ಪುತ್ತೂರು: ಸರಕಾರದ ನಿಯಮವನ್ನು ಉಲ್ಲಂಘಿಸಿ ಖಾಸಗಿ ಸಂಸ್ಥೆಯೊಂದು ನಕಲಿ ಚುನಾವಣಾ ಗುರುತಿನ ಚೀಟಿ (Fake Voter ID) ವಿತರಿಸಿದ್ದಾರೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಪರಿಶೀಲನೆಗೆ ಆಗಮಿಸಿದ ಪುತ್ತೂರು ಸಹಾಯಕ ಆಯುಕ್ತರು ಪುತ್ತೂರು ಕೋರ್ಟ್ ರಸ್ತೆ ಸಮೀಪದ ಮೇಧಿನಿ ಸಂಸ್ಥೆಗೆ ಬೀಗ ಜಡಿದ ಘಟನೆ ಡಿ 5 ರಂದು ರಾತ್ರಿ ನಡೆದಿತ್ತು
ಮೇದಿನಿ ಸಂಸ್ಥೆಯೂ ವ್ಯಕ್ತಿಯೊಬ್ಬರಿಗೆ ಚುನಾವಣಾ ಗುರುತಿನ ಚೀಟಿ ಮುದ್ರಿಸಿ ಕೊಟ್ಟಿದ್ದು, ಅದನ್ನವರು ತಾಲೂಕು ಕಛೇರಿಗೆ ಯಾವುದೋ ಕಾರ್ಯ ನಿಮಿತ್ತ ಸಲ್ಲಿಸಿದ್ದರು. ಆ ವೇಳೆ ಅದು ಅನಧಿಕೃತ ಚುನಾವಣಾ ಗುರುತಿನ ಚೀಟಿ ಎಂದು ಕಂಡು ಬಂದ ಹಿನ್ನಲೆಯಲ್ಲಿ ಸಿಬ್ಬಂದಿಗಳು ತಾಲೂಕು ಕಛೇರಿಯಲ್ಲಿರುವ ಚುನಾವಣಾ ಘಟಕಕ್ಕೆ ಪರಿಶೀಲನೆಗೆ ಕಳುಹಿಸಿದ್ದಾರೆ. ಅಲ್ಲಿ ಆ ಚುನಾವಣಾ ಗುರುತಿನ ಚೀಟಿ ಖಾಸಗಿ ಸಂಸ್ಥೆ ವಿತರಿಸಿರುವುದು ಪತ್ತೆಯಾಗಿದೆ.ಈ ಬಗ್ಗೆ ಮಾಹಿತಿ ಪಡೆದ ಸಹಾಯಕ ಆಯಕ್ತ ಗಿರೀಶ್ ನಂದನ್ ಅವರು ಮೇದಿನಿ ಜನಸೇವಾ ಕೇಂದ್ರಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಯಾವುದೇ ಖಾಸಗಿ ಸಂಸ್ಥೆಗಳು ಚುನಾವಣಾ ಗುರುತಿನ ಚೀಟಿಗಳನ್ನು ಡೌನ್ ಲೋಡ್ ಯಾ ಮುದ್ರಿಸಿ ಕೊಡುವಂತಿಲ್ಲ ಎಂಬ ನಿಯಮಗಳಿದ್ದು, ಅದನ್ನು ಉಲ್ಲಂಘಿಸಿ ಮೇದಿನಿಯು ಚುನಾವಣಾ ಗುರುತಿನ ಚೀಟಿ ಮುದ್ರಿಸಿ ಕೊಟ್ಟಿರುವ ಬಗ್ಗೆ ಎಸಿಯವರಿಗೆ ದೂರುಗಳು ಬಂದ ಹಿನ್ನಲೆಯಲ್ಲಿ ಕಾರ್ಯಚರಣೆ ನಡೆದಿತ್ತು ನಂತರ ಸಹಾಯಕ ಮತದಾರರ ನೋಂದಾಣಾಧಿಕಾರಿ ಆಗಿರುವ ಪುತ್ತೂರು ತಹಶೀಲ್ದಾರರು ಪುತ್ತೂರು ನಗರ ಪೋಲಿಸ್ ಠಾಣೆಗೆ ಕ್ರಿಮಿನಲ್ ದೂರನ್ನು ದಾಖಲಿಸಿದ್ದು ಠಾಣಾಧಿಕಾರಿಗಳು, ಅ.ಕ್ರ. 100/2022 ರಂತೆ ಭಾರತೀಯ ದಂಡ ಸಂಹಿತೆ 417, 465, 468, 471 ಮತ್ತು ಕಲಂ. 66C ಮತ್ತು 66 D ಐ.ಟಿ ಕಾಯ್ದೆಯಡಿ ಸಂಸ್ಥೆಯ ಮಾಲಕಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಇದೀಗ ಸಂಸ್ಥೆಯ ಮಾಲಕಿಗೆ ಮಂಗಳೂರಿನ 6 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ. ಆರೋಪಿ ಪರ ಚಾಣಕ್ಯ ಲಾ ಚೇಂಬರ್ಸ್ ನ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ವಾದಿಸಿದ್ದರು