ನವ ದೆಹಲಿ : ಡಿ 21 : ಚೀನಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನಜಂಗುಳಿಯಿರುವ ಪ್ರದೇಶಗಳಲ್ಲಿ. ಮಾಸ್ಕ್ ಧರಿಸುವಂತೆ ಕೇಂದ್ರ ಮಹತ್ವದ ಸೂಚನೆ ನೀಡಿದೆ. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯಯವರು ಉನ್ನತ ಮಟ್ಟದ ಅಧಿಕಾರಿಗಳ ಜೊತೆ ದೇಶದ ಕೊವೀಡ್ ಕುರಿತಾಗಿ ಪರಿಸ್ಥಿತಿ ಪರಿಶೀಲನಾ ಸಭೆ ನಡೆಸಿದರು. ಅಲ್ಲದೆ, ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
‘ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ತಜ್ಞರ ಜೊತೆ ಇಂದು ದೇಶದಲ್ಲಿ ಕೋವಿಡ್ ಸ್ಥಿತಿ ಕುರಿತಂತೆ ಪರಿಶೀಲನಾ ಸಭೆ ನಡೆಸಿದೆ. ಕೋವಿಡ್ ಇನ್ನೂ ಅಂತ್ಯಗೊಂಡಿಲ್ಲ. ಸಂಬಂಧಿತ ಎಲ್ಲ ಅಧಿಕಾರಿಗಳಿಗೂ ಎಚ್ಚರಿಕೆ ವಹಿಸಲು ಮತ್ತು ಕಣ್ಗಾವಲಿಗೆ ಸೂಚಿಸಿದ್ದೇನೆ. ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ನಿರ್ವಹಿಸಲು ನಾವು ಸಿದ್ಧರಾಗಿದ್ದೇವೆ’ ಎಂದು ಮಾಂಡವೀಯಟ್ವೀಟ್ ಮೂಲಕ ತಿಳಿಸಿದ್ಧಾರೆ.
ಆರೋಗ್ಯ, ಫಾರ್ಮಾಸಿಟಿಕಲ್, ಬಯೊಟೆಕ್ನಾಲಜಿ, ಆಯುಷ್ ಇಲಾಖೆಯ ಅಧಿಕಾರಿಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಡಿಜಿ ರಾಜೀವ್ ಬಹ್ಲ್, ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪೌಲ್, ಲಸಿಕೀಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ(ಎನ್ಟಿಎಜಿಐ) ಅಧ್ಯಕ್ಷ ಡಾ.ಎನ್.ಕೆ. ಅರೋರಾ ಮುಂತಾದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಜಪಾನ್, ಅಮೆರಿಕ, ದಕ್ಷಿಣ ಕೊರಿಯಾ, ಬ್ರೆಜಿಲ್ ಮತ್ತು ಚೀನಾ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಕೊರೊನಾದ ಹೊಸ ತಳಿಗಳನ್ನು ಪತ್ತೆ ಮಾಡುವ ದೃಷ್ಟಿಯಿಂದ ಹೊಸದಾಗಿ ಪತ್ತೆಯಾದ ಕೋವಿಡ್ ಪ್ರಕರಣಗಳ ಜಿನೋಮ್ ಪರೀಕ್ಷೆ ಹೆಚ್ಚಿಸುವಂತೆ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಈ ಕುರಿತಂತೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಕೊರೊನಾದ ಹೊಸ ತಳಿಗಳ ಪತ್ತೆಗೆ ಜಿನೋಮ್ ಪರೀಕ್ಷೆ ತೀವ್ರಗೊಳಿಸಬೇಕಿದೆ ಎಂದು ತಿಳಿಸಿದ್ದಾರೆ.
ದೇಶದ ಎಲ್ಲ ನಾಗರಿಕರು ಕೋವಿಡ್ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಬೇಕು ಮತ್ತು ವೈರಸ್ ಹರಡುವಿಕೆ ತಡೆಗೆ ಜನಜಂಗುಳಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ ಮಾಂಡವೀಯ ಜೊತೆಗಿನ ಸಭೆ ಬಳಿಕ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಒತ್ತಾಯಿಸಿದ್ದಾರೆ.
‘ದೇಶದಲ್ಲಿ ಸದ್ಯ ಶೇಕಡ 27–28ರಷ್ಟು ಜನರು ಮಾತ್ರ ಕೋವಿಡ್ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದಿದ್ದಾರೆ. ಹಿರಿಯ ನಾಗರಿಕರೂ ಸೇರಿದಂತೆ ಉಳಿದ ಎಲ್ಲ ನಾಗರಿಕರು ಲಸಿಕೆ ಪಡೆಯಬೇಕು’ಎಂದು ಅವರು ಹೇಳಿದ್ದಾರೆ.
‘ಒಳಾಂಗಣ ಅಥವಾ ಹೊರಾಂಗಣ ಎಲ್ಲಿಯೇ ಇದ್ದರೂ ಜನಜಂಗುಳಿ ಇದ್ದಾಗ ಮಾಸ್ಕ್ ಬಳಸಿ. ವಿಶೇಷವಾಗಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಅಥವಾ ಹಿರಿಯ ನಾಗರಿಕರು ಈ ನಿಯಮ ಪಾಲಿಸುವುದು ಮುಖ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.
ಭಾರತ್ ಜೋಡೊಗೂ ಸಂಕಷ್ಟ:

ಕೋವಿಡ್–19 ನಿಯಮಾವಳಿಗಳನ್ನು ಪಾಲನೆ ಮಾಡಿ. ಸಾಧ್ಯವಾಗದಿದ್ದರೆ ಭಾರತ್ ಜೋಡೊ ಯಾತ್ರೆಯನ್ನು ನಿಲ್ಲಿಸಿ ಎಂದು ಕಾಂಗ್ರೆಸ್’ಗೆ ಕೇಂದ್ರ ಸರ್ಕಾರ ಬುಧವಾರ ಸೂಚನೆ ನೀಡಿದೆ.
ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಭಾರತ್ ಜೋಡೊ ಯಾತ್ರೆಯಲ್ಲಿ ಕೋವಿಡ್ ತಡೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಪಾಲನೆಯಾಗದಿದ್ದರೇ ಯಾತ್ರೆಯನ್ನು ನಿಲ್ಲಿಸುವುದು ಸೂಕ್ತ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ವಿಚಾರವನ್ನು ತಲೆಯಲ್ಲಿಟ್ಟುಕೊಳ್ಳಿ ಎಂದು ಪತ್ರದಲ್ಲಿ ಸೂಚಿಸಿದ್ದಾರೆಂದು ವರದಿಗಳು ತಿಳಿಸಿವೆ.
ಯಾತ್ರೆಯಲ್ಲಿ ಭಾಗವಹಿಸಿದ ನಂತರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದನ್ನು ಉಲ್ಲೇಖಿಸಿ ರಾಜಸ್ಥಾನದ ಮೂವರು ಸಂಸದರ ಬರೆದಿರುವ ಪತ್ರವನ್ನು ಕೂಡ ಕೇಂದ್ರ ಸಚಿವರು ರಾಹುಲ್ ಗಾಂಧಿಗೆ ಕಳುಹಿಸಿರುವ ಪತ್ರದಲ್ಲಿ ಲಗತ್ತಿಸಿದ್ದಾರೆ.