಚಿಸುತ್ತವೆ ಎಂದು ಸಚಿವರು ಹೇಳಿದರು.
ಇದೇ ರೀತಿ ಪೂರವೆಯಿಲ್ಲ ಎಂದು ಕಾಂಗ್ರೇಸ್ ಹೇಳಿದ್ದಾಗ ದೇಶದಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಗುಜರಾತ್‌ನ ಚುನಾವಣೆಗೆ ರಾಮಸೇತು ವಿಷಯ ಲಿಂಕ್ ಮಾಡಿ ‘ರಾಮ vs ರೋಮ್’ ಎಂದು ಕಾಂಗ್ರೇಸನ್ನು ದೂರಿದ್ದರು. ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕ ಮಾಡಬೇಕೆಂದು ಒತ್ತಾಯಿಸಿದ್ದರು.