ಪುತ್ತೂರು : ಡಿ 20 : ಬೆಳ್ಳಾರೆಯ ಪ್ರತಿಷ್ಟಿತ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಗೌಡ ಕಾಮಧೇನು ಎಂವರನ್ನು ಅಪಹರಿಸಿದ ಆರೋಪದಡಿ 6 ಜನರ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ. 19 ರಂದು ಮಧ್ಯಾಹ್ನ ಆಂಬ್ಯುಲೆನ್ಸ್ ಸಹಿತ ಕೆಲವು ವಾಹನಗಳಲ್ಲಿ ಬಂದ ತಂಡವೊಂದು ಬೆಳ್ಳಾರೆ ಸಮೀಪದ ಕಾವಿನ ಮೂಲೆಯಲ್ಲಿರುವ ತನ್ನ ಮನೆಯ ಅಂಗಲದಲ್ಲಿದ್ದ ನವೀನ್ ಗೌಡ ರವರನ್ನು ಬಲವಂತವಾಗಿ ಅಂಬ್ಯುಲೆನ್ಸ್ ನಲ್ಲಿ ಹಾಕಿ ಕರೆದುಕೊಂಡು ಹೋಗಿತ್ತು.
ಅಪಹರಣಕ್ಕೊಳಗಾದ ನವೀನ್ ಅವರ ತಂದೆ ಮಾಧವ ಗೌಡ, ನವಿನ್ ಅವರ ಪತ್ನಿ ಸ್ಪಂದನ ಚಿಲ್ತಡ್ಕ , ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ದಿವ್ಯ ಪ್ರಭಾ ಚಿಲ್ತಡ್ಕ ( ಸ್ಪಂದನ ರವರ ತಾಯಿ ), ಪರುಶುರಾಮ್ , ಸ್ಪರ್ಶಿತ್ ಹಾಗೂ ನವೀನ್ ರೈ ತಂಬಿನಮಕ್ಕಿ ಪ್ರಕರಣದ ಆರೋಪಿಗಳು.
ದೂರಿನಲ್ಲಿ ಏನಿದೆ ?
ನವೀನ್ ಅವರ ತಾಯಿ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನ್ ಕುಮಾರ್ ಹಾಗೂ ಆತನ ಪತ್ನಿ ಸ್ಪಂದನಳ ಮಧ್ಯೆ ಸುಮಾರು 3 ತಿಂಗಳಿನಿಂದ ವೈಮನಸ್ಸು ಉಂಟಾಗಿ ಸ್ಪಂದನಳು ತವರು ಮನೆಗೆ ಹೋಗಿದ್ದರು , ಡಿ 18 ರಂದು ಸೊಸೆ ಸ್ಪಂದನ, ಆಕೆಯ ಹೆತ್ತವರಾದ ಪರಶುರಾಮ, ದಿವ್ಯಪ್ರಭಾ ಚಿಲ್ತಡ್ಕ, ತಮ್ಮ ಸ್ಪರ್ಶಿತ್ಹಾಗೂ ಸಂಬಂಧಿಕರು ಬಂದು ಮಾತುಕತೆ ನಡೆಸಿದ್ದಾರೆ, ಆ ವೇಳೆ ನವೀನ್ ಕುಮಾರ್ ಪತ್ನಿ ಸ್ಪಂದನಳು ಬೇಡ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಂಟಿ ಕೊಪ್ಪದಲ್ಲಿ ನಡೆದ ಹೈಡ್ರಾಮದ ವಿಡಿಯೋ
ಹೀಗಾಗಿ ಡಿ .19 ರಂದು (ನಿನ್ನೆ ) ನೀರಜಾಕ್ಷಿಯವರ ಪತಿ ಮಾಧವ ಗೌಡ, ಸೊಸೆ ಸ್ಪಂದನ, ಸೊಸೆಯ ತಾಯಿ ದಿವ್ಯಪ್ರಭಾ ಚಿಲ್ತಡ್ಕ, ತಂದೆ: ಪರಶುರಾಮ, ತಮ್ಮ ಸ್ಪರ್ಶಿತ್, ತಂಬಿನಮಕ್ಕಿ ಎಂಬವರು ನವೀನ್ ಕುಮಾರ್ ನನ್ನು ಅಪಹರಿಸುವ ಉದ್ದೇಶದಿಂದ ಒಟ್ಟು ಸೇರಿ 12-30 ಗಂಟೆಗೆ ಬೆಳ್ಳಾರೆ ಗ್ರಾಮದ ಕಾವಿನಮೂಲೆ ಎಂಬಲ್ಲಿನ ಮನೆ ಬಳಿ ಬಂದಿದ್ದಾರೆ. ಅಲ್ಲಿ ನವೀನ್ ರವರ ಕೈ ಕಾಲು ಕಟ್ಟಿ ಆಂಬುಲೆನ್ಸ್ ವಾಹನದಲ್ಲಿ ಎಲ್ಲಿಗೋ ಅಪಹರಿಸಿಕೊಂಡು ಹೋಗಿದ್ದಾರೆ.
ಆ ವೇಳೆ ತಡೆಯಲು ಹೋದ ತಾಯಿ ನೀರಜಾಕ್ಷಿಯವರನ್ನು ಮತ್ತು ಅವರ ಹಿರಿಯ ಸೊಸೆ ಪ್ರಜ್ಞಾ ಪಿ.ಎಸ್ ರವರನ್ನು ಆರೋಪಿಗಳು ಅಂಗಳದಲ್ಲಿ ಎಳೆದಾಡಿ ಕೈಯಿಂದ ಹಾಗೂ ಕಾಲಿನಿಂದ ತುಳಿದು ರಂಪಾಟ ಮಾಡಿದ್ದಾರೆ . ಈ ಗಲಾಟೆಯಲ್ಲಿ ಗಾಯಗೊಂಡ ನೀರಜಾಕ್ಷಿ ಮತ್ತು ಪ್ರಜ್ಞಾ ಪಿ.ಎಸ್ ರವರು ಸುಳ್ಯ ಕವಿಜಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ನಿನ್ನೆ ಏನಾಯಿತು ?
ನಿನ್ನೆ ಮಧ್ಯಾಹ್ನ ನವೀನರನ್ನು ಆಂಬ್ಯುಲೆನ್ಸ್ ನಲ್ಲಿ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಬಳಿ ಅಲ್ಲಿಯ ಆಂಬ್ಯಲೆನ್ಸ್ ನವರು ಬೆಳ್ಳಾರೆಯಿಂದ ಹೋದ ಆಂಬ್ಯಲೆನ್ಸನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಅಲ್ಲಿಯ ಪೊಲೀಸರಿಗೊಪ್ಪಿಸಿದ್ದರು ಎಂದು ತಿಳಿದು ಬಂದಿದೆ.