ಪುತ್ತೂರು: ಕೇಂದ್ರ ಸರ್ಕಾರ ನೀಡುವ 2022ನೇ ಸಾಲಿನ ಅಟಲ್ ಸಾಧನಾ ರಾಷ್ಟ್ರೀಯ ಪುರಸ್ಕಾರಕ್ಕೆ (Atal Achievement Award) ಪುತ್ತೂರಿನ ಎಸ್‌ಜಿ ಕಾರ್ಪೊರೇಟ್ಸ್ ಸಮೂಹದ ಮೇಘಾ ಫುಡ್ ಪ್ರೊಸೆಸಿಂಗ್‌ಗೆ ಅಂದರೆ ಬಿಂದೂ (Bindu Mineral water) ಸಮೂಹ ಸಂಸ್ಥೆಗೆ ದೊರೆತಿದೆ.
ಆಹಾರ ಉತ್ಪನ್ನಗಳ ತಯಾರಿಕಾ ಘಟಕ ವಿಭಾಗದಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಅವಕಾಶ ಮತ್ತು ಗ್ರಾಮೀಣ ಭಾಗದ ಆರ್ಥಿಕ ಸಂಚಲನಕ್ಕಾಗಿ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಉಕ್ಕು ಸಚಿವಾಲಯ, ಆಹಾರ ನಿರ್ವಹಣಾ ಕೈಗಾರಿಕಾ ಸಚಿವಾಲಯ, ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವಾಲಯವು ಈ ಪುರಸ್ಕಾರ ನೀಡುತ್ತಿದೆ.
ಡಿ.21ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಬಿಂದೂ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಸತ್ಯಶಂಕರ್ ಭಟ್ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್‌ಚಂದ್ ಗೆಲ್ನೋಟ್, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅನುರಾಗ್ ಸಿಂಗ್ ಠಾಕೂರ್, ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವ ಪುರುಷೋತ್ತಮ್ ರೂಪಾಲ್, ಉಕ್ಕು ಮತ್ತು ಗ್ರಾಮೀಣಾಭಿವೃದ್ದಿ ರಾಜ್ಯ ಸಚಿವ ಫಾಗನ್ ಸಿಂಗ್ ಕುಲಸ್ತೆ, ಆಹಾರ ನಿರ್ವಹಣಾ ಕೈಗಾರಿಕಾ ಸಚಿವ ಪಶುಪತಿಕುಮಾರ್ ಪರಾಸ್ ಭಾಗವಹಿಸಲಿದ್ದಾರೆ.
*2025ರ ವೇಳೆ 1ಸಾವಿರ ಕೋಟಿ ರೂ. ವ್ಯವಹಾರ ಗುರಿ
ಮೆಘಾ ಫ್ರೂಟ್ ಪ್ರೊಸೆಸಿಂಗ್ ಪ್ರೈ.ಲಿ ಸಂಸ್ಥೆಯು ದಕ್ಷಿಣ ಕನ್ನಡದ ಪುತ್ತೂರಿನ ನರಿಮೊಗರು ಎಂಬ ಕುಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ಆರಂಭಗೊಂಡು ಇಂದು 500 ಕೋಟಿ ರೂ. ವ್ಯವಹಾರ ಮಾಡುತ್ತಿದೆ. ಈ ಸಂಸ್ಥೆ 2025ರ ವೇಳೆ 1ಸಾವಿರ ಕೋಟಿ ರೂ. ವ್ಯವಹಾರ ಗುರಿ ಹಾಕಿಕೊಂಡಿದೆ.
ಬಿಂದು ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಸೇರಿದಂತೆ 40 ಬಗೆಯ ದೇಶಿ ಸಾಂಪ್ರದಾಯಿಕ ಪೇಯ, 15 ಬಗೆಯ ಸ್ನ್ಯಾಕ್ಸ್‌ಗಳನ್ನು ಮಾರುಕಟ್ಟೆ ಬಿಡುಗಡೆಗೊಳಿಸಿದೆ. ದೇಶದ ಶೇ.60ರಷ್ಟು ಭೌಗೋಳಿಕ ಪ್ರದೇಶದಲ್ಲಿ ಮಾರುಕಟ್ಟೆ ಹೊಂದಿದ್ದು, ವಿದೇಶಕ್ಕೂ ಲಗ್ಗೆ ಇಟ್ಟಿದೆ.
ಪುತ್ತೂರಿನ ಸತ್ಯಶಂಕರ್ ಭಟ್ ಮತ್ತು ರಂಜಿತ ಸತ್ಯಶಂಕರ್ ಮಾಲಿಕತ್ವದ ಈ ಕಂಪನಿ 1500 ಜನಕ್ಕೆ ನೇರ ಹಾಗೂ ಪರೋಕ್ಷವಾಗಿ ಹತ್ತು ಸಾವಿರ ಜನಕ್ಕೆ ಉದ್ಯೋಗ ನೀಡಿದೆ. ಸಂಸ್ಥೆಯಲ್ಲಿ ಶೇ. 75ರಷ್ಟು ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಮೂಲಕ ಗ್ರಾಮೀಣ ಭಾಗದ ಆರ್ಥಿಕ ಸಬಲೀಕರಣಕ್ಕೆ ಹೊಸ ವ್ಯಾಖ್ಯಾನವನ್ನು ಪುತ್ತೂರಿನ ನರಿಮೊಗರಿನ ಎಸ್ ಜಿ ಸಮೂಹ ಸಂಸ್ಥೆ ಬರೆದಿದೆ.
ಸಂಸ್ಥೆಯು 40ಕ್ಕೂ ಅಧಿಕ ಉತ್ಪನ್ನಗಳನ್ನು ತಯಾರಿಸುತ್ತಿದೆ. ಬಿಂದು ಪ್ಯಾಕೇಜ್ ಡ್ರಿಂಕಿಂಗ್ ವಾಟರ್, ಬಿಂದು ಜೀರಾ ಫಿಜ್, ಬಿಂದು ಲೆಮೆನ್, ಸಿಪ್ ಅನ್ ಮ್ಯಾಂಗೊ, ಫ್ರೋಝಾನ್, ಮ್ಯಾಂಗೋ ಮಿಲ್ಕ್ ಶೇಕ್, ಲೆಮೆನ್ ವಿದ್ ಮಿಂಟ್ ಸೇರಿದಂತೆ ಹಲವು ಉತ್ಪನ್ನಗಳಿವೆ.