Ad Widget

Arecanut Leaf Spot | ತೂಗುಗತ್ತಿಯಲ್ಲಿ ಅಡಿಕೆ ಕೃಷಿಕನ ಬದುಕು – ದಕ್ಷಿಣ ಕನ್ನಡದ ನಾಲ್ಕು ತಾಲೂಕಿಗೆ ವೇಗವಾಗಿ ಹರಡಿದ ಎಲೆಚುಕ್ಕೆ ರೋಗ : ಅಡಿಕೆ ಸೋಗೆ ಕತ್ತರಿಸಿ ಸುಡುವ ಯೋಜನೆ ಸೂಕ್ತ ಎಂದ ತೋಟಗಾರಿಕ ಸಚಿವ – ಬುಡವೇ ಕತ್ತರಿಸಿ ಎಂದ ಕೃಷಿಕರು..!

Screenshot_20221214-095801_Gallery
Ad Widget

Ad Widget

Ad Widget

ಪುತ್ತೂರು: ಅಡಿಕೆ ಕೃಷಿಕರ ಜೀವನವೇ ಅಪಾಯದಲ್ಲಿದೆ. ಒಂದು ಕಡೆ ಅಡಿಕೆಗೆ ಹಳದಿ ರೋಗ ಇದೀಗ ಬಂದಿರುವ ಮಾರಕ ಎಲೆಚುಕ್ಕಿ ರೋಗ (Arecanut Leaf Spot), ಅದರ ನಡುವೆ ವಿದೇಶಿ ಅಡಿಕೆ ಆಮದು, ಇದೆಲ್ಲದರ ನಡುವೆ ರಾಜ್ಯ ಸಚಿವರು ಎಲೆಚುಕ್ಕಿ ರೋಗಕ್ಕೆ ನೀಡಿರುವ ಸಲಹೆಗೆ ಪ್ರಮುಖ ಅಡಿಕೆ ಕೃಷಿಕರಿಂದಲೇ ಪ್ರಬಲ ವಿರೋಧ ವ್ಯಕ್ತವಾಗುತ್ತಿರುವುದು ಇದೆಲ್ಲದರ ನಡುವೆ ಹೋರಾಟ ಮಾಡಿ ಸೂಕ್ತ ಪರಿಹಾರ ತೆಗೆಸಿಕೊಡಬೇಕಾಗಿದ್ದ ವಿಪಕ್ಷ ಕಾಂಗ್ರೇಸ್‍ ಮೌನಕ್ಕೆ ಇಳಿದಿರುವುದು ಅಡಿಕೆ ಕೃಷಿಕನಿಗೆ ಭವಿಷ್ಯದ ಬಗ್ಗೆ ಭಯ ಕೂತಿದೆ.

Ad Widget

Ad Widget

Ad Widget

Ad Widget

Ad Widget

ಕರಾವಳಿಯಲ್ಲಿ ಅಡಿಕೆ ಕೃಷಿಯ ಮೂಲಕ ಬದುಕು ಕಟ್ಟಿಕೊಂಡ ಜನತೆಗೆ ಕಳೆದ ಎರಡೂವರೆ ದಶಕಗಳಿಂದ ಅಪ್ಪಳಿಸಿದ ಮಾರಕ ರೋಗಗಳು ಅಡಿಕೆ ಕೃಷಿಯನ್ನು ಆಪೋಷನ ತೆಗೆದುಕೊಳ್ಳುತಿದೆ.ಅಡಿಕೆ ಕೃಷಿಗೆ ಬಾಧಿಸುವ ರೋಗಗಳು ಅಡಿಕೆಯನ್ನೇ ನಂಬಿದ ರೈತನ ಬದುಕನ್ನು ಮೂರಾಬಟ್ಟೆ ಮಾಡುವತ್ತ ಮುನ್ನುಗ್ಗಿದೆ.

Ad Widget

Ad Widget

Ad Widget

Ad Widget

Ad Widget

ಇದೀಗ ಸುಳ್ಯದಿಂದ ಹಳದಿ ರೋಗದ ಕದಂಬ ಬಾಹುಚಾಚಿದ್ದು ಅಡಿಕೆ ಕೃಷಿಯನ್ನು ನಾಶಪಡಿಸಿದೆ. ಬೇರು ಹುಳ ರೋಗ, ಪ್ರತಿ ವರ್ಷ ಬಾದಿಸುವ ಕೊಳೆ ರೋಗ ಗಳು ನಿತ್ಯ ನಿರಂತರವಾಗಿದೆ. ಇದರ ಜೊತೆಗೆ ಅಪ್ಪಳಿಸಿರುವುದು ಎಲೆ ಚುಕ್ಕಿ ರೋಗ. ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಯ ಹಲವು ಗ್ರಾಮಗಳ ಅಡಕೆ ತೋಟಗಳಿಗೆ ಎಲೆ ಚುಕ್ಕಿ ರೋಗ ಬಾದೆ ಕಂಡು ಬಂದಿದ್ದು ಇಡೀ ಕೃಷಿಯೇ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ.

ಬೆಳ್ತಂಗಡಿ, ಬಂಟ್ವಾಳ ಹಾಗೂ ಸುಳ್ಯದ ವಿವಿಧ ಗ್ರಾಮಗಳಲ್ಲಿ ಎಲೆಚುಕ್ಕಿ ರೋಗ ಅತಿ ಭೀಕರವಾಗಿ ಅಪ್ಪಳಿಸಿದೆ. ಹಲವೆಡೆ ಇಡೀ ತೋಟವೇ ಚುಕ್ಕಿ ಹಾವಳಿಯಿಂದ ಮಕಾಡೆ ಮಲಗಿದೆ.

Ad Widget

Ad Widget

Ad Widget

Ad Widget

ಕರ್ನಾಟಕ ರಾಜ್ಯ ತೋಟಗಾರಿಕ ಸಚಿವ ಮುನಿರತ್ನ ಎಲೆಚುಕ್ಕಿ ಬಾಧಿತ ಸುಳ್ಯದ ತೋಟಗಳಿಗೆ ಭೇಟಿ ನೀಡಿದ್ದು ರೋಗಬಾಧಿತ ತೋಟಗಳ ಎಲೆ ಕತ್ತರಿಸಿ ಸುಡುವ ಬಗ್ಗೆ ಯೋಜನೆ ಹಾಕಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಲವು ಅಡಿಕೆ ಕೃಷಿಕರು ಎಲೆಕಡಿಯುವ ಬದಲು ಬುಡವನ್ನೇ ಕಡಿದು ಸುಡುವ ಯೋಜನೆ ಹಾಕಿ ಎಂದು ಲೇವಡಿ ಮಾಡಿದ್ದಾರೆ.

ಏನಿದು ಎಲೆ ಚುಕ್ಕಿ ಬಾದೆ: ಅಡಿಕೆಯ ಗರಿಗಳ (ಸೋಗೆ) ಮೇಲೆ, ಅಡಿಕೆ ಕಾಯಿಯ ಮೇಲೆ ಕಲಾವಿದರು ಬಿಡಿಸುವ ಬಣ್ಣದ ಚುಕ್ಕಿಯಂತೆ ಚಿತ್ತಾರ ಬಿಡಿಸಿ ಅಡಿಕೆ ಮರವನ್ನು ಕೊಲ್ಲುವ ವಿಶಿಷ್ಟ ರೋಗವೇ ಈ ಎಲೆ ಚುಕ್ಕಿ.

ಅಡಿಕೆ ಎಲೆ ಚುಕ್ಕೆ ರೋಗಕ್ಕೆ ತುತ್ತಾದ ಮರಗಳ ಸೋಗೆಗಳ ಮೇಲ್ಬಾಗದಲ್ಲಿ ಹಳದಿ ಮತ್ತು ಕಪ್ಪು ಚುಕ್ಕಿ ಹುಟ್ಟಿಕೊಳ್ಳುತ್ತವೆ. ಈ ಚಿಕ್ಕ ಚಿಕ್ಕ ಚುಕ್ಕಿಗಳು ಒಂದಕ್ಕೊಂದು ಕೂಡಿಕೊಳ್ಳುತ್ತಾ ಇಡೀ ಅಡಕೆ ಮರದ ಸೋಗೆಗಳಿಗೆ ವ್ಯಾಪಿಸುತ್ತವೆ. ಇದೇ ಅಡಕೆ ಮರದ ಅವನತಿಗೆ ಕಾರಣವಾಗುತ್ತದೆ.

‘ಕೊಲೆಟೋಟ್ರೈಕಂ ಗ್ಲಿಯೋಸ್ಪೋಯ್‌ಸ್ (ಕಹಾವಿಯಾ) ಎಂಬ ಶಿಲೀಂದ್ರಗಳು ಈ ರೋಗವನ್ನು ಹರಡುತ್ತದೆ.ಈ ರೋಗಾಣು ಮೊದಲು ಅಡಿಕೆ ಮರದ ಎಲೆಗಳನ್ನು ಆಕ್ರಮಿಸಿ ಚುಕ್ಕಿಯಿಡುತ್ತದೆ. ಕೆಲವೇ ದಿನಗಳಲ್ಲಿ ಬೆಂಕಿ ತಗುಲಿದ ಹಾಗೆ ಅಡಿಕೆ ಮರದ ಸೋಗೆಗಳು ಕರಟಿ ಹೋಗುತ್ತದೆ. ಬಳಿಕ ಮರದಲ್ಲಿರುವ ಅಡಿಕೆ, ಅಡಿಕೆ ಮರದ ಹಿಂಗಾರ, ಚಿಗುರು ಕೊಂಬೆ ಹೀಗೆ ಎಲ್ಲೆಡೆ ದಾಳಿ ಮಾಡಿ ಮರವನ್ನೇ ಕೊಲ್ಲುತ್ತದೆ.

ರೋಗ ಬಾದಿಸಿ ಬಲಹೀನಗೊಂಡ ಮರದಲ್ಲಿದ್ದ ಅಡಿಕೆಗಳು ಸರಿಯಾಗಿ ಬೆಳೆಯುವ ಮುನ್ನವೇ ಉದುರಿ ಬೀಳುತ್ತದೆ. ಕೆಲವೇ ಸಮಯದಲ್ಲಿ ಮರವೇ ಸತ್ತು ಒಣಗಿ ನಿಲ್ಲುತ್ತದೆ.

ಮರ್ಕಂಜ ಗ್ರಾಮದ ಹಲವಾರು ತೋಟಗಳಲ್ಲಿ ಅತಿ ಭೀಕರವಾಗಿ ಎಲೆ ಚುಕ್ಕಿ ರೋಗ ಬಾದಿಸಿದೆ. ಅಡಿಕೆ ಕೃಷಿಕರಾದ ಅಡಿಕೆ ಹಿಷ್ಣುವಿನ ಕೃಷ್ಣ ಕಿಶೋರ್ ಅವರ ತೋಟ, ವೆಂಕಟ್ರಮಣ ಅಂಗಡಿಮಜಲು ಅವರ ತೋಟ ಮಾಪಲತೋಟದ ವಶಿಷ್ಠ, ವಿಶ್ವಾಸ್ ಸಹೋದರರ ತೋಟಗಳಲ್ಲಿ ಎಲೆ ಚುಕ್ಕಿ ರೋಗ ಸಂಹಾರ ತಾಂಡವವಾಡಿದೆ. ತೋಟಕ್ಕೆ ತೋಟವೇ ಎಲೆ ಚುಕ್ಕಿಗೆ ತುತ್ತಾಗಿ ಕರಟಿ ನಿಂತಿದೆ. ಸಣ್ಣ ಗಿಡಗಳಿಂದ ಹಿಡಿದು ದೊಡ್ಡ ಮರಗಳವರೆಗೆ ಇಡೀ ತೋಟದಲ್ಲಿ ಎಲ್ಲೆಡೆ ಚುಕ್ಕಿ ಚಿತ್ತಾರ ಬಿಡಿಸಿದೆ.

ಔಷಧಿ ಸಿಂಪಡಿಸಿದರೂ ರೋಗ ಬಾದೆ ಕಡಿಮೆಯಾಗಿಲ್ಲ.ಕೆಲವೊಮ್ಮೆ ರೋಗ ಹರಡುವುದು ಸ್ವಲ್ಪ ಬಂದರೂ ಮೋಡ, ಮಳೆ, ತೇವಾಂಶದ ವಾತಾವರಣದಿಂದ ರೋಗ ಮತ್ತಷ್ಟು ಉಲ್ಬಣಿಸುತ್ತಿದೆ ಎನ್ನುತ್ತಾರೆ ಕೃಷಿಕ ವಿಶ್ವಾಸ್ ಮಾಪಲತೋಟ.

ಹಳದಿಯನ್ನೂ ಬಿಡದ ಎಲೆಚುಕ್ಕಿ: ಮರ್ಕಂಜ ಸೇರಿದಂತೆ ತಾಲೂಕಿನ ಬಹುತೇಕ ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಹಳದಿ ರೋಗವೂ ಹಬ್ಬಿದೆ. ಹಳದಿ ರೋಗ ಬಾದಿಸಿದ ಅಡಿಕೆ ಮರಗಳನ್ನು ಎಲೆ ಚುಕ್ಕಿ ಬೇಗನೇ ಅಪ್ಪಿಕೊಳ್ಳುತ್ತದೆ. ಹಳದಿ ಎಲೆ ಬಾದಿಸಿದ ಕಂಗು ಕೆಲವು ವರ್ಷಗಳ ಕಾಲ ಫಸಲು ಕೊಡುತ್ತದೆ. ಆದರೆ ಎಲೆ ಚುಕ್ಕಿ ಬಾದಿಸಿದರೆ ಮರಗಳು ಬಹು ಬೇಗನೇ ಕರಟಿ ಹೋಗುತ್ತದೆ. ಇದ್ದ ಫಸಲೂ ಉದುರಿ ಬೀಳುತ್ತಿದೆ. ಹಳದಿ ಬಾದಿಸಿದ ಪ್ರತಿರೋಧಕ ಶಕ್ತಿ ಕಡಿಮೆ ಇರುವ ಕಂಗಿಗೆ ಹಳದಿ ರೋಗ ಬೇಗನೇ ಬಾದಿಸುತ್ತದೆ ಎನ್ನುತ್ತಾರೆ ಕೃಷಿಕರಾದ ಕೃಷ್ಣ ಕಿಶೋರ್.

ತಾಲೂಕಿನ ಕಡಿರುದ್ಯಾವರ, ಮುಂಡಾಜೆಯ ಕೆಲವು ಅಡಕೆ ತೋಟಗಳಲ್ಲಿ ಎಲೆಚುಕ್ಕೆ ರೋಗ ಕಾಣಿಸಿಕೊಂಡಿರುವುದು ಕೃಷಿಕರನ್ನು ಆತಂಕಕ್ಕೆ ತಳ್ಳಿದೆ.

ಬೆಳ್ತಂಗಡಿ ಮಲವಂತಿಗೆ ಗಾಮದ ಎಳನೀರು ಪ್ರದೇಶದಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಎಲೆಚುಕ್ಕೆ ರೋಗ ಇಲ್ಲಿನ ಸುಮಾರು 200 ಎಕರೆ ಅಡಕೆ ತೋಟವನ್ನು ಈಗಾಗಲೇ ನಾಶ ಮಾಡಿದೆ.

ಮಲವಂತಿಗೆ ಗ್ರಾಮದ ದಿಡುಪೆ ಪರಿಸರದ ಕೆಲವು ತೋಟಗಳಲ್ಲಿ ಈಗಾಗಲೇ ಎಲೆಚುಕ್ಕೆ ರೋಗ ವ್ಯಾಪಿಸುತ್ತಿದೆ. ಎಳನೀರು, ದಿಡುಪೆ ಪರಿಸರಕ್ಕೆ ಸುಮಾರು 6 ಕಿ.ಮೀ. ಅಂತರವಿದೆ. ದಿಡುಪೆಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಕಡಿರುದ್ಯಾವರ ಗ್ರಾಮದ ಅಲಂತಡ್ಕ, ಮಲ್ಲಡ್ಕ, ಕುಟ್ಟೂರು ಮೊದಲಾದ ಪರಿಸರಗಳ ವಿವೇಕ್ ಪ್ರಭು, ಶ್ರೀಧರ ಗೌಡ, ನೇಮಣ್ಣ ಗೌಡ, ಮಂಜುನಾಥ ಗೌಡ ಹಾಗೂ ಪರಿಸರದ ಹಲವು ತೋಟಗಳಲ್ಲಿ ಎಲೆಚುಕ್ಕೆ ರೋಗ ಲಕ್ಷಣಗಳು ಕಂಡುಬಂದಿದ್ದು, ಸಾವಿರಾರು ಅಡಕೆ ಮರ ಹಾಗೂ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿದ್ದು ಚುಕ್ಕಿಗಳು ಮೂಡಲಾರಂಭಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಾಳೆಪುಣಿ ಗ್ರಾಮದ ಅಡಿಕೆ ತೋಟಕ್ಕೂ ಎಲೆಚುಕ್ಕಿ ರೋಗ ವಕ್ಕರಿಸಿದೆ.

ಕೋಟಿ ಜಪ ಮಾಡಿದರೂ, ಹೋಮ ನಡೆದರೂ ರೋಗ ನಿಯಂತ್ರಣವಿಲ್ಲ:
ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆಚುಕ್ಕಿ ರೋಗದ ನಿವಾರಣೆಗಾಗಿ ದೇವಸ್ಥಾನದಲ್ಲಿ ಓಂ ನಮಃ ಶಿವಾಯ ನಾಮಾಂಕಿತ ಕೋಟಿ ಜಪ ಕಾರ್ಯಕ್ಕೆ ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿ ತಿಂಗಳಾದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ.

ಶ್ರೀಕ್ಷೇತ್ರ ಶೃಂಗೇರಿ ಮತ್ತು ಹೊರನಾಡು, ರಾಮಚಂದ್ರಾಪುರ ಮಠ ಹಾಗೂ ಇತರ ದೇವಸ್ಥಾನಗಳಲ್ಲಿ ಈಗಾಗಲೇ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಾವಿರಾರು ಅಡಿಕೆ ಕೃಷಿಕರು ಸೇರಿ ಮಹಾ ಚಂಡಿಕ ಹೋಮ, ಕೋಟಿ ಕುಂಕುಮಾರ್ಚನೆ ನಡೆಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ.

ಮಣ್ಣಿನಲ್ಲಿಯೂ ಗಾಳಿಯಲ್ಲಿಯೂ ಹರಡುತ್ತದೆ:
ಈ ಎಲೆ ಚುಕ್ಕಿ ರೋಗ ತೋಟದಿಂದ ತೋಟಕ್ಕೆ ಬಹು ಬೇಗನೇ ವ್ಯಾಪಿಸುತಿದೆ. ಅಂದರೆ ಮಣ್ಣಿನಲ್ಲಿ, ನೀರಿನಲ್ಲಿ,ಗಾಳಿಯಲ್ಲಿ ಈ ರೋಗಾಣು ಹರಡುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತೋಟಗಳಲ್ಲಿ ಅಡಿಕೆ ಮರ, ಗಿಡಗಳನ್ನೇ ಇದು ಬಾದಿಸಿದೆ. ತೋಟದಲ್ಲಿರುವ ಇತರ ಗಿಡಗಳಿಗೆ ಇದು ಅಷ್ಟಾಗಿ ಭಾದಿಸಿಲ್ಲ ಎನ್ನುತ್ತಾರೆ ಕೃಷಿಕರು. ಮಣ್ಣಿನಲ್ಲಿ ಬೆವರು ಸುರಿಸಿ ಬೆಳೆದ ಅಡಿಕೆ ತೋಟಗಳು ಬದುಕಿಗೆ ಆಧಾರವಾಗಬೇಕಾದ ಸಂದರ್ಭದಲ್ಲಿ ಕಣ್ಣ ಮುಂದೆಯೇ ಕರಟಿ ಹೋಗುತ್ತಿರುವುದು ನೋಡಿ ಅಡಿಕೆ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ..!

ಚರ್ಚೆಗೆ ಗ್ರಾಸವಾದ ಸಚಿವರ ಸಲಹೆ: ಎಲೆಚುಕ್ಕಿ ರೋಗ ಬಂದಿರುವ ಎಲ್ಲ ಅಡಿಕೆ ಮರಗಳ ಎಲೆಗಳನ್ನು ಕತ್ತರಿಸುವುದು ಹಾಗೂ ಅವುಗಳಿಗೆ ಕ್ರಿಮಿನಾಶಕ ಸಿಂಪಡಿಸುವುದು, ಕತ್ತರಿಸಿದ ಎಲೆಗಳನ್ನು ಸುಡುವುದು. ಹೀಗೊಂದು ಅಭಿಯಾನ ನಡೆಸಲು ತೋಟಗಾರಿಕ ಸಚಿವ ಮುನಿರತ್ನ ಮುಂದಾಗಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನಾನು ರೋಗಬಾಧಿತ ತೋಟಗಳ ಪರಿಶೀಲನೆ ಮಾಡುವಾಗ ಕೃಷಿಕರೊಬ್ಬರು ಇದೇ ವಿಧಾನವನ್ನು ಅನುಸರಿಸಿ ಯಶಸ್ವಿಯಾಗಿರುವುದು ತಿಳಿಯಿತು. ಅವರ ಸಲಹೆಯಂತೆ ಎಲ್ಲರೂ ಇದನ್ನು ಪಾಲಿಸಿದರೆ ಮಾತ್ರ ಇದು ಹೆಚ್ಚು ಪರಿಣಾಮಕಾರಿ ಆಗಬಹುದು ಎಂದು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.

7 ಜಿಲ್ಲೆಗಳ 42,504 ಹೆಕ್ಟೇರ್‌ನಲ್ಲಿ ರೋಗ : ರಾಜ್ಯದ 7 ಜಿಲ್ಲೆಗಳಲ್ಲಿ ಅಂದಾಜು 42,504 ಹೆಕ್ಟೇರ್ ಪ್ರದೇಶದಲ್ಲಿ ರೋಗವಿರುವುದು ಕಂಡುಬಂದಿದೆ. ಶಿಲೀಂಧ್ರದಿಂದ ಬರುವ ರೋಗ, ಇದಾಗಿದೆ. ರೋಗಬಾಧಿತ ತೋಟಗಳಲ್ಲಿ ಅಡಿಕೆ ಎಲೆಗಳನ್ನು ಕತ್ತರಿಸಬೇಕು, ಆ ಬಳಿಕ ಅವುಗಳನ್ನು ಸುಡಬೇಕು, ಅನಂತರ ತೋಟಕ್ಕೆ ಕ್ರಿಮಿನಾಶಕ ಸಿಂಪಡಿಸಬೇಕು. ಕೀಟನಾಶಕಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಬೆರೆಸಬೇಕು ಎಂದು ತಿಳಿಸಲಾಗುವುದು, ಅಷ್ಟೇ ಹಾಕಬೇಕು, ಇದಕ್ಕೆ ಬೇಕಾದ ಸಂಸ್ಥೆಯನ್ನೂ ನಾವು ಅಂತಿಮಗೊಳಿಸುತ್ತೇವೆ.

ಎಲ್ಲ ರೈತರಿಗೂ ದೋಟಿ, ಏಣಿ ಉಚಿತ: ಎಲೆ ಕತ್ತರಿಸಲು ಬೇಕಾದ ದೋಟಿ, ಏಣಿಯನ್ನು ಉಚಿತವಾಗಿ ಒದಗಿಸಲಾಗುವುದು. ಪ್ರಸ್ತುತ ಕೀಟನಾಶಕ ಸಿಂಪಡಣೆಗೆ 4 ಕೋಟಿ ರೂ. ಬಿಡುಗಡೆ ಮಾಡಲಾಗಿದೆ, ಇನ್ನೂ 15 ಕೋಟಿ ರೂ.ಗೆ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಮುಂದಿರಿಸಿದ್ದೇನೆ. ಎಂದು ಸಚಿವರು ತಿಳಿಸಿದರು.

ಮುಂದಿನ ತಿಂಗಳು ಇಸ್ರೇಲ್‌ಗೆ ಪ್ರವಾಸಗೈಯುತ್ತಿದ್ದು ಅಲ್ಲಿನ ತಜ್ಞರೊಂದಿಗೆ ಅಡಿಕೆಯ ಎಲೆಚುಕ್ಕಿ ರೋಗದ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದೂ ತಿಳಿಸಿದರು.

ನಾನು ಇಲ್ಲಿಂದ ಚಿಕ್ಕಮಗಳೂರಿನ ರೋಗಬಾಧಿತ ತೋಟಗಳಿಗೆ ಭೇಟಿ ನೀಡುತ್ತೇನೆ. ಬಳಿಕ ಈ ಕುರಿತು ಸಭೆ ನಡೆಸಲಿದ್ದು, ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸುತ್ತೇನೆ

ಅತೀ ಹೆಚ್ಚು ಅಡಿಕೆ ಬೆಳೆಯುವ ಆಂಧ್ರದಲ್ಲಿ ಇಲ್ಲ..! :

ಅತೀ ಹೆಚ್ಚು ಅಡಿಕೆ ಬೆಳೆಯುವ ಅಂಧ್ರ ಪ್ರದೇಶದಲ್ಲಿ ಈ ರೋಗ ಕಂಡು ಎಂದು ಸಚಿವರು ಹೇಳಿದರು. ಆದರೆ ಟಿಎಸ್ಎಸ್ ಸಿರಸಿ ಪ್ರಕಾರ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯವೇ ಅತೀ ಹೆಚ್ಚು ಅಡಿಕೆ ಬೆಳೆಯುವ ರಾಜ್ಯವಾಗಿದೆ. ಕೇರಳ ಅಸ್ಸಾಂ, ತಮಿಳುನಾಡು, ಮೇಘಾಲಯ ಅಡಿಕೆ ಬೆಳೆಯುವ ರಾಜ್ಯಗಳಾಗಿವೆ. ಆದರೆ ಕರ್ನಾಟಕದ ಸಚಿವರಿಗೆ ಅಡಿಕೆ ಎಲ್ಲಿ ಹೆಚ್ಚು ಬೆಳೆಯುತ್ತಾರೆ ಎನ್ನುವುದೇ ಮಾಹಿತಿ ಇಲ್ಲದಿರುವುದು ಅಚ್ಚರಿಯ ವಿಷಯವಾಗಿದೆ.

ವಿರೋಧ ಪಕ್ಷ ಕಾಂಗ್ರೇಸ್ ಮೌನ..! : ಕರಾವಳಿ ಕೃಷಿಕರ ಆದಾಯದ ಮೂಲ ಅಡಿಕೆ ಸರ್ವನಾಶ ಆಗುತ್ತಿದ್ದರೆ, ಇತ್ತ ಆಡಳಿತಾರೂಢ ಸರ್ಕಾರದ ಸಚಿವರು ಬಂದು ಅಸಂಬದ್ದ ಹೇಳಿಕೆ ಕೊಡುತಿದ್ದರೂ, ವಿರೋಧ ಪಕ್ಷ ಕಾಂಗ್ರೇಸ್‍ ಅಡಿಕೆ ಬೆಳೆಗಾರರ ಪರವಾಗಿ ಹೋರಾಟಕ್ಕೆ ಇಳಿಯುವ ಗೋಜಿಗೆ ಹೋಗಿಲ್ಲ.

ಒಂದು ಕಡೆ ಅಡಿಕೆಗೆ ವಿವಿಧ ರೋಗಗಳು ಹರಡುತಿದ್ದವೆ, ಮತ್ತೊಂದು ಕಡೆ ವಿದೇಶದ ಕಳಾಪೆ ಗುಣಮಟ್ಟದ ಅಡಿಕೆ ಆಮದಾಗುತಿದ್ದರೂ ಭೂಸುಧಾರಣೆ, ಅಕ್ರಮ ಸಕ್ರಮ, ಉದ್ಯೋಗ ಖಾತ್ರಿಯಂತಹ ಯೋಜನೆ ಕೊಟ್ಟ ಕಾಂಗ್ರೇಸ್ ಈ ವಿಷಯದಲ್ಲಿ ಮೌನ ತಾಳಿದೆ.

ಇನ್ನಾದರೂ ಕಾಂಗ್ರೇಸ್‍ ಮೈಕೊಡವಿ ಎಚ್ಚೆತ್ತುಕೊಂಡು ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟದ ಪರವಾಗಿ ಹೋರಾಡಿ ಸೂಕ್ತ ಪರಿಹಾರ ತೆಗೆಸಿಕೊಡುತ್ತದಾ ಕಾದು ನೋಡಬೇಕಾಗಿದೆ.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: