ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿಯ ಅವರಣದಲ್ಲಿ ಬಿಜೆಪಿ ಬೆಂಬಲಿತ ಪಟ್ಟಣ ಪಂಚಾಯತ್ ಸದಸ್ಯರು ಹಾಗೂಗಾಂಧಿನಗರ ಮಾಲಮೂಲೆ ಸಂಪರ್ಕ ರಸ್ತೆಯ ಸೇತುವೆಯೊಂದರ ಫಲಾನುಭವಿಗಳ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಡಿ 22 ರಂದು ನಡೆದಿದೆ.
ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತಾಧಿಕಾರಿ ತಹಶಿಲ್ದಾರ್ ಡಾ. ಸ್ಮಿತಾರಾಮ್ ನೇತ್ರತ್ವದಲ್ಲಿ ಗುರುವಾರ ಚುನಾಯಿತ ಪ್ರತಿನಿಧಿಗಳ ತುರ್ತು ಸಭೆ ನಡೆದಿದ್ದು, ಇದೇ ವೇಳೆ ಸರಕಾರದಿಂದ ಮಂಜೂರಾದ ಸೇತುವೆ ನಿರ್ಮಾಣ ಕಾರ್ಯದಲ್ಲಿ ರಾಜಕೀಯ ನಡೆಯುತ್ತಿದೆ ಎಂದು ಒಂದಷ್ಟು ಜನರ ತಂಡ ತಹಸೀಲ್ದಾರ್ ಗೆ ಮನವಿ ಸಲ್ಲಿಸಲು ಆಗಮಿಸಿದ್ದರು. ಈ ಸಂದರ್ಭ ಪಂಚಾಯಿತಿ ಅವರಣದಲ್ಲಿ ಮಾತಿನ ಚಕಮಕಿ ನಡೆದಿದೆ.
ಸೇತುವೆ ನಿರ್ಮಾಣಕ್ಕೆ ಮನವಿ
ಗಾಂಧಿನಗರ ಮಾಲಮೂಲೆ ಸಂಪರ್ಕ ರಸ್ತೆಯಲ್ಲಿರುವ ತೋಡಿಗೆ ಪಿ. ಡಬ್ಲ್ಯು. ಡಿ. ಇಲಾಖೆ ಸೇತುಬಂಧು ಯೋಜನೆಯ ಮೂಲಕ ಸೇತುವೆ ಮಂಜೂರಾಗಿದ್ದು, ಇದರಲ್ಲಿ ರಾಜಕೀಯ ಮಾಡಲಾಗುತ್ತಿದೆ. ಮಳೆಗಾಲದ ಮೊದಲು ಅದನ್ನು ಪೂರ್ಣ ಮಾಡಬೇಕೆಂದು ಬಂಟ್ವಾಳ ತಹಸೀಲ್ದಾರ ಡಾ. ಸ್ಮಿತಾ ರಾಮ್ ಅವರಿಗೆ ಸ್ಥಳೀಯ ಫಲಾನುಭವಿಗಳು ಮನವಿ ನೀಡಿದರು. ಸ್ಥಳೀಯರಾದ ಅಬ್ಬೂಬ್ಬರ್ ಸಿದ್ದಿಕ್, ಉಮ್ಮರ್ ಮಾಳಮೂಲೆ, ಸಬೀರ್, ತಿಮ್ಮಪ್ಪ ನಾಯ್ಕ, ಐತ್ತಪ್ಪ ನಾಯ್ಕ, ಮೈಮೂನ ಮಾಳಮೂಲೆ, ಸುಂದರಿ, ಸಖಿನಾ, ಝುಬೈದಾ ಮತ್ತಿತರರು ಹಾಜರಿದ್ದರು.

ಪಂಚಾಯಿತಿ ಮುಂದೆ ಮಾತಿನ ಚಕಮಕಿ:
ತಹಸೀಲ್ದಾರರಿಗೆ ಪಟ್ಟಣ ಪಂಚಾಯಿತಿಯಲ್ಲಿ ಮನವಿ ನೀಡಿದ ಬಳಿಕ ಗ್ರಾಮಸ್ಥರು ಹೊರಗೆ ಬರುತ್ತಲೇ ಅವರ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಅನುದಾನವನ್ನು ಬೇರೆಡೆಗೆ ವರ್ಗಾಯಿಸುವ ಬಗ್ಗೆಯೂ ಮಾತುಗಳು ಕೇಳಿಬಂದಿದೆ. ಸೇತುವೆಗೆ ಅನುದಾನ ಇಟ್ಟ ಮೇಲೆ ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಸಂಕಷ್ಟಪಡುವುದುನ್ನು ಹೊರ ಪ್ರಪಂಚಕ್ಕೆ ತೋರಿಸಿರುವುದು ಬಿ.ಜೆ.ಪಿ. ಬೆಂಬಲಿತ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಚಕಮಕಿಯ ವಿಡಿಯೋ ನಿಖರ ನ್ಯೂಸಿಗೆ ಲಭಿಸಿದೆ
ಸಭೆಯಲ್ಲಿ ಕೇಳಿಸಿದ್ದು
ಮನೆಯ ಕಟ್ಟುವ ವಿಚಾರ ಸೇರಿ, ಅಗತ್ಯ ದಾಖಲೆಗಳಿಗೆ ಜನರು ನಿತ್ಯ ಅಲೆದಾಡುವ ಪರಿಸ್ಥಿತಿಯಿದೆ. ಶಾಶ್ವತ ಫಲಕ ಸೇರಿ ಜಾಹೀರಾತು ಫಲಕಗಳಿಂದ ಪಂಚಾಯಿತಿಗೆ ಯಾವ ಆದಾಯವೂ ಬರದ ದುಸ್ಥಿತಿ ನಿರ್ಮಾಣವಾಗಿದೆ. ವಾಟರ್ ಮ್ಯಾನ್ ಗೆ ತಿಂಗಳು ತಿಂಗಳು ವೇತನ ಆಗುತ್ತಿಲ್ಲ. ಪೈಪ್ ದುರಸ್ಥಿ ಮಾಡುವವರು ಅಗತ್ಯ ಸಾಮಾಗ್ರಿಗಳನ್ನು ಅಂಗಡಿಯಿಂದ ಸಾಲ ಪಡೆದು ದುರಸ್ಥಿತಿ ಮಾಡುವ ಪರಿಸ್ಥಿತಿ ಇದೆ. ಇದು ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ನಡೆದ ತುರ್ತು ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳಿಂದ ಕೇಳಿ ಬಂದ ಸಮಸ್ಯೆಗಳಾಗಿದೆ.

18 ವಾರ್ಡ್ ಗಳಿಗೆ ಓರ್ವ ಪೈಪ್ ದುರಸ್ಥಿ ಮಾಡುವ ವ್ಯಕ್ತಿಯಿದ್ದು, ಆತನಿಂದ ಎಲ್ಲಾ ಕಡೆಯಲ್ಲಿ ಕೆಲಸ ನಿರ್ವಹಿಸಲಾಗುತ್ತಿಲ್ಲ. ವರ್ಷಗಳಿಂದ ಜನರು ತಮಗೆ ಅಗತ್ಯವಿರುವ ಕೆಲಸಗಳಿಗಾಗಿ ನಿತ್ಯ ಪಂಚಾಯಿತಿಗೆ ಬರುವ ಪರಿಸ್ಥಿತಿ ಇದೆ. ಸಿಬ್ಬಂದಿ ಕೊರತೆಯಿಂದ ಯಾವ ಕೆಲಸಕಾರ್ಯಗಳೂ ನಡೆಯುತ್ತಿಲ್ಲ. ಪಂಚಾಯಿತಿಯ ಅವ್ಯವಸ್ಥೆಯ ಬಗ್ಗೆ ತೀವ್ರವಾದ ಚರ್ಚೆಗಳು ನಡೆಯಿತು.
ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತಾಧಿಕಾರಿ ತಹಶಿಲ್ದಾರ್ ಡಾ. ಸ್ಮಿತಾರಾಮ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೋಪಾಲ ನಾಯ್ಕ, ಚುನಾಯಿತ ಪ್ರತಿನಿಧಿಗಳಾದ ಅರುಣ್ ಎಂ., ಹರೀಶ್ ಸಿ. ಎಚ್., ಅಶೋಕ್ ಕುಮಾರ್ ಶೆಟ್ಟಿ, ರವಿಪ್ರಕಾಶ್ ಯಸ್., ಸಿ. ಎಚ್. ಜಯಂತ, ಅಬ್ದುಲ್ ರಹಿಮಾನ್, ಶಾಕೀರ, ಸಂಗೀತಾ, ರಕ್ಷಿತ, ವಸಂತ ಕೆ., ವಿಜಯಲಕ್ಷ್ಮಿ, ಸುನೀತಾ, ಎನ್. ಕೃಷ್ಣ, ಪದ್ಮಿನಿ, ಲತಾವೇಣಿ, ನಾಮನಿರ್ದೇಶಿತ ಸದಸ್ಯ ಸೇರಾಜೆ ಸುಬ್ರಹ್ಮಣ್ಯ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಮಾತಿನ ಚಕಮಕಿಯ ವಿಡಿಯೋ ನೋಡಿ