ಪುತ್ತೂರು: ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ ಜೊಡೋ ಯಾತ್ರೆಯು ನೂರು ದಿನ ಪೂರೈಸಿದ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಪುತ್ತೂರಿನ ಗಾಂಧಿ ಕಟ್ಟೆಯ ಬಳಿಯಲ್ಲಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಅಂದು ದೇಶಕ್ಕಾಗಿ ಮಹಾತ್ಮ ಗಾಂಧಿ ಅವರು ಪಾದಯಾತ್ರೆ ನಡೆಸಿ ಜನರಿಗೆ ಜಾಗೃತಿ ಮೂಡಿಸಿದ್ದರು. ಇಂದು ದೇಶಕ್ಕಾಗಿ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಪಾದಯಾತ್ರೆ ನಡೆಸಿ ಜನರಲ್ಲಿ ಜಾಗೃತಿ ಮತ್ತು ಎಚ್ಚರಿಕೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕೋಮು ವೈಷಮ್ಯ ಹರಡುತ್ತಿರುವ ಬಿಜೆಪಿಯ ನಡೆಯನ್ನು ವಿರೋಧಿಸಿ ಹಾಗೂ ಜಾತ್ಯಾತೀತ ನೆಲೆಗಟ್ಟನ್ನು ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಯಾತ್ರೆ ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿದೆ. ಮುಂದೆ 50 ದಿನಗಳ ಯಾತ್ರೆಯು ನಡೆಯಲಿದ್ದು, ಬಳಿದ ದೇಶದ ರಾಜಕೀಯದಲ್ಲಿ ಮಹತ್ತರವಾದ ಬದಲಾವಣೆಯಾಗಲಿದೆ ಎಂದು ತಿಳಿಸಿದರು.
ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮಾತನಾಡಿ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೊಡೋ ಯಾತ್ರೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಈ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಆಯಾ ಕಾಲಕ್ಕೆ ತಕ್ಕಂತೆ ಹಲವಾರು ಯಾತ್ರೆಗಳು ಭಾರತದಲ್ಲಿ ನಡೆದಿದೆ. ಈ ನಿಟ್ಟಿನಲ್ಲಿ ಭಾರತ ಜೊಡೋ ಯಾತ್ರೆಯು ಬಹಳ ಮಹತ್ವವನ್ನು ಪಡೆದುಕೊಂಡಿದೆ. ರಾಹುಲ್ ಗಾಂಧಿ ಅವರು ಈ ಯಾತ್ರೆಯನ್ನು ಯಾವುದೇ ಅಧಿಕಾರದ ಉದ್ದೇಶಕ್ಕಾಗಿ ನಡೆಸುತ್ತಿಲ್ಲ. ಬದಲಿಗೆ ದೇಶದ ಐಕ್ಯತೆಗಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಈ ಯಾತ್ರೆ ನಡೆಸುತ್ತಿದ್ದಾರೆ. ಉದ್ಯೋಗ ವಂಚಿತ ಯುವ ಜನಾಂಗದ, ನೊಂದ ಜನರ, ಅಲ್ಪ ಸಂಖ್ಯಾತ, ಹಿಂದುಳಿದ ವರ್ಗ ಮತ್ತು ಮಹಿಳೆಯರ ಪರವಾಗಿ ಈ ಜೊಡೋ ಯಾತ್ರೆ ನಡೆಯುತ್ತಿದೆ ಎಂದು ತಿಳಿಸಿದರು.

ಬಳಿಕ ಸಾರ್ವಜನಿಕರಿಗೆ ಸಿಹಿತಿಂಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅನಿತಾ ಹೇಮನಾಥ ಶೆಟ್ಟಿ, ಸೂತ್ರಬೆಟ್ಟು ಜಗನ್ನಾಥ ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು, ಫಾರೂಕ್ ಬಯಬ್ಬೆ, ಸಂಶುದ್ದೀನ್ ಅಜ್ಜಿನಡ್ಕ, ಅನ್ವರ್ ಖಾಸಿಂ, ಇಸಾಕ್ ಸಾಲ್ಮರ, ಪರಮೇಶ್ವರ ಭಂಡಾರಿ, ಮಹೇಶ್ಚಂದ್ರ ಸಾಲ್ಯಾನ್, ಕಮಲೇಶ್ ಸರ್ವೆ, ಹನೀಫ್ ಪುಣ್ಚತ್ತಾರು, ರಾಬಿನ್ ತಾವ್ರೋ, ಜಯಪ್ರಕಾಶ್ ರೈ ಬದಿನಾರು, ಶಾನು ಬಪ್ಪಳಿಗೆ, ಗಂಗಾಧರ ಶೆಟ್ಟಿ ಎಲಿಕ, ನಾಗೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.