Puttur Medical College : ಪುತ್ತೂರು: ಪುತ್ತೂರಿನ ಜನತೆಯ ಅತ್ಯಂತ ಬೇಡಿಕೆಯಾದ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಪಕ್ಷಾತೀತವಾಗಿ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಂಡು ಪುತ್ತೂರಿನಲ್ಲಿ ಸ್ಥಾಪನೆ ಮಾಡಲು ಪಣ ತೊಡಲಾಗುವುದು. ಇದಕ್ಕಾಗಿ ಜನವರಿ ತಿಂಗಳ ಅಂತ್ಯದೊಳಗೆ ಸುಮಾರು 50 ಸಾವಿರ ಮಂದಿಯನ್ನು ಸಂಪರ್ಕಿಸಿ ಸಹಿ ಸಂಗ್ರಹ ಅಭಿಯಾನ ಕೈಗೊಳ್ಳಲಾಗುವುದು ಎಂದು ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ತಿಳಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ 40 ಎಕ್ರೆ ಜಾಗ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕಾದಿರಿಸಲಾಗಿದೆ. ಕಾಲೇಜು ಸ್ಥಾಪನೆಗೆ ಪೂರಕವಾಗಿ ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ರೋಟರಿ ಮುಂತಾದ ಸಂಘ ಸಂಸ್ಥೆಗಳು ಸೇರಿದಂತೆ ಸುಮಾರು 15 ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ ಅರಿವು ಮೂಡಿಸುವ ಕೆಲಸ ಒಂದು ಹಂತದಲ್ಲಿ ನಡೆದಿದೆ. ಸಮಾಜದ ಎಲ್ಲಾ ಸಿದ್ಧಾಂತವನ್ನು ಒಪ್ಪಿಕೊಂಡು, ಧರ್ಮ-ಮತ, ಬೇಧವಿಲ್ಲದೆ ಪಕ್ಷಾತೀತವಾಗಿ ಸರಕಾರದ ಜತೆಗೂಡಿಕೊಂಡು ಸಾಮರಸ್ಯದಿಮದ ಕಾಲೇಜು ನಿರ್ಮಾಣದ ಗುರಿಯನ್ನು ತಲುಪುವ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ಒಂದು ಹಂತದಲ್ಲಿ ಕಾಲೇಜು ಸ್ಥಾಪನೆಯಾಗುವಲ್ಲಿ ಜನ ಬೆಂಬಲದ ಅಗತ್ಯವಿದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸವೂ ನಡೆಯಬೇಕು. ಕಾದಿರಿಸಲಾದ ಜಾಗದಲ್ಲಿ ಬೇರೆ ಯಾವುದೇ ಯೋಜನೆ ಸ್ಥಾಪನೆ ಯಾವುದೇ ಕಾರಣಕ್ಕೂ ಆಗಬಾರದು. ಮೆಡಿಕಲ್ ಕಾಲೇಜು ಸ್ಥಾಪನೆಗೆ ಪೂರ್ವಭಾವಿಯಾಗಿ ಪುತ್ತೂರು ಸರಕಾರಿ ಆಸ್ಪತ್ರೆ 300 ಬೆಡ್‍ಗೆ ಮೇಲ್ದರ್ಜೆಗೇರಬೇಕು. ಈ ನಿಟ್ಟಿನಲ್ಲಿ ಒತ್ತಡ ಹೇರಲಾಗುವುದು ಎಂದು ಅವರು ಹೇಳಿದರು.
ಪುತ್ತೂರು ಶಾಸಕರ ಜತೆ ಸಮಿತಿ ವತಿಯಿಂದ ಈಗಾಗಲೇ ಚರ್ಚಿಸಲಾಗಿದೆ. ಕೇಂದ್ರ ಸರಕಾರದ ನೀತಿ ಆಯೋಗದ ಶಿಫಾರಸ್ಸಿನಂತೆ ಖಾಸಗಿಯವರು ಎಂಟ್ರಿ ಆದರೆ ಬಡವರಿಗೆ ಬಡವರು ವಂಚಿತರಾಗುತ್ತಾರೆ. ಆದ್ದರಿಂದ ಕಾಲೇಜು ನಿರ್ಮಾಣದಲ್ಲಿ ಪಿಪಿಪಿ ಯಾವುದೇ ಕಾರಣಕ್ಕೆ ಎಂಟ್ರಿ ಪಡೆಯಬಾರದು. ಈ ನಿಟ್ಟಿನಲ್ಲಿ ಶಾಸಕರನ್ನು ಮತ್ತೊಮ್ಮೆ ಭೇಟಿ ಮಾಡಿ ಮಾತುಕತೆ ಮಾಡಲಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಹೋರಾಟ ಸಮಿತಿ ಸಂಚಾಲಕ ಲಕ್ಷ್ಮೀಶ ಗಬ್ಲಡ್ಕ, ಉಪಾಧ್ಯಕ್ಷರಾದ ಝೇವೀಯರ್ ಡಿ’ಸೋಜಾ, ರೂಪೇಶ್ ರೈ, ವಿಶು ಕುಮಾರ್ ಉಪಸ್ಥಿತರಿದ್ದರು.