ಪುತ್ತೂರು: ಬೆಳ್ಳಾರೆಯ ಯುವ ಉದ್ಯಮಿ ನವೀನ್ ಅವರನ್ನು ಹುಡುಕಿಕೊಡುವಂತೆ ಅವರ ತಾಯಿ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪೆಸ್ ಅರ್ಜಿ ಸಲ್ಲಿಸಿದ್ದು ಅದನ್ನು ಪುರಸ್ಕರಿಸಿದ ಹೈ ಕೋರ್ಟು ಪುತ್ರನನ್ನು ತಾಯಿಯ ಮಡಿಲಿಗೊಪ್ಪಿಸಿದೆ.
ಡಿ 19 ರಂದು ಬೆಳ್ಳಾರೆಯ ನವೀನ್ ಅವರ ಮನೆಯಲ್ಲಿ ಹೈಡ್ರಾಮ ನಡೆದಿದ್ದು, ನವೀನ್ ಅವರನ್ನು ಅವರ ತಂದೆ, ಪತ್ನಿ , ಪತ್ನಿಯ ತಾಯಿ ಸೇರಿದಂತೆ ತಂಡವೊಂದು ನವೀನ್ ಅವರ ತಾಯಿ ಹಾಗೂ ಅಣ್ಣನ ಪತ್ನಿಯ ಸಮ್ಮುಖವೇ ಅಂಬ್ಯುಲೆನ್ಸ್ ನಲ್ಲಿ ಬಲವಂತವಾಗಿ ಹಾಕಿ ಕರೆದುಕೊಂಡು ಹೋಗಿತ್ತು. ಈ ಅಂಬ್ಯುಲೆನ್ಸನ್ನು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಸ್ಥಳೀಯರ ತಂಡ ತಡೆದು ಪೊಲೀಸರಿಗೊಪ್ಪಿಸಿತ್ತು. ಇದೊಂದು ಅಪಹರಣ ಕೃತ್ಯ ಎಂದು ನವೀನ್ ತಾಯಿ ನೀರಜಾಕ್ಷಿಯವರು ಆರೊಪಿಸಿ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದರು.
ಸುಂಟಿಕೊಪ್ಪದಲ್ಲಿ ನವೀನ್ ಅವರನ್ನು ಕರೆದುಕೊಂಡು ಹೋಗುತ್ತಿದ್ದ ಅಂಬ್ಯುಲೆನ್ಸ್ ಅನ್ನು ತಡೆದ ಬಳಿಕ ನವೀನ್ ಎಲ್ಲಿ ಹೋಗಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿಯಿಲ್ಲದ ಅವರ ತಾಯಿ ಹೈಕೋರ್ಟುನಲ್ಲಿ ಹೇಬಿಯಾಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಪೊಲೀಸ್ ಉನ್ನತಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ನವೀನರನ್ನು ದ.22 ರಂದು ಹೈಕೋರ್ಟಿಗೆ ಹಾಜರುಪಡಿಸಲು ಕೋರ್ಟು ಪೊಲೀಸ್ ಇಲಾಖೆಗೆ ನೋಟೀಸು ಜಾರಿ ಮಾಡಿತ್ತು. ನಿನ್ನೆ ಬೆಳ್ಳಾರೆ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು ಕುಡಿಯುವ ಚಟ ಬಿಡಿಸಲು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ನವೀನರನ್ನು ಸೇರಿಸಲಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿರುವ ನವೀನರನ್ನು ಕಂಡು ಮಾತನಾಡಿ ಅವರ ಅಭಿಪ್ರಾಯ ತಿಳಿದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನ್ಯಾಯವಾದಿಯೊಬ್ಬರಿಗೆ ಸೂಚಿಸಿದ ಹೈಕೋರ್ಟ್ ಸಂಜೆ 5 ಗಂಟೆಗೆ ವಿಚಾರಣೆಯನ್ನು ಮುಂದೂಡಿತು. ಸೂಚಿಸಲ್ಪಟ್ಟ ನ್ಯಾಯವಾದಿಯು ಆಸ್ಪತ್ರೆಗೆ ಹೋಗಿ ನವೀನರೊಡನೆ ಮಾತನಾಡಿದಾಗ, ತನ್ನನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ತಂದು ಹಾಕಿರುವುದಾಗಿಯೂ, ತನ್ನನ್ನು ಇಲ್ಲಿಂದ ಹೊರಗೆ ಕರೆದುಕೊಂಡು ಹೋಗುವಂತೆಯೂ ಆತ ಹೇಳಿದರೆನ್ನಲಾಗಿದೆ.
ಸಂಜೆ ನ್ಯಾಯವಾದಿಯು ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಆಸ್ಪತ್ರೆಯಲ್ಲಿರುವ ನವೀನರನ್ನು ಡಿಸ್ಚಾರ್ಜ್ ಮಾಡಿ ತಾಯಿ ನೀರಜಾಕ್ಷಿಯವರ ವಶಕ್ಕೆ ಒಪ್ಪಿಸಬೇಕು. ಆದರೆ ಮುಂದಿನ ಮಂಗಳವಾರದ ವರೆಗೆ ನವೀನ್ ಬೆಂಗಳೂರಲ್ಲೇ ತಾಯಿ ಜತೆ ಇರಬೇಕು. ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಹೈಕೋರ್ಟು ಆದೇಶ ಮಾಡಿದೆ. ಅದರಂತೆ ಸಂಜೆ ನವೀನ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
.