India Chaina Faceoff ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಡಿ 9 ರಂದು ಚೀನಾದೊಂದಿಗಿನ ಇತ್ತೀಚಿನ ಘರ್ಷಣೆಯಲ್ಲಿ ಯಾವುದೇ ಭಾರತೀಯ ಸೈನಿಕನಿಗೆ ತೀವ್ರ ಗಾಯವಾಗಿಲ್ಲ ಅಥವಾ ಹುತಾತ್ಮರಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಭಾರತ ಮತ್ತು ಚೀನಾ ಸೈನಿಕರ ನಡುವೆ ತವಾಂಗ್ ನ ಯಾಂಗ್ಟ್ಸೆ ಪ್ರದೇಶದಲ್ಲಿ ನಡೆದ ಘರ್ಷಣೆಯ ಕುರಿತು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅವರ ಮಂಗಳವಾರ ಪ್ರತ್ಯೇಕ ಹೇಳಿಕೆ ನೀಡಿದರು
ಇಂದು ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆ ಅರುಣಾಚಲ ಪ್ರದೇಶದಲ್ಲಿ ನಡೆದ ಭಾರತ-ಚೀನಾ ಸೈನಿಕರ ಘರ್ಷಣೆ ವಿಚಾರದ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿದವು. ಈ ವೇಳೆ ತೀವ್ರ ಗದ್ದಲ ಉಂಟಾಗಿತ್ತು.ಲೋಕಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆಯೇ ಮಾತನಾಡಿದ ರಾಜನಾಥ್ ಸಿಂಗ್, ನಮ್ಮ ಗಡಿಯೊಳಗೆ ಚೀನೀ ಸೈನಿಕರ ಉಲ್ಲಂಘನೆಯ ಪ್ರಯತ್ನವನ್ನು ನಿಲ್ಲಿಸಲು ನಮ್ಮ ಸಶಸ್ತ್ರ ಪಡೆಗಳು ಯಾವಾಗಲೂ ಸಿದ್ಧವಾಗಿವೆ ಎಂದು ತಿಳಿಸಿದರು.
ನಮ್ಮ ಸಶಸ್ತ್ರ ಪಡೆಗಳು ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ, ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯ, ಶೌರ್ಯ ಮತ್ತು ಬದ್ಧತೆಯನ್ನು ದೇಶದ ನಾಗರಿಕರು ಮತ್ತು ಸರ್ಕಾರ ಗೌರವಿಸುತ್ತದೆ ಎಂಬ ವಿಶ್ವಾಸವಿದೆ ಎಂದರು
ಡಿಸೆಂಬರ್ 9 ರಂದು, ಚೀನಾದ ಗಡಿ ವಾಸ್ತವ ರೇಖೆಯಲ್ಲಿ ಚೀನಾದ ಸೇನಾಪಡೆ ಯೋಧರು ಯಾಂಗ್ಟ್ಸೆ, ತವಾಂಗ್ ಸೆಕ್ಟರ್ನಲ್ಲಿ ಆಕ್ರಮಣ ಮಾಡಿಕೊಂಡು ಒಳನುಸುಳಿದರು. ಅಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿತು. ಈ ಮುಖಾಮುಖಿ ಘರ್ಷಣೆಯಲ್ಲಿ ಎರಡೂ ಕಡೆಯ ಕೆಲವು ಸೈನಿಕರು ಗಾಯಗೊಂಡರು. ನಮ್ಮ ಸೈನಿಕರಲ್ಲಿ ಯಾರೂ ಹುತಾತ್ಮರಾಗಿಲ್ಲ ಮತ್ತು ಗಂಭೀರ ಗಾಯವನ್ನು ಅನುಭವಿಸಿಲ್ಲ. ಭಾರತೀಯ ಸೇನಾ ಕಮಾಂಡರ್ಗಳ ಸಮಯೋಚಿತ ಮಧ್ಯಸ್ಥಿಕೆಯೊಂದಿಗೆ ಗಡಿ ವಾಸ್ತವ ರೇಖೆಯಿಂದ ಸದ್ಯ ಸೈನಿಕರು ಹಿಂದಕ್ಕೆ ಹೋಗಿದ್ದಾರೆ, ಘರ್ಷಣೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದರು.
ಈ ವಿಷಯವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದೊಂದಿಗೆ ಚರ್ಚಿಸಲಾಗುವುದು. ನಮ್ಮ ಸೇನಾಪಡೆ ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಸಂಪೂರ್ಣವಾಗಿ ಬದ್ಧವಾಗಿವೆ. ಚೀನಾ ವಿರುದ್ಧ ಯಾವುದೇ ಪ್ರಯತ್ನವನ್ನು ತಡೆಯಲು ಯಾವಾಗಲೂ ಸಿದ್ಧವಾಗಿದೆ ಎಂದರು.
ಸದನದಿಂದ ಹೊರನಡೆದ ವಿರೋಧ ಪಕ್ಷ ಸದಸ್ಯರು:
ತವಾಂಗ್ ಘಟನೆಯ ಬಗ್ಗೆ ರಕ್ಷಣಾ ಸಚಿವರಿಂದ ವಿವರಣೆ ಕೇಳಲು, ವಿವಿಧ ವಿರೋಧ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಗದ್ದಲವನ್ನು ಸೃಷ್ಟಿಸಿದರು. ಅವರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. ಬಳಿಕ ಕಾಂಗ್ರೆಸ್, ಎನ್ಸಿಪಿ, ಡಿಎಂಕೆ ಮತ್ತು ಎಐಎಡಿಎಂಕೆ ಸದಸ್ಯರು ಸದನದಿಂದ ಹೊರನಡೆದರು.
ಇದಕ್ಕೂ ಮೊದಲು ಸಚಿವರು, ಘರ್ಷಣೆ ನಡೆದ ವಿಚಾರವಾಗಿ ಉನ್ನತ ಮಟ್ಟದ ಸಭೆಗೆ ಕರೆ ನಡೆಸಿದ್ದರು. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ವಾಯುಪಡೆ ಮತ್ತು ನೌಕಾಪಡೆಯ ಹಿರಿಯ ಕಮಾಂಡರ್ಗಳು ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.
ಅರುಣಾಚಲ ಪ್ರದೇಶದಲ್ಲಿ ಡಿ 9 ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಈ ಗುಂಡಿನ ಚಕಮಕಿಯಲ್ಲಿ ಉಭಯ ದೇಶಗಳ ಸೈನಿಕರು ಗಾಯಗೊಂಡಿದ್ದರು.