ಬೆಳ್ತಂಗಡಿ: ವಕೀಲ ಕುಲದೀಪ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸಿ ಎಸ್.ಪಿ ಕಚೇರಿಗೆ ವರ್ಗಾವಣೆಯಾಗಿರುವ ಪೂಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಸುತೇಶ್ (SI Suthesh) , ಸಿಎಂ ಬೊಮ್ಮಾಯಿ ಬಂದು ಹೋದ ಬೆನ್ನಲ್ಲೇ ಸಸ್ಪೆಂಡ್ ಆದೇಶ ಹೊರಬಿದ್ದಿದೆ.
ಜಾಗದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಕುಲದೀಪ್ ಶೆಟ್ಟಿ ಅವರ ಮನೆಗೆ ನುಗ್ಗಿದ ಪೂಂಜಾಲಕಟ್ಟೆ ಪೊಲೀಸರು ಅವರ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ವಕೀಲರು ಜಿಲ್ಲೆಯಾಧ್ಯಂತ ಪ್ರತಿಭಟನೆ ನಡೆಸಿದ್ದರು.
ರಾತ್ರಿ ಕುಲದೀಪ್ ಶೆಟ್ಟಿ ಬಂಧಿಸಿ ಪೊಲೀಸ್ ಜೀಪಿನಲ್ಲಿ ಕರೆದುಕೊಂಡು ಹೋಗುವಾಗ ತಾಯಿ ತಡೆಯಲು ಯತ್ನಿಸಿದ್ದಾರೆ. ಆಗ ಜೀಪನ್ನು ಹಿಂದೆ ಮುಂದೆ ಚಲಾಯಿಸಿದ ವಿಡಿಯೋ ವೈರಲ್ ಆಗಿತ್ತು.
ನಂತರ ಸಬ್ ಇನ್ ಸ್ಪೆಕ್ಟರ್ ಅವರನ್ನು ಎಸ್.ಪಿ ಅವರ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು.
ವಕೀಲನ ಮೇಲೆ ಜಾಗದ ಗಲಾಟೆ ಹೊಂದಿರುವ ಕುಟುಂಬವೂ ಪತ್ರಿಕಾಗೋಷ್ಠಿ ಕರೆದು ಆರೋಪಿಸಿತು. ಈ ನಡುವೆ ಬಿಜೆಪಿ ನಾಯಕರು ಎಸ್ಐ ಸುತೇಶ್ ಪರ ನಿಂತು ಹೋರಾಟಕ್ಕೆ ತಯಾರಿ ನಡೆಸುವಾಗಲೇ ಅಮಾನತು ಆದೇಶ ಹೊರಬಿದ್ದಿದೆ.
ಯುವ ವಕೀಲನ ಮೇಲೆ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಎಸ್ಐ ಅಮಾನತಿಗಾಗಿ ವಕೀಲರ ಸಂಘ ರಾಜ್ಯವ್ಯಾಪ್ತಿ ಪ್ರತಿಭಟನೆಗೆ ನಿರ್ಧರಿಸಿತು.