ಮಂಗಳೂರು: ಡಿ 23 : ರಂಗಸ್ಥಳದಲ್ಲಿ ಯಕ್ಷಗಾನ ನಡೆಯುತ್ತಿದ್ದಾಗ ಪಾತ್ರದಾರಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕನೇ ಮೇಳದ ಕಲಾವಿದ ಗುರುವಪ್ಪ ಬಾಯಾರು ( 58) ಮೃತಪಟ್ಟವರು.
ಕಟೀಲು ಕ್ಷೇತ್ರದ ಸರಹದ್ದಿನಲ್ಲಿ ಸರಸ್ವತೀ ಸದನದಲ್ಲಿ ಗುರುವಾರ ತ್ರಿಜನ್ಮ ಮೋಕ್ಷ ಯಕ್ಷಗಾನ ಆಯೋಜಿಸಲಾಗಿತ್ರು. ಅದರಲ್ಲಿ ಗುರುಪಪ್ಪ ಬಾಯರು ಶಿಶುಪಾಲನ ಪಾತ್ರಧಾರಿಯಾಗಿದ್ದರು. ಇನ್ನೊಂದು ಪಾತ್ರಧಾರಿ ಯಕ್ಷಗಾನದ ರಂಗಸ್ಥಳದಲ್ಲಿ ಕುಣಿಯುತ್ತಿದ್ದಾಗ ಅಲ್ಲೇ ಇದ್ದ ಗುರುವಪ್ಪ ಬಾಯಾರು ಅವರಿಗೆ ಹೃದಾಯಾಘಾತವಾಗಿ ರಂಗಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಅಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.
ʼತ್ರಿಜನ್ಮ ಮೋಕ್ಷʼ ಯಕ್ಷಗಾನದ ಅಂತಿಮ ಭಾಗದಲ್ಲಿ ಶಿಶುಪಾಲ- ದಂತವಕ್ತ್ರರ ವಧೆಯ ಪ್ರಸಂಗವಿದೆ. ಆಟದ ಕೊನೆಯವರೆಗೂ ಶಿಶುಪಾಲನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಗುರುವಪ್ಪ ಅವರು ಕೊನೆಯ ಹಂತದಲ್ಲಿ ಹೃದಯಾಘಾತದಿಂದ ರಂಗಸ್ಥಳದಿಂದ ಕೆಳಗೆ ಕುಸಿದು ಬಿದ್ದಿದ್ದಾರೆ.

ಕೂಡಲೇ ಕಾರ್ಯಕ್ರಮ ನಿಲ್ಲಿಸಿ ಗುರುವಪ್ಪ ಅವರನ್ನು ಉಪಚರಿಸಿ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಗುರುವಪ್ಪ ಬಾಯಾರು ಅವರು ಕಟೀಲು ಮೇಳದಲ್ಲಿ ಹಲವು ದಶಕಗಳಿಂದ ಪಾತ್ರ ನಿರ್ವಹಿಸುತ್ತಿದ್ದು, ಎರಡನೇ ಹಾಗೂ ಬಣ್ಣದ ವೇಷಗಳ ನಿರ್ವಹಣೆಗೆ ಖ್ಯಾತರಾಗಿದ್ದರು. ದೇವಿ ಮಹಾತ್ಮೆಯ ವಿದ್ಯುನ್ಮಾಲಿ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.

ಐದು ವರ್ಷಗಳ ಹಿಂದೆ 2017ರಲ್ಲಿ ಕಟೀಲು ಮೇಳದ ಪ್ರಸಿದ್ದ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರು ಬಜ್ಪೆಯಲ್ಲಿ ಯಕ್ಷಗಾನ ಪ್ರದರ್ಶಿಸುತ್ತಿದ್ದಾಗ ರಂಗಸ್ಥಳದಲ್ಲೆ ಕುಸಿದು ಇಹಲೋಕ ತ್ಯಜಿಸಿದ್ದರು. ಅದಕ್ಕೂ ಮೊದಲು ಹಿರಿಯ ಯಕ್ಷಗಾನ ಕಲಾವಿದ ಅರುವ ನಾರಾಯಣ ಶೆಟ್ಟಿಯವರು ಕೂಡ ವೇಷಧಾರಿಯಾಗಿ ರಂಗಸ್ಥಳದಲ್ಲೆ ಕುಸಿದು ಬಿದ್ದು ಮೃತಪಟ್ಟಿದ್ದರು.