ಉಡುಪಿ: ಮಾಜಿ ಬಜರಂಗದಳ ಮುಖಂಡ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (pramod muthalik) ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದದಿಂದ ಸ್ಪರ್ಧಿಸುವ ಘೋಷಣೆಯನ್ನು ಈಗಾಗಲೇ ಅಧಿಕೃತವಾಗಿ ಮಾಡಿದ್ದಾರೆ. ಈ ಮೂಲಕ ಅವರು ಮೂರು ಬಾರಿಯ ಶಾಸಕ ಹಾಗೂ ಹಾಲಿ ಸರಕಾರದ ಇಂಧನ ಸಚಿವ ಮತ್ತು ಬಜರಂಗ ದಳ ಸಂಘಟನೆಯಲ್ಲಿದ್ದಾಗ ತನ್ನ ಶಿಷ್ಯನಾಗಿದ್ದ ವಿ. ಸುನೀಲ್ ಕುಮಾರ್ ವಿರುದ್ದ ತೊಡೆ ತಟ್ಟಿದ್ದಾರೆ.
ಉಡುಪಿಯ ಕಾರ್ಕಳದಲ್ಲಿ ಇಂದು(ಡಿಸೆಂಬರ್ 13) ಮಾತನಾಡಿದ ಪ್ರಮೋದ್ ಮುತಾಲಿಕ್, ಸುನೀಲ್ ಕುಮಾರ್ ಹಿಂದುತ್ವ ಮತ್ತು ಪ್ರಮೋದ್ ಮುತಾಲಿಕ್ ಹಿಂದುತ್ವ ತಕ್ಕಡಿಯಲ್ಲಿಟ್ಟು ತೂಗೋಣ. ಯಾರು ಹಿಂದುತ್ವ ಸಲುವಾಗಿ ಇದ್ದಾರೆ ಎನ್ನುವುದನ್ನು ಜನರ ಮುಂದೆ ಇಡೋಣ. ನನ್ನನ್ನು ಬೆಳೆಸಿದ ಗುರುಗಳು ಬಂದಿದ್ದಾರೆ ಎಂದು ಕ್ಷೇತ್ರ ತ್ಯಾಗ ಮಾಡಿ ಬೇರೆ ಕಡೆ ಎಲ್ಲಾದರೂ ಚುನಾವಣೆಗೆ ಸ್ಪರ್ಧಿಸಿ ಎಂದು ಸುನಿಲ್ ಕುಮಾರ್ ಗೆ ಅವರು ಕರೆ ನೀಡಿದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಣೆ ಮಾಡಿರುವ ಅವರು ಈ ಮೂಲಕ ಸುನಿಲ್ ಕುಮಾರ್ ಗೆ(sunil kumar) ತಮ್ಮ ಕಾರ್ಕಳ ಕ್ಷೇತ್ರವನ್ನು(karkala Assembly constituency ) ತನಗೆ ಬಿಟ್ಟುಕೊಡುವಂತೆ ಆಗ್ರಹಿಸಿದ್ದಾರೆ.ನಿಮ್ಮಲ್ಲಿ ನಿಜವಾಗಿ ಹಿಂದುತ್ವ , ಆರ್ ಎಸ್ಎಸ್ ಇದ್ದರೆ ಕ್ಷೇತ್ರ ತ್ಯಾಗ ಮಾಡಿ ಎಂದರು.
ʻʻಹಿಂದುಗಳ ನೋವಿಗೆ ಧ್ವನಿಯಾಗಲು ಕಾರ್ಕಳಕ್ಕೆ ಬಂದಿದ್ದೇನೆ. ನನಗೆ ಹಣ, ಆಸ್ತಿ ಮಾಡುವ ಉದ್ದೇಶವಿಲ್ಲ, ಆದ್ದರಿಂದ ಬಾರಿ ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡಿ. . ನಾನು ಹಿಂದುತ್ವ ಏನೆಂದು ತೋರಿಸುತ್ತೇನೆ. ಐದು ವರ್ಷದ ನಂತರ ಮತ್ತೆ ನಿಮ್ಮನ್ನು ನಿಲ್ಲಿಸುತ್ತೇನೆ. ಯಾವ ದಾರಿಯಲ್ಲಿ ನಡೆಯಬೇಕೆಂದು ನಾನು ತೋರಿಸಿಕೊಡುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಅವರು ಸಚಿವ ಸುನಿಲ್ ಕುಮಾರ್ಗೆ ಮನವಿ ಮಾಡಿದರು.
“ಈಗ ನಡೆದದ್ದು ಮತ್ತು ಗಳಿಸಿದ್ದು ಸಾಕು. ತಾತ ಮುತ್ತಾತನಿಂದ ಮರಿ ಮೊಮ್ಮಗನ ತನಕ ಗಳಿಸಿದ್ದು ಸಾಕು. ತಲವಾರು ಹಿಡಿದುಕೊಂಡು ಬಂದವರ ಮುಂದೆ ಹೋರಾಟ ಮಾಡಿದವನು ನಾನು. ಭಯಾನಕವಾದ ತುರ್ತುಪರಿಸ್ಥಿತಿಯಲ್ಲಿ ಹೋರಾಟ ಮಾಡಿದ ಗಂಡುಗಲಿ ನಾನು. ಫೋನ್ ಮಾಡಿಸಿ ನನಗೆ ಭಯಪಡಿಸುವ ಚಿಲ್ಲರೆ ಕೆಲಸ ಮಾಡಬೇಡಿ. ಹಿಂದುತ್ವದ ವೇದಿಕೆಯಲ್ಲಿ ಇಬ್ಬರು ನಿಂತು ಚರ್ಚೆ ಮಾಡೋಣ, ಚರ್ಚೆಗೆ ಬರುವ ತಾಕತ್ತು ಇದೆಯಾ ಎಂದು ಸುನಿಲ್ ಕುಮಾರ್ ಗೆ ಸವಾಲು ಹಾಕಿದರು.
ಕಾರ್ಯಕರ್ತರನ್ನು ಹೆದರಿಸುತ್ತಾರೆ. ದುಡ್ಡು ಅಹಂಕಾರ ಸೊಕ್ಕು ದರ್ಪ ಬಿಟ್ಟುಬಿಡಿ. ಹತ್ತು ಪಟ್ಟು ಜನ ನನ್ನ ಜೊತೆ ಬರುತ್ತಾರೆ ಎಂದರು. ಈ ಮೂಲಕ ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರವನ್ನು ನನಗೆ ಬಿಟ್ಟುಕೊಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಮುತಾಲಿಕ್, ಸುನಿಲ್ ಕುಮಾರ್ ಗೆ ತಾಕೀತು ಮಾಡಿದ್ದಾರೆ.
ʻನಾನು ಕಾರ್ಕಳದಿಂದ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದಾಗಿನಿಂದ ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಹಿಂದುತ್ವಕ್ಕಾಗಿ ನಾನು ಸಾಕಷ್ಟು ಆರೋಪಗಳನ್ನು ಎದುರಿಸಿದ್ದೇನೆ, ಸಂಕಷ್ಟ ಅನುಭವಿಸಿದ್ದೇನೆ. ಮುಖಕ್ಕೆ ಮಸಿ ಬಳಿಸಿಕೊಂಡಿದ್ದೇನೆ, ಅದಕ್ಕೆಲ್ಲ ಚುನಾವಣೆಯಲ್ಲಿ ಉತ್ತರ ನೀಡುತ್ತೇನೆ. ಸಂಘವು ನನಗೆ ರಾಷ್ಟ್ರಪ್ರೇಮ, ಹಿಂದುತ್ವದ ರಕ್ಷಣೆಯ ಪಾಠವನ್ನು ಕಲಿಸಿದೆʼʼ ಎಂದು ಹೇಳಿದರು.
ಕಾರ್ಕಳದಿಂದಲೇ ಸ್ಪರ್ಧೆ : ಸುನಿಲ್ ಕುಮಾರ್
ಈ ನಡುವೆ, ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆಯ ಸುದ್ದಿ ಹರಡುತ್ತಿದ್ದಂತೆಯೇ ಸುನಿಲ್ ಕುಮಾರ್ ಅವರು ಕಾರ್ಕಳದಿಂದ ಸ್ಪರ್ಧೆ ಮಾಡುವುದಿಲ್ಲ, ಬೇರೆ ಕಡೆ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಗಳು ಹರಡುತ್ತಿದ್ದವು. ಈ ಬಗ್ಗೆ ಆಗಲೇ ಸ್ಪಷ್ಟೀಕರಣ ನೀಡಿರುವ ಸುನಿಲ್ ಕುಮಾರ್ ಯಾವ ಕಾರಣಕ್ಕೂ ಕಾರ್ಕಳ ಬಿಟ್ಟು ಬೇರೆ ಕಡೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.