ಮಂಡ್ಯ: ವಸತಿ ನಿಲಯದಲ್ಲಿ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಪ್ರೌಢಶಾಲೆ ಮುಖ್ಯಶಿಕ್ಷಕನಿಗೆ ವಿದ್ಯಾರ್ಥಿನಿಯರೇ ಅಟ್ಟಾಡಿಸಿಕೊಂಡು ಹೊಡೆದು ಪೊಲೀಸರಿಗೆ ಒಪ್ಪಿಸಿದ್ದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿ ನಡೆದಿದೆ. ಕಾಮುಕ ಶಿಕ್ಷಕನಿಗೆ ವಿದ್ಯಾರ್ಥಿಗಳು ಅಟ್ಟಾಡಿಸಿ ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಮುಕನಿಗೆ ಬುದ್ಧಿಕಲಿಸಿದ ವಿದ್ಯಾರ್ಥಿನಿಯರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಎಂದು ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿ ಬಂದಿದೆ
ಪ್ರೌಢಶಾಲೆ ಮುಖ್ಯಶಿಕ್ಷಕ (Head Master) ಚಿನ್ಮಯಮೂರ್ತಿಗೆ ಹಾಸ್ಟೆಲ್ (Girls Hostel) ಉಸ್ತುವಾರಿಯನ್ನು ನೀಡಲಾಗಿತ್ತು. ಪ್ರತಿ ನಿತ್ಯ ಸಂಜೆ ಸಮಯದಲ್ಲಿ ಹಾಸ್ಟೆಲ್ಗೆ ಬರುತ್ತಿದ್ದ ಚಿನ್ಮಯಮೂರ್ತಿ, ತನ್ನ ಕೊಠಡಿಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಅಶ್ಲೀಲ ವಿಡಿಯೋಗಳನ್ನು ತೋರಿಸುವ ಜೊತೆಗೆ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನಂತೆ. ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಸಹ ಹಾಕುತ್ತಿದ್ದನಂತೆ. ಬಾಯ್ಬಿಟ್ಟರೆ ಟಿಸಿಯಲ್ಲಿ ಕೆಟ್ಟವಳು ಅಥವಾ ನಡತೆ ಸರಿಯಿಲ್ಲ ಎಂದು ನಮೂದಿಸುವುದಾಗಿ ಹೆದರಿಸುತ್ತಿದ್ದನಂತೆ. ಇಷ್ಟು ವರ್ಷ ಆತನ ದೌರ್ಜನ್ಯ ಸಹಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರು ಇದೀಗ ಸಿಡಿದೆದ್ದಿದ್ದಾರೆ.
ನಿನ್ನೆ (ಡಿ.14) ರಾತ್ರಿ ವಿದ್ಯಾರ್ಥಿನಿಯೊಬ್ಬಳನ್ನು ಕೊಠಡಿಗೆ ಕರೆಸಿಕೊಂಡ ಚಿನ್ಮಯಮೂರ್ತಿ, ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಭಯದಿಂದ ವಿದ್ಯಾರ್ಥಿನಿ ಕೂಗಿಕೊಂಡಿದ್ದು, ಇತರೆ ವಿದ್ಯಾರ್ಥಿನಿಯರು ನೆರವಿಗೆ ಬಂದಿದ್ದಾರೆ. ಬಳಿಕ ಕೊಠಡಿಯಲ್ಲಿ ಕೂಡಿ ಹಾಕಿ ಮುಖ್ಯಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ. ಅಲ್ಲದೆ, ಹಾಸ್ಟೆಲ್ನಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ.
ಈ ವಿಚಾರ ತಿಳಿದು ಹಾಸ್ಟೆಲ್ ಬಳಿಗೆ ಬಂದ ಗ್ರಾಮಸ್ಥರೂ ಆತನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಆರೋಪಿ ಚಿನ್ಮಯಮೂರ್ತಿಯನ್ನು ವಶಕ್ಕೆ ಪಡೆದಿರುವ ಕೆಆರ್ಎಸ್ ಠಾಣೆ ಪೊಲೀಸರು, ನಿಲಯ ಪಾಲಕಿ ಕೆ.ಎಸ್.ನಮಿತ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಿದ್ದಾರೆ. ಕಾಮುಕ ಶಿಕ್ಷಕನ ಬಗ್ಗೆ ಕೆಡಿಪಿ ಸಭೆಯಲ್ಲಿ ಇಂದು(ಗುರುವಾರ) ಪ್ರಸ್ತಾಪಿಸಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕಾಮುಕ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
The headmaster of a school in #Karnataka’s #Mandya was thrashed by students in the hostel & handed over to the police for allegedly misbehaving with one of them. The incident took place in #Srirangapatna's #Katteri village.
— Hate Detector 🔍 (@HateDetectors) December 15, 2022
The headmaster, identified as #ChinmayaAnandaMurthy. pic.twitter.com/ocssFLongl
ಕಾಮುಕ ಶಿಕ್ಷಕನಿಗೆ ಹೆಣ್ಣು ಮಕ್ಕಳೇ ಶಿಕ್ಷೆ ಕೊಟ್ಟಿದ್ದಾರೆ. ಆತನನ್ನ ಹಿಡಿದು ಕೋಲುಗಳಿಂದ ಏಟು ಕೊಟ್ಟಿದ್ದಾರೆ. ಅಂತಹ ಧೈರ್ಯ ತೋರಿದ ಹೆಣ್ಣು ಮಕ್ಕಳಿಗೆ ಅವಾರ್ಡ್ ಕೊಡಬೇಕು. ಆತನನ್ನು ಅಮಾನತು ಅಲ್ಲ, ಸೇವೆಯಿಂದಲೇ ವಜಾ ಮಾಡಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕು. ರಾಜ್ಯಕ್ಕೆ ಇದು ದೊಡ್ಡ ಪಾಠವಾಗಬೇಕು. ಶೌರ್ಯ ಪ್ರಶಸ್ತಿಗೆ ಹಾಸ್ಟೆಲ್ ವಿದ್ಯಾರ್ಥಿನಿಯರನ್ನ ಶಿಫಾರಸು ಮಾಡಿ ಎಂದರು. ಈ ನಿರ್ಣಯ ಒಮ್ಮತದಲ್ಲಿ ಅಂಗೀಕಾರವಾಯಿತು.