ಮಿರ್ಜಾಪುರ: ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಬಳಿಕ, ಅದೇ ಹೆಸರಿನ ಮತ್ತೊಬ್ಬ ಸಾಧಕಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರದ ಟಿವಿ ಮೆಕ್ಯಾನಿಕ್‌ನ ಮಗಳು ಸಾನಿಯಾ ಮಿರ್ಜಾ (Sania Mirza) , ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ ಎನಿಸಿಕೊಳ್ಳಲಿದ್ದಾರೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) ಪರೀಕ್ಷೆಯಲ್ಲಿ ಅವರು ಒಟ್ಟಾರೆ 149ನೇ ಶ್ರೇಯಾಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ದೇಶದ ಮೊದಲ ಮಹಿಳಾ ಫೈಟರ್ ಪೈಲಟ್, ಫ್ಲೈಟ್ ಲೆಫ್ಟಿನೆಂಟ್ ಅವನಿ ಚತುರ್ವೇದಿ ತಮಗೆ ಸ್ಫೂರ್ತಿ ಎಂದು ಮಿರ್ಜಾಪುರ ದೆಹತ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜಸೋವರ್ ಗ್ರಾಮದ ಸಾನಿಯಾ ಮಿರ್ಜಾ ಹೇಳಿದ್ದಾರೆ.
“ನಾನು ಫ್ಲೈಟ್ ಲೆಫ್ಟಿನೆಂಟ್ ಅವನಿ ಚತುರ್ವೇದಿ ಅವರಿಂದ ಬಹಳ ಸ್ಫೂರ್ತಿ ಪಡೆದಿದ್ದೇನೆ. ಅವರನ್ನು ನೋಡಿಯೇ ನಾನು ಎನ್‌ಡಿಎ ಸೇರಿರುವುದು. ಯುವ ಪೀಳಿಗೆ ಮುಂದೊಮ್ಮೆ ನನ್ನಿಂದ ಕೂಡ ಪ್ರೇರಣೆ ಪಡೆಯಲಿದೆ ಎಂಬ ಆಶಯ ನನ್ನದು” ಎಂದು ಸಾನಿಯಾ ತಿಳಿಸಿದ್ದಾರೆ.
ಎನ್‌ಡಿಎ ಪರೀಕ್ಷೆಯಲ್ಲಿ ಮಹಿಳೆಯರಿಗೆ ಮೀಸಲಿಟ್ಟ 19 ಸೀಟುಗಳಲ್ಲಿ ಸಾನಿಯಾ ಎರಡನೇ ಸ್ಥಾನ ಪಡೆದಿದ್ದಾರೆ. ಅವನಿ ಚತುರ್ವೇದಿ ಅವರು ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಖ್ಯಾತಿಗೆ ಒಳಗಾಗಿದ್ದರು. ಅವರ ಜತೆಗೆ ಮೋಹನಾ ಸಿಂಗ್ ಜಿತರ್ವಾಲ್ ಮತ್ತು ಭಾವನಾ ಕಾಂತ್ ಕೂಡ ಯುದ್ಧ ವಿಮಾನಗಳನ್ನು ಹಾರಿಸಿದ ಮೊದಲ ಮಹಿಳೆಯರಲ್ಲಿ ಸೇರಿದ್ದಾರೆ.
ಚಿಕ್ಕ ಹಳ್ಳಿಯಿಂದ ಬಂದಿರುವ ಸಾನಿಯಾ, ತಮ್ಮ ಗ್ರಾಮದ ಪಂಡಿತ್ ಚಿಂತಾಮಣಿ ದುಬೆ ಅಂತರ್ ಕಾಲೇಜಿನಲ್ಲಿ ಪ್ರೌಢಶಾಲೆ ಶಿಕ್ಷಣ ಪೂರೈಸಿದ್ದರು. 10ನೇ ತರಗತಿ ಬಳಿಕ ಮಿರ್ಜಾಪುರದ ಗುರು ನಾನಕ್ ಬಾಲಕಿಯರ ಅಂತರ್ ಕಾಲೇಜಿನಲ್ಲಿ 12ನೇ ತರಗತಿ ಪೂರ್ಣಗೊಳಿಸಿದರು. 12ನೇ ತರಗತಿ ಉತ್ತರ ಪ್ರದೇಶ ಪರೀಕ್ಷಾ ಮಂಡಳಿಯಲ್ಲಿ ಮಿರ್ಜಾಪುರಕ್ಕೆ ಟಾಪರ್ ಆಗಿದ್ದರು. 2022ರ ಏಪ್ರಿಲ್‌ನಲ್ಲಿ ಎನ್‌ಡಿಎ ಪರೀಕ್ಷೆಗೆ ಹಾಜರಾದ ಸಾನಿಯಾ, 149 ರಾಂಕ್‌ನೊಂದಿಗೆ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಸಾನಿಯಾ ಅವರು ಡಿ. 27ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಎನ್‌ಡಿಎ ಖಾಡಕ್ವಲ್ಸಾವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ನಿರೀಕ್ಷೆಯಂತೆ ನಡೆದರೆ ಸಾನಿಯಾ ಮಿರ್ಜಾ ಅವರು ಭಾರತೀಯ ವಾಯುಪಡೆಯ ಮೊದಲ ಮುಸ್ಲಿಂ ಯುದ್ಧ ವಿಮಾನ ಪೈಲಟ್ ಎನಿಸಿಕೊಳ್ಳಲಿದ್ದಾರೆ.
“ಫೈಟರ್ ಪೈಲಟ್ ವಿಭಾಗದಲ್ಲಿ ಮಹಿಳೆಯರಿಗೆ ಕೇವಲ ಎರಡು ಸೀಟುಗಳನ್ನು ಮೀಸಲಿಡಲಾಗಿದೆ. ಮೊದಲ ಪ್ರಯತ್ನದಲ್ಲಿ ಸೀಟು ಪಡೆಯುವಲ್ಲಿ ನಾನು ವಿಫಲಳಾಗಿದ್ದೆ” ಎಂದು ಸಾನಿಯಾ ತಿಳಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಉತ್ತಮ ಸಂವಹನ ಕೌಶಲ ಹೊಂದಿರುವವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ ಎನ್ನುವುದು ತಪ್ಪುಕಲ್ಪನೆ ಎಂದು ಅವರು ಹೇಳಿದ್ದಾರೆ. ಹಿಂದಿ ಮಾಧ್ಯಮ ಶಾಲೆಯಲ್ಲಿಯೇ ತಾವು ಓದಿರುವುದಾಗಿ ತಿಳಿಸಿರುವ ಸಾನಿಯಾ, ಹಿಂದಿ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಕೂಡ ದೃಢನಿಶ್ಚಯವಿದ್ದರೆ ಸಾಧನೆ ಮಾಡಬಹುದು ಎಂದಿದ್ದಾರೆ.