ಬೆಳ್ತಂಗಡಿ: ಪತಿ ಹಾಗೂ ಆತನ ಮೂವರು ಸಹೋದರರು ಸೇರಿ ನಕಲಿ ಅಧಿಕಾರ ಪತ್ರ ತಯಾರಿಸಿ ನನ್ನ ಜಮೀನನ್ನು ಪರಬಾರೆ ಮಾಡಿದ್ದಾರೆಂದು ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದು , ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯವು ಬೆಳ್ತಂಗಡಿ ಪೊಲೀಸರಿಗೆ ನಿರ್ದೇಶಿಸಿದೆ.
ಬೆಳ್ತಂಗಡಿ ತಾಲೂಕು, ಕಡಿರುದ್ಯಾವರ ಗ್ರಾಮದ ನಿವಾಸಿ ಸಂಧ್ಯಾ ದೂರು ನೀಡಿದ ಮಹಿಳೆ . ಈಕೆಯ ಪತಿ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಚಂದ್ರಯ್ಯ ಆಚಾರ್ಯರವರ ಪುತ್ರ ಶ್ರೀಕರ ಆಚಾರ್ಯ ಹಾಗೂ ಅವರ ಮೂವರು ಸಹೋದರರಾದ ಶ್ರೀಕೇಶ್, ಶ್ರೀಕಾಂತ್, ಶ್ರೀಪತಿ ನಕಲಿ ಅಧಿಕಾರ ಪತ್ರ ತಯಾರಿಸಿ ವಂಚಿಸಿದವರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಂಧ್ಯಾರವರು ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದಲ್ಲಿ 21 ಸೆಂಟ್ಸ್ ಜಮೀನು ಹೊಂದಿದ್ದರು. ಈ ಜಮೀನಿನ ಬಗ್ಗೆ ಪತಿ ಶ್ರೀಕರ ಆಚಾರ್ಯರವರು ತನ್ನ ಇತರ ಮೂವರು ಸಹೋದರರ ಜತೆ ಸೇರಿ ಕಾನೂನು ಬಾಹಿರವಾಗಿ ಪೋರ್ಜರಿ ಅಧಿಕಾರ ಪತ್ರವನ್ನು ತಯಾರಿಸಿದ್ದಾರೆ. 2020 ರ ನ 27 ರಂದು ಆ ನಕಲಿ ಅಧಿಕಾರ ಪತ್ರವನ್ನು ಬಳಸಿ ಬೆಳ್ತಂಗಡಿ ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ಶ್ರೀಕರ ಆಚಾರ್ಯ ಎಂಬುವವರ ಹೆಸರಿಗೆ ವ್ಯವಸ್ಥಾ ಪತ್ರವನ್ನು ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಬಗ್ಗೆ ಅಕ್ರಮ ಎಸಗಿದವರ ವಿರುದ್ದ ನಕಲಿ ದಾಖಲೆಗಳನ್ನು ಹಾಜರುಪಡಿಸಿ ಸಾರ್ವಜನಿಕ ಕಛೇರಿಯಲ್ಲಿ ಸುಳ್ಳುದಾಖಲೆ ಸೃಷ್ಟಿಸಿದ್ದ ಮತ್ತು ಇದನ್ನು ವಿಚಾರಿಸಿದಾಗ ಕೊಲೆ ಬೆದರಿಕೆ ಒಡ್ಡಿದ್ದ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆಗೆ ಸಂದ್ಯಾರವರು ದೂರು ನೀಡಿದ್ದರು. ಆ ದೂರನ್ನು ಸ್ವೀಕರಿಸಲು ನಿರಾಕರಿಸಿದ ಪೊಲೀಶರು ಸಿವಿಲ್ ಸ್ವರೂಪದ ಪ್ರಕರಣ ಎಂಬುದಾಗಿ ಹಿಂಬರಹ ನೀಡಿದ್ದರು
ಇದರ ವಿರುದ್ಧ ಚಾಣಕ್ಯ ಲಾ ಚೇಂಬರ್ಸ್ ನ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ಮೂಲಕ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯ, ಬೆಳ್ತಂಗಡಿ ಇಲ್ಲಿ ಭಾರತೀಯ ದ೦ಡ ಸ೦ಹಿತೆಯ ಕಲ೦ ೪೧೬,೪೧೭, ೪೧೯, ೪೨೦, ೪೬೩, ೪೬೪, ೪೬೫, ೪೬೮, ೫೦೪,೫೦೬ ಮತ್ತು ಸಹವಾಚ್ಯ ಕಲಂ ೩೪ ರಡಿಯಲ್ಲಿ ಸಂದ್ಯಾರವರು ಖಾಸಗಿ ಫಿರ್ಯಾದಿ ದಾಖಲಿಸಿದ್ದರು.
ದೂರುದಾರರ ಪರ ವಾದ ಅಲಿಸಿದ ನ್ಯಾಯಾಲಯವು ಬೆಳ್ತಂಗಡಿ ಪೋಲಿಸ್ ಠಾಣೆಯ ಠಾಣಾಧಿಕಾರಿಯವರಿಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡುವಂತೆ ಆದೇಶಿಸಿತು. ದೂರುದಾರರ ಪರ ಚಾಣಕ್ಯ ಲಾ ಚೇಂಬರ್ಸ ನ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ವಾದಿಸಿದ್ದರು.