ಬೆಳ್ಳಾರೆ : ಡಿ 23 : ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಾರೆ ಎಂಬ ದೂರಿನಡಿ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರ ವಿರುದ್ದ ಬೆಳ್ಳಾರೆ ಠಾಣೆಯಲ್ಲಿ ಡಿ 22 ರಂದು ಪ್ರಕರಣ ದಾಖಲಾಗಿದೆ. ಕಳೆದೊಂದು ವರ್ಷದಿಂದ ಅವರು ವಿವಿಧ ಪೇಸ್ ಬುಕ್ ಪೋಸ್ಟ್ ಗಳಲ್ಲಿ ಭಾರತ ದೇಶ ಮತ್ತು ಹಿಂದೂ ಸಂತ ಸಮಾಜದ ಬಗ್ಗೆ ಅತಿ ಕೀಳು ಮಟ್ಟಕ್ಕೆ ಬಂದಿದೆ ಎನ್ನುವ ಕಥೆ ಕಟ್ಟಿ ಸಂದೇಶ ರವಾನಿಸಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ.
ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಪೂವಾಜೆ ಮನೆ ನಿವಾಸಿ ಕಿಟ್ಟಣ್ಣ ರೈಯವರ ಪುತ್ರ ಸಚಿನ್ ರೈ ಎಂಬವರು ಸಂಜೀವ ಪೂಜಾರಿ ವಿರುದ್ದ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು, ಆ ದೂರಿನ ಅಧಾರದಲ್ಲಿ IPc ಸೆಕ್ಷನ್ 505(2), 295ಎಯಂತೆ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ ?
ಕುಣಿತ ಭಜನೆಯಿಂದ ಮಲಗಿದ ಭಜನೆ ಎಂಬ ತಲೆ ಬರಹದಲ್ಲಿ ಸುಳ್ಳು ಮತ್ತು ಆಧಾರ ರಹಿತವಾದ ತಪ್ಪು ಮಾಹಿತಿ ಯಿಂದ ಕೂಡಿದ ಸಂದೇಶವನ್ನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಡಿ 20 ರಂದು ಸಂಜೀವ ಪೂಜಾರಿಯವರು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮತ್ತು ಗಂಡುಗಳು ಅನೈತಿಕ ಚಟುವಟಿಕೆಯಲ್ಲಿ, ಭಜನೆ ಎಂಬ ಹೆಸರಿನಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬಂತೆ ಬಿಂಬಿಸಲಾಗಿದೆ. ಗುಡ್ಡದ ಮರದಡಿಯಲ್ಲಿ ಮಲಗಿ ಭಜನೆ ಮಾಡುವವರೆಗೆ ಎಂಬಿತ್ಯಾದಿ ಕೀಳು ಅಭಿರುಚಿಯ ಅವಹೇಳನ ಕರವಾದ ಮಹಿಳೆಯ ಚಾರಿತ್ರ್ಯಕ್ಕೆ, ಗೌರವಕ್ಕೆ ಧಕ್ಕೆ ತರುವ ಒಳಾರ್ಥ ಪದ ಬಳಕೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ವ್ಯಾಪಕವಾಗಿ ಪ್ರಸಾರ ಮಾಡಿರುತ್ತಾರೆ.

ಜಾತಿ ದ್ವೇಷ ಬರುವಂತೆ, ಕೋಮುಗಲಭೆಗೆ ಪ್ರಚೋಧಿಸುವ ರೀತಿಯಲ್ಲಿ, ಮುಸ್ಲಿಂ ಮತ್ತು ಕ್ರೈಸ್ತ ಹೆಸರನ್ನ ಉಲ್ಲೇಖಿಸಿ ಹಿಂದೂ ಸಮಾಜದ ಕೋಟ್ಯಾಂತರ ಜನರು ನಂಬಿಕೊಂಡು ಆರಾಧಿಸಿಕೊಂಡು ಬಂದಿರುವ ಆಂಜನೇಯ ದೇವರನ್ನ ಹಿಯಾಳಿಸಿ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಸಮಾಜದ ಭಿನ್ನ ವರ್ಗಗಳ ಮಧ್ಯ ಗಲಭೆ ಹುಟ್ಟುವಂತೆ ಸಾಮಾಜಿಕ ಸಾಮರಸ್ಯ ಸ್ವಾಸ್ಥ್ಯ ಕೆಡವುವ ರೀತಿಯಲ್ಲಿ ಅಲ್ಲದೆ ಒಂದು ಸಮಾಜದ ನಂಬಿಕೆ ಆಚಾರ ವಿಚಾರಗಳಿಗೆ ನೋವುಂಟು ಮಾಡುವ ಅವಹೇಳನಕಾರಿ ಸಂದೇಶ ಎಂದು ಆರೋಪಿಸಲಾಗಿದೆ.

ಅಲ್ಲದೇ ಸಂಜೀವ ಪೂಜಾರಿಯವರು ತನ್ನ ವಾಟ್ಸಾಪಿನಲ್ಲಿ ದೇಶದ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಯವರ ಬಗ್ಗೆ ಸಾವುಗಳನ್ನು ಉಲ್ಲೇಖಿಸಿ ಸಂದೇಶ ರವಾನಿಸಿದ್ದಾರೆ ಎಂದು ದೂರಿದ್ದಾರೆ . ಜೀವ ಪೂಜಾರಿ ಕಾಣಿಯೂರುರವರು ದಿನಾಂಕ 30-12-2021 ರಂದು ತನ್ನ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಸಂದೇಶ ರವಾನೆ ಮಾಡಿರುವುದಲ್ಲದೇ ನಂತರ ದಿನಾಂಕ 20.12.2022 ರಂದು ಸುಳ್ಳು ಮತ್ತು ಆಧಾರರಹಿತವಾದ ವಿಚಾರವನ್ನು, ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ರವಾನಿಸಿದ್ದು ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಲ ಬೇಕೆಂದು ದೂರಿನಲ್ಲಿ ಅಗ್ರಹಿಸಲಾಗಿತ್ತು.
ಪ್ರತಿಭಟನೆ – ಮನವಿ
ಆಕ್ಷೇಪಾರ್ಹ ಪೋಸ್ಟ್ ಹಾಕಿದ ಸಂಜೀವ ಪೂಜಾರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರ ವಿರುದ್ದ ಅರಣ್ಯ ಇಲಾಖೆಯೂ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ, ಹಿಂದೂತ್ವವಾದಿ ಸಂಘಟನೆಗಳು ಹಾಗೂ ಕೆಲ ಭಜನಾ ಸಮಿತಿಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದವು