ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಬಗ್ಗೆ ಯಾವುದೇ ಪ್ರಸ್ತಾವನೆಯು ಇಲಾಖೆಯ ಪರಿಶೀಲನೆಯಲ್ಲಿರುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಡಿ 22 ರಂದು ತಿಳಿಸಿದ್ದಾರೆ. ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಕೇಲಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರ ಕಾರ್ಯವ್ಯಾಪ್ತಿಯಲ್ಲಿ ಬರುವ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಕಡಬ ತಾಲೂಕುಗಳ ಕಾನೂನು ಸುವ್ಯವಸ್ಥೆ ಹಾಗೂ ಕಾರ್ಯಕ್ಷಮತೆ ದೃಷ್ಟಿಯಿಂದ ಪುತ್ತೂರು ನಗರ ಅಥವಾ ತಾಲ್ಲೂಕಿನ ವ್ಯಾಪ್ತಿಗೆ ಪೊಲೀಸ್‌ಅಧೀಕ್ಷಕರ ಕಚೇರಿಯನ್ನು ಸ್ಥಳಾಂತರಿಸುವ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಮಠಂದೂರು ಗೃಹ ಸಚಿವರನ್ನು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿರುವ ಗೃಹ ಸಚಿವರು “ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಹಾಗೂ ತಾಲೂಕುಗಳ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಪುತ್ತೂರಿನಲ್ಲಿ ಈಗಾಗಲೇ ಪೊಲೀಸ್ ಉಪಾಧೀಕ್ಷಕರ ಕಚೇರಿಯು ಕಾರ್ಯನಿರ್ವಹಿಸುತ್ತಿದೆ ಹಾಗೂ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟಂತೆ ಬಂಟ್ವಾಳದಲ್ಲಿ ಪೊಲೀಸ್ ಉಪಾಧೀಕ್ಷಕರ ಕಚೇರಿಯು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ದಶಕಗಳ ಬೇಡಿಕೆ :
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ವ್ಯಾಪ್ತಿಯೊಳಗಿದ್ದ ಜಿಲ್ಲಾ ಕೇಂದ್ರ ಮಂಗಳೂರು ಹಾಗೂ ಅದರ ಸುತ್ತಮುತ್ತಲಿನ ಕೆಲವು ತಾಲೂಕುಗಳನ್ನು 2010 ರಲ್ಲಿ ಕಮೀಷನರೇಟ್ ವ್ಯಾಪ್ತಿಗೆ ಸೇರಿಸಲಾಗಿತ್ತು. ಹಾಗೂ ಇದಕ್ಕೆ ಸಂಬಮಧಿಸಿದಂತೆ ಪೊಲೀಸ್ ಕಮೀಷನರ್ ಕಚೇರಿಯೂ ಮಂಗಳೂರಿನಲ್ಲಿದೆ. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಉಳಿದ ತಾಲೂಕುಗಳಾದ ಬಂಟ್ವಾಳ, ಪುತ್ತೂರು ಸುಳ್ಯ ಕಡಬ ಹಾಗೂ ಬೆಳ್ತಂಗಡಿ ತಾಲೂಕು ಎಸ್ಪಿಯವರ ಅಧಿನದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮಂಗಳೂರಿನ ಅನಂತರದ ಎರಡನೇ ದೊಡ್ಡ ಪಟ್ಟಣವಾಗಿರುವ ಪುತ್ತೂರಿನ ಗಡಿ ಭಾಗದಲ್ಲಿ ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಕಡಬ ತಾಲೂಕುಗಳು ಬೆಸೆದುಕೊಂಡಿವೆ. ಫರಂಗಿಪೇಟೆಯಿಂದ ಸಂಪಾಜೆ ತನಕ, ಮತ್ತೂಂದು ಭಾಗದಲ್ಲಿ ಚಾರ್ಮಾಡಿ ಘಾಟಿ ತನಕ ಹಾಗೂ ಕೇರಳ ಗಡಿಭಾಗದ ಈಶ್ವರಮಂಗಲ, ಜಾಲಸೂರು , ಪಾಣಾಜೆ, ವಿಟ್ಲ ಭಾಗಗಳು ಬರುತ್ತವೆ. ಪುತ್ತೂರು ಕೇಂದ್ರ ಸ್ಥಾನವಾದರೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಹೆಚ್ಚು ಪ್ರಯೋಜನವಾಗಲಿದೆ. ಹೀಗಾಗಿ ಎಸ್ಪಿ ಕಛೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸ ಬೇಕು ಎನ್ನುವುದು ಸಾರ್ವಜನಿಕರ ದಶಕಗಳ ಬೇಡಿಕೆಯಾಗಿದೆ.
ಬಿಜೆಪಿ ಮುಖಂಡ ವಿಎಸ್ ಆಚಾರ್ಯರವರು ಗೃಹ ಸಚಿವರಾಗಿದ್ದಾಗ ಈ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಎಸ್ಪಿ ಕಛೇರಿಯ ಸ್ಥಾಪನೆಯ ಉದ್ದೇಶದಿಂದ ನಗರದ ಹೊರ ವಲಯದ ಬನ್ನೂರಿನಲ್ಲಿ ಎರಡು ಎಕ್ರೆ ಭೂಮಿಯನ್ನು ಕಂದಾಯ ಇಲಾಖೆ ಗುರುತಿಸಿದೆ. ಹೀಗಿದ್ದರೂ ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಬಗ್ಗೆ ಯಾವುದೇ ಪ್ರಸ್ತಾವನೆಯು ಇಲಾಖೆಯ ಪರಿಶೀಲನೆಯಲ್ಲಿರುವುದಿಲ್ಲ ಎಂಬ ಗೃಹ ಸಚಿವರ ಹೇಳಿಕೆ ಈ ಭಾಗದ ಜನತೆಗೆ ದೊಡ್ಡ ಶಾಕ್ ಆಗಿದೆ
ಎಸ್ಪಿ ಕಛೇರಿಯ ಪ್ರಯೋಜನ
ಗ್ರಾಮಾಂತರ ತಾಲೂಕುಗಳಲ್ಲಿ ಅಪರಾಧ ಪತ್ತೆ, ಕಾನೂನು ಸುವ್ಯವಸ್ಥೆಗೆ, ಎಸ್ಪಿ ಕಚೇರಿ ತನ್ನ ಕಾರ್ಯ ವ್ಯಾಪ್ತಿಯಲ್ಲೇ ಇದ್ದರೆ ಜನಸಾಮಾನ್ಯರೊಂದಿಗೂ ನಿಕಟ ವಾಗಿರಲು, ಎಸ್ಪಿ ಕಚೇರಿ ಸ್ಥಳಾಂತರದೊಂದಿಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯೂ ಲಭ್ಯವಾಗುತ್ತದೆ. ಈ ಸಿಬಂದಿ ಬೀಟ್ ಪೊಲೀಸ್ ಕಾರ್ಯ ನಿರ್ವಹಿಸ ಬಹುದು, ಭವಿಷ್ಯ ದಲ್ಲಿ ಸೈಬರ್ ಪೊಲೀಸ್ ಠಾಣೆ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸಬಹುದು, ಮಂಗಳೂರಿನಿಂದ ನಿರ್ವಹಿಸಬೇಕಾದ ಕಾರ್ಯದೊತ್ತಡ ಕಡಿಮೆಯಾಗುತ್ತದೆ.
ಕಚೇರಿ ಮಂಗಳೂರಲ್ಲಿ; ಕಾರ್ಯವ್ಯಾಪ್ತಿ ಪುತ್ತೂರಲ್ಲಿ !
ಪುತ್ತೂರನ್ನು ದ.ಕ. ಜಿಲ್ಲೆಯ ಗ್ರಾಮಾಂತರ ಜಿಲ್ಲೆಯಾಗಿ ಘೋಷಿಸಬೇಕು ಎಂಬ ಬೇಡಿಕೆಗೆ ಪೂರಕ ಎಂಬಂತೆ ಎಸ್ಪಿ ಕಚೇರಿ ಸ್ಥಳಾಂತರ ಮಹತ್ವ ಪಡೆದಿದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಹಾಗೂ ಕಡಬ ತಾಲೂಕುಗಳು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಗೆ ಬರುತ್ತವೆ. ಈ 5 ತಾಲೂಕುಗಳಿಂದ ಹೊರ ಭಾಗದಲ್ಲಿ ಇರುವ ಎಸ್ಪಿ ಕಚೇರಿಯಲ್ಲಿ ಈ ತಾಲೂಕುಗಳಿಗೆ ಕೇಂದ್ರ ಸ್ಥಾನದಲ್ಲಿರುವ ಪುತ್ತೂರಿಗೆ ಸ್ಥಳಾಂತರಿಸಬೇಕು ಎನ್ನುವ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಪೂರಕವಾಗಿ ಪೊಲೀಸ್ ತರಬೇತಿ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ
ಎಸ್ಪಿ ಕಛೇರಿಯನ್ನೆ ತಂದೆ ಸಿದ್ದ ಎಂದಿದ್ದ ಮಠಂದೂರು
ಎರಡು ವರ್ಷಗಳ ಹಿಂದೆ 2020 ರಲ್ಲಿ ಈಗಿನ ಮುಖ್ಯಮಂತ್ರಿ ಹಾಗೂ ಅಂದಿನ ಗೃಹ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿಯವರಿಗೆ ಶಾಸಕ ಸಂಜೀವ ಮಠಂದೂರು ಎಸ್ಪಿ ಕಛೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಿದ್ದರು. ಅದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಸಂಸದರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಈ ಕುರಿತು ಸಭೆ ಕೂಡ ನಡೆಸಲಾಗಿತ್ತು. 2021 ರ ಜನವರಿ ತಿಂಗಳಿನಲ್ಲಿ ಎಸ್ಪಿ ಕಛೇರಿ ಪುತ್ತೂರಿಗೆ ಸ್ಥಳಾಂತರಗೊಳ್ಳುವ ಎಲ್ಲ ಸಾಧ್ಯತೆಗಳಿವೆಯೆಂದು ಮಠಂದೂರು ಮಾದ್ಯಮಗಳಿಗೆ ತಿಳಿಸಿದ್ದರು. ಹಾಗು ಎಸ್ಪಿ ಕಛೇರಿಯನ್ನೆ ಪುತ್ತೂರಿಗೆ ತಂದೆ ಸಿದ್ದ ಎಂದು ಅವರು ಘೋಷಿಸಿದ್ದರು. ಮುಂದಿನ ವಿಧಾನ ಸಭೆ ಚುನಾವಣೆಯೂ 2023 ರ ಎಪ್ರಿಲ್ ಅಥಾವ ಮೇ ತಿಂಗಳಿನ ಆರಂಭದಲ್ಲಿ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಆರಂಭಕ್ಕೂ ಮುಂಚೆ ಕೇವಲ 4 ರಿಂದ 5 ತಿಂಗಳ ಕಾಲವಷ್ಟೆ ಶಾಸಕರ ಬಳಿ ಉಳಿಯಲಿದೆ. ಅಷ್ಟರೊಳಗಡೆ ಎಸ್ಪಿ ಕಛೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಮೂಲಕ ಕೊಟ್ಟ ಮಾತು ಉಳಿಸಿಕೊಳ್ಳುವರೇ ಎನ್ನುವುದು ಸದ್ಯದ ಕುತೂಹಲವಾಗಿದೆ