ಕಾಸರಗೋಡು: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ “ಕಾಂತಾರ” ಸಿನಿಮಾದ “ವರಾಹ ರೂಪಂ” ಹಾಡಿನ ಮೇಲೆ ಕೃತಿ ಚೌರ್ಯ ಆರೋಪ ಹೊರಿಸಿದ ಕೇರಳದ ಪ್ರಮುಖ ಮ್ಯೂಸಿಕ್ ಬ್ಯಾಂಡ್ “ಥೈಕ್ಕುಡಂ ಬ್ರಿಡ್ಜ್” ಈಗ ಸ್ವತ : ವಂಚನೆ ಆರೋಪಕ್ಕೆ ತುತ್ತಾಗಿದೆ. .
ಮ್ಯೂಸಿಕ್ ಕಾರ್ಯಕ್ರಮ ನಡೆಸಿ ಕೊಡಲು ಮುಂಗಡ ಮೊತ್ತವನ್ನು ಪಡೆದುಕೊಂಡಿರುವ “ಥೈಕ್ಕುಡಂ ಬ್ರಿಡ್ಜ್” ಮ್ಯೂಸಿಕ್ ಬ್ಯಾಂಡ್ ಕಂಪೆನಿ ಮುಂಗಡ ಹಣ ಪಡೆದು ಕೊನೆಯ ಕ್ಷಣದಲ್ಲಿ ವಂಚಿಸಿದ್ದಾಗಿ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ “ಡ್ರೀಮ್ ಮೇಕರ್ಸ್” ಆರೋಪಿಸಿದೆ. ಮುಂಗಡ ಮೊತ್ತವನ್ನು ಹಲವು ಕಂತುಗಳಲ್ಲಿ ನೀಡಿದ್ದು, ಕೊನೆ ಕ್ಷಣ “ಥೈಕ್ಕುಡಂ ಬ್ರಿಡ್ಜ್” ಕಾರ್ಯಕ್ರಮದಿಂದ ಹಿಂದೆ ಸರಿದಿದೆ.ಇದರಿಂದ ಕಂಪೆನಿಗೆ ಲಕ್ಷಾಂತರ ರೂಗಳ ನಷ್ಟ ಉಂಟಾಗಿದೆ.ನಂಬಿಕೆಗೆ ದ್ರೋಹ ಬಗೆದ “ಥೈಕ್ಕುಡಂ” ಕಂಪೆನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ “ಡ್ರೀಮ್ ಮೇಕರ್ಸ್” ತಿಳಿಸಿದೆ.
2020ರ ಮಾರ್ಚ್ 4ರಂದು ತ್ರಿಶೂರ್ ನಲ್ಲಿ ಕಾರ್ಯಕ್ರಮ ಆಯೋಜಿಸಲು “ಥೈಕ್ಕುಡಂ ಬ್ರಿಡ್ಜ್”ಗೆ 1 ಲಕ್ಷ ರೂ. ಅಡ್ವಾನ್ಸ್ ನೀಡಲಾಗಿದೆ.ಆದರೆ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ. ಬಳಿಕ “ಥೈಕ್ಕುಡಂ” ಕಂಪೆನಿಯಿಂದ 50 ಸಾವಿರ ರೂ. ವಾಪಾಸ್ ಪಡೆಯಲಾಗಿತ್ತು.2022ರ ಸೆಪ್ಟೆಂಬರ್ 25 ರಂದು ಮತ್ತೆ ಕಂಪೆನಿಯನ್ನು ಸಂಪರ್ಕಿಸಿ ಡಿಸೆಂಬರ್ 25 ರಂದು ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು. 50 ಸಾವಿರ ಹಿಂದಿನ ಬಾಕಿ ಸಹಿತ ಕಾರ್ಯಕ್ರಮಕ್ಕೆ ಮುಂಚಿತವಾಗಿ 5.50,000 ನೀಡುವ ತೀರ್ಮಾನದಂತೆ ಕಾರ್ಯಕ್ರಮದ ನಿರ್ವಹಣೆಯ ಸಿದ್ಧತೆ ನಡೆಸಲಾಗಿದೆ. ಡಿಸೆಂಬರ್ 25ರಂದು ತ್ರಿಶೂರ್ ನಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದ್ದು ಈ ಬಗ್ಗೆ ವ್ಯಾಪಕ ಪ್ರಚಾರ ನಡೆಸಲಾಗಿದೆ.
ಅಡ್ವಾನ್ಸ್ ಮೊತ್ತದ ಒಪ್ಪಂದ ನವೀಕರಿಸದೆ, ವಿಮಾನ ಟಿಕೆಟ್‌ನ ಮಾಹಿತಿ ನೀಡದ “ಥೈಕ್ಕುಡಂ” ಕಂಪೆನಿ ಮತ್ತೆ 2.5 ಲಕ್ಷ ರೂ.ನೀಡುವಂತೆ ಆಗ್ರಹಿಸಿದೆ.ಈ ಬಗ್ಗೆ ಆಲೋಚಿಸುವುದಾಗಿ ತಿಳಿಸಿದಾಗ, ಸಂಪೂರ್ಣ ಮೊತ್ತವನ್ನು ಅಡ್ವಾನ್ಸ್ ಆಗಿ ನೀಡಿದರೆ ಮಾತ್ರ ಕಾರ್ಯಕ್ರಮ ನಡೆಯುವುದು ಎಂದು “ಥೈಕ್ಕುಡಂ”ಮ್ಯೂಸಿಕ್ ಬ್ಯಾಂಡ್ “ಡ್ರೀಮ್ ಮೇಕರ್ಸ್” ಕಂಪೆನಿಗೆ ತಿಳಿಸಿದೆ.
ನವಂಬರ್ 1ರಂದು “ಥೈಕ್ಕುಡಂ”ಮ್ಯೂಸಿಕ್ ಬ್ಯಾಂಡ್ ಅವರ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಕಾರ್ಯಕ್ರಮದ ಜಾಹೀರಾತು ಪ್ರಕಟಿಸಿದ್ದು, ಕಾರ್ಯಕ್ರಮಕ್ಕೆ ಪ್ರಾಯೋಜಕರನ್ನು ಸಂಪರ್ಕಿಸಿ, ಟಿಕೆಟ್ ಮಾರಾಟ ಸಹಿತ ಎಲ್ಲಾ ಸಿದ್ಧತೆ ನಡೆಸಲಾಗಿತ್ತು.
ಡಿಸೆಂಬರ್ 2 ರಂದು ನೇರವಾಗಿ ತಲುಪಿ ಎಲ್ಲಾ ಮೊತ್ತ ನೀಡುವುದಾಗಿಯೂ ಒಪ್ಪಂದ ನವೀಕರಿಸುವಂತೆಯೂ ತಿಳಿಸಲಾಗಿದ್ದರೂ ಯಾವುದೇ ಮುನ್ಸೂಚನೆ ನೀಡದೆ ಡಿ.4ರಂದು “ಥೈಕ್ಕುಡಂ ಬ್ರಿಡ್ಜ್” ನ ಫೇಸ್ ಬುಕ್ ಪೇಜ್ ನಿಂದ ಪೋಸ್ಟರ್ ತೆಗೆದು ಹಾಕಲಾಗಿದೆ. ಅಲ್ಲದೇ ಕಾರ್ಯಕ್ರಮಕ್ಕೆ ಬರಲಾಗದು ಎಂದು ಮೈಲ್ ಮಾಡಿದ್ದಾಗಿ “ಡ್ರೀಮ್ ಮೇಕರ್ಸ್” ಮ್ಯಾನೇಜಿಂಗ್ ಡೈರೆಕ್ಟರ್ ವಿವೇಕ್ ತಿಳಿಸಿದ್ದಾರೆ. “ಥೈಕ್ಕುಡಂ ಬ್ರಿಡ್ಜ್” ನ ಹಠಾತ್ ನಿರ್ಧಾರದಿಂದ ತಮ್ಮ ಕಂಪನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ “ಥೈಕ್ಕುಡಂ ಬ್ರಿಡ್ಜ್” ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ವಿವೇಕ್ ಸ್ಪಷ್ಟಪಡಿಸಿದ್ದಾರೆ.