ಪುತ್ತೂರು: ಬಿಜೆಪಿಯ ಅಲ್ಪ ಸಂಖ್ಯಾತ ಮುಖಂಡ ಹಾಗು ಕೆಡಿಪಿಯ ನಾಮ ನಿರ್ದೇಶಿತ ಸದಸ್ಯರೊಬ್ಬರು ತನ್ನದೇ ಪಕ್ಷದ ಮುಖಂಡರುಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆದ ಬಳಿಕ ಪುತ್ತೂರಿನ ಬಿಜೆಪಿ (Puttur BJP) ಹಾಗೂ ಸಂಘ ಪರಿವಾರದ ನಡುವೆ ಎಲ್ಲವು ಸರಿಯಿಲ್ಲ ಎನ್ನುವ ಭಾವನೆ ಬರುವಂತಹ ಹಲವು ಘಟನೆಗಳು ಸಂಭವಿಸಿವೆ.
ಪುಲ್ವಾಮ ದಾಳಿ(Pulwama Attack), ಪ್ರವೀಣ್ ನೆಟ್ಟಾರ್ ಹತ್ಯೆ(Praveen Nettar Murder) , ಪಕ್ಷದ ನಾಯಕರೂ ನಡೆಸುವ ಭ್ರಷ್ಟಚಾರ ಹಾಗೂ ಶಾಸಕರ ಅಸಮರ್ಥತೆಯ ಬಗ್ಗೆ, ಶಾಸಕರ ಸಿಡಿ ಇದೆ ಎಂದೆಲ್ಲ ಆ ಆಡಿಯೋದಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ.
ಈ ಆಡಿಯೋದಲ್ಲಿ ಮಾತನಾಡಿರುವವರ ಪೈಕಿ ಒರ್ವರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಹಾಗು ಪುತ್ತೂರು ಶಾಸಕರಿಂದ ನಾಮನಿರ್ಧೇಶನಗೊಂಡ ಕೆಡಿಪಿ ಸದಸ್ಯರಾಗಿರುವ ಅಬ್ದುಲ್ ಕುಂಞ ಎಂದು ಹೇಳಲಾಗುತ್ತಿದೆ.
ಆದರೇ ಇದು ನನ್ನ ವಾಯ್ಸ್ ಅಲ್ಲ , ನನ್ನ ತೇಜೊವಧೆಗೆ ಷಡ್ಯಂತ್ರ ರೂಪಿಸಿ ಈ ಆಡಿಯೋವನ್ನು ಹೊರ ಬಿಡಲಾಗಿದೆ ಎಂದು ಅಬ್ದುಲ್ ಕುಂಞಯವರು ಪ್ರತಿಕ್ರಿಯಿಸಿದ್ದರು.
ವಿವಾದಿತ ಆಡಿಯೋ ಹೊರ ಬರುತ್ತಲೇ ಪುತ್ತೂರು ಬಿಜೆಪಿಯಲ್ಲಿ ತೀವ್ರ ಸಂಚಲನ ಉಂಟಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಪುತ್ತೂರು ಶಾಸಕ ಸಂಜೀವ ಮಠಂದೂರು, ಅವರ ಇಬ್ಬರು ಪಿಎಗಳು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಪುತ್ತೂರು ಬಿಜೆಪಿ ಗ್ರಾಮಾಂತರ ಅಧ್ಯಕ್ಷರ ಹೆಸರನ್ನು ಉಲ್ಲೇಖಿಸಿ ಲಘುವಾಗಿ ಮಾತನಾಡಲಾಗಿತ್ತು.
ಆಪ್ತರಾಗಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರನ್ನು ಡಾ. ಪ್ರಸಾದ್ ಭಂಡಾರಿಯಲ್ಲಿಂದ ಹೊರ ಹಾಕಲು ನನ್ನನ್ನು ಶಾಸಕರು ಬಿಟ್ಟದ್ದು ಎಂದು ಆಡಿಯೋದಲ್ಲಿದೆ.
ಇತ್ತಿಚೆಗೆ ಹತ್ಯೆಯಾದ ಪ್ರವೀಣ್ ನೆಟ್ಟಾರ್ ಕೊಲೆ ಬಿಜೆಪಿಯೇ ಮಾಡಿಸಿದ್ದು ಎಂದು ಆಡಿಯೋದಲ್ಲಿ ಹೇಳಲಾಗಿದೆ. ಶಾಸಕರ ಸಿಡಿ ಇದೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಪುತ್ತೂರು ಬಿಜೆಪಿ ಶಾಸಕರು ಹಲ್ಲಿಲ್ಲದ ಹಾವು , ಅವರಿಗೆ ಬೆಲೆಯೇ ಇಲ್ಲ ಎಂದಿದ್ದು, ಸಂಸದರು ಶಾಸಕರ ಕಾರ್ಯವೈಖರಿಗೆ ಅಡ್ಡ ಬರುತ್ತಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ.
ಸಂಸದರು ಬೇರೊಬ್ಬ ಬಿಜೆಪಿ ನಾಯಕನ ಮೂಲಕ ಎಲ್ಲಾ ಕೆಲಸ ಮಾಡ್ತಾರೆ ಅವರೇ ಪ್ರಮುಖರು, ಅವರು ಬೇಕಾದಷ್ಟು ಹಣ ಮಾಡಿದ್ದಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಪುತ್ತೂರು ಬಿಜೆಪಿಯಲ್ಲಿರುವುದು ಎಲ್ಲಾ ಕಾಂಗ್ರೆಸ್ ನಾಯಕರು ಎನ್ನಲಾಗಿದೆ.
ಆಡಿಯೋ ಭಾರಿ ವೈರಲ್ ಆದ ಬಳಿಕ ಅಬ್ದುಲ್ ಕುಂಞ ಯವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಹಿಂದೂ ಸಂಘಟನೆ ಹಾಗೂ ಬಿಜೆಪಿಯ ಹಲವು ಕಾರ್ಯಕರ್ತರು ಮತ್ತು ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರು.
ಆದರೇ ಇದರ ನಡುವೆ ಪುತ್ತೂರಿನ ಮಾಜಿ ಬಿಜೆಪಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರ ಪತಿ ಹಾಗೂ ಹಿಂದೂ ಸಂಘಟನೆಗಳ ಮುಂಚೂಣಿ ನಾಯಕ ಹಾಗೂ ಪುತ್ತೂರು ಬಿಜೆಪಿಯ ಸ್ಟಾರ್ ಪ್ರಚಾರಕ್ ಡಾ| ಪ್ರಸಾದ್ ಭಂಡಾರಿಯವರು ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಅಬ್ದುಲ್ ಕುಂಞ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತ ಎಂದು ಸಂಬೋಂಧಿಸಿ , ಅವರ ವಿರುದ್ದ ಪಕ್ಷ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಭಗವದ್ವಜ ಹಾಗೂ ಬಿಜೆಪಿ ಚಿತ್ರ ಹಾಕಿ ಜಾಹಿರಾತು ಕೊಟ್ಟು ಮನವಿ ಮಾಡಿದ್ದರು.

ಆದರೇ ಹಿರಿಯ ನಾಯಕ ಪ್ರಸಾದ್ ಭಂಡಾರಿಯವರ ಬಹಿರಂಗ ಮನವಿಯನ್ನು ಲೆಕ್ಕಿಸದೆ ಪುತ್ತೂರು ತಾಲೂಕು ಬಿಜೆಪಿಯ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಬಿಜೆಪಿಯೂ ಅಬ್ದುಲ್ ಕುಂಞ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತನದಿಂದ ಉಚ್ಚಾಟನೆಗೊಳಿಸಿ ಆದೇಶ ಹೊರಡಿಸಿದೆ. ಮೇಲ್ನೋಟಕ್ಕೆ ಆಡಿಯೋದಲ್ಲಿರುವ ವಾಯ್ಸ್ ಅಬ್ದುಲ್ ಕುಂಞ ಯವರದೇ ಎಂದು ಕಂಡು ಬಂದ ಹಿನ್ನಲೆಯಲ್ಲಿ ಬಿಜೆಪಿ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯ ಹಿರಿಯ ನಾಯಕರಾಗಿರುವ, ಪಕ್ಷಕ್ಕಾಗಿ ತನು ಮನ ಧನ ಗಳನ್ನು ಅರ್ಪಿಸಿ ಕೆಲಸ ಮಾಡುವ ಪ್ರಸಾದ್ ಭಂಡಾರಿವರಿಗೆ ತನ್ನ ಆಪ್ತನಾಗಿರುವ ಅಬ್ಧುಲ್ ಕುಂಞಯವರನ್ನು ಉಚ್ಚಾಟಿಸದಂತೆ ತಡೆಯಲು ಜಾಹೀರಾತಿನ ಮೊರೆ ಹೋಗಬೇಕಾದ ಅನಿರ್ವಾಯತೆ ಯಾಕೇ ಬಂತು? ಅವರನ್ನು ಪಕ್ಷದ ಚಟುವಟಿಕೆಯಿಂದ ದೂರವಿಡಲಾಗಿದೇಯೇ.? ಅವರ ಸಲಹೆಗಳನ್ನು ಪುತ್ತೂರು ಹಾಗೂ ಜಿಲ್ಲಾ ಬಿಜೆಪಿ ಸ್ವೀಕರಿಸುವುದನ್ನು ನಿಲ್ಲಿಸಿದೇಯೆ? ಅವರ ಮಾತುಗಳನ್ನು ಪಕ್ಷದ ವರಿಷ್ಠರು ಕೇಳುವುದಿಲ್ಲವೇ? ಹೀಗಾಗಿ ಅವರು ಪಕ್ಷಕ್ಕೆ ಎಚ್ಚರಿಕೆ ರೂಪದಲ್ಲಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದರೆ ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಇನ್ನು ಪ್ರಸಾದ್ ಭಂಡಾರಿಯವರ ಎಚ್ಚರಿಕೆ ರೂಪದ ಸಾರ್ವಜನಿಕ ಮನವಿಯನ್ನು ದಿಕ್ಕರಿಸಿ, ಅಬ್ದುಲ್ ಕುಂಞಯವರನ್ನು ಉಚ್ಚಾಟಿಸುವ ಮೂಲಕ ಪಕ್ಷವೂ ಕಾರ್ಯಕರ್ತರಿಗೆ ಯಾವ ಸಂದೇಶ ರವಾನಿಸಿದೆ ಎನ್ನುವ ಬಗ್ಗೆಯೂ ವಿಭಿನ್ನ ರೀತಿಯ ಚರ್ಚೆಗಳು ನಡೆಯುತ್ತಿದೆ.
ಮತ್ತೊಂದು ಆಡಿಯೋ ವೈರಲ್: ಈ ಎಲ್ಲ ಗೊಂದಲಗಳ ಮಧ್ಯೆ ಮತ್ತೊಂದು ಆಡಿಯೋ ಇದೀಗ ವೈರಲ್ ಆಗಿದ್ದು , ಆದರೆ ಅದರಲ್ಲಿ ಯಾರಾ ಹೆಸರೂ ಉಲ್ಲೇಖ ಆಗದೇ ನೋಟಿಸ್ ನೀಡುವ ಬಗ್ಗೆ ಉಲ್ಲೇಖವಿದೆ.
“ಒತ್ತೆಕೋಲದ್ದಕ್ಕೆ ನೋಟಿಸ್ ಕೊಡಲು ವಕೀಲರು ಬರಲು ಹೇಳಿದ್ದಾರೆ. ನೋಟಿಸ್ ಪಿಡಿಓ, ವಿಎ ಕೊಟ್ಟಿದ್ದೇವೆ. ಮತ್ತೊಂದು ನೋಟಿಸ್ ಡಾಕ್ಟರ್ ಲೆಕ್ಕದಲ್ಲಿ ಕೊಡ್ತೇವೆ ಎಂದಿದ್ದಾರೆ.
ಆಗ ಇವತ್ತು ಜೆಸಿಬಿ ಕೆಲಸ ನಿಲ್ಲಿಸಲು ಹೇಳಿದ್ದಾರೆ ಎಂದು ಎದುರಿನ ವ್ಯಕ್ತಿ ಹೇಳಿದ್ದಾನೆ. ನಿಮ್ಮ ಖರ್ಚಿದು ನಾವು ಕೊಡ್ತೇವೆ. ವಿದೇಶದಲ್ಲಿರುವ ಅದ್ದುನ ಅಣ್ಣನ ಮಗ ಹೇಳಿದ್ದಾನೆ ಕೊಡ್ತೇನೆ ಅಂದಿದ್ದಾನೆ. ವಾಟ್ಸಾಪ್ ನಲ್ಲಿ ಎಲ್ಲಾ ಕೇಳಿದ್ದೇವೆ. ಅದ್ದುನ ಮೊಬೈಲ್ ನಿಂದ ತೆಗೆದು ಕಳುಹಿಸಿದ್ದಾನೆ” ಎನ್ನುವ ಆಡಿಯೋವು ವೈರಲ್ ಆಗ್ತಿದೆ.
ಈ ಆಡಿಯೋ ಮುಂಡೂರು ಬಳಿಯ ಧಾರ್ಮಿಕ ಕ್ಷೇತ್ರವೊಂದರ ರಸ್ತೆಯ ವಿಚಾರವಾಗಿ ನಡೆದ ಆಡೀಯೊ ಸಂಭಾಷಣೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಉಲ್ಲೇಖಿಸಲಾಗಿರುವ ಅದ್ದು ಹಾಗೂ ಮೊದಲ ಆಡಿಯೋ ದಲ್ಲಿರುವ ವ್ಯಕ್ತಿ ಒಬ್ಬರೇ ಎಂದು ಹೇಳಲಾಗುತ್ತಿದೆ. ಇನ್ನು ಎರಡೂ ಆಡಿಯೊದಲ್ಲಿರುವ ಇನ್ನೊಬ್ಬ ವ್ಯಕ್ತಿ ರವೀಂದ್ರ ಎನ್ನುವ ಸ್ಥಳೀಯ ವ್ಯಕ್ತಿ ಎಂದು ತಿಳಿದು ಬಂದಿದೆ. . ಸತ್ಯಸತ್ಯಾತೆ ಇನ್ನು ತಿಳಿದು ಬರಬೇಕಷ್ಟೇ