ಮಂಗಳೂರು: ಕಾಂತಾರಾ (Kanthara) ಚಿತ್ರದ ಅದ್ಭುತ ಯಶಸ್ಸಿನ ಬಳಿಕ ಕಾಂತಾರಾ ಚಿತ್ರ ತಂಡ ಮತ್ತೆ ಪಂಜುರ್ಲಿ ಮೊರೆ ಹೋಗಿದೆ. ನಿರ್ಮಾಪಕ ‘ಹೊಂಬಾಳೆ’ (Hombale) ವಿಜಯ್ ಕಿರಗಂದೂರು (Vijay Kiragandur), ನಟ ನಿರ್ದೇಶಕ ರಿಷಬ್ ಶೆಟ್ಟಿ(Rishabh Shetty) ಸೇರಿದಂತೆ ಇಡೀ ಚಿತ್ರರಂಗ ಮಂಗಳೂರಿನಲ್ಲಿ ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಹರಕೆ ಕೋಲ ನೀಡಿದೆ. ಈ ವೇಳೆ ಕಾಂತಾರಾ ತಂಡ ದೈವ ಅಣ್ಣಪ್ಪ ಪಂಜುರ್ಲಿ ಬಳಿ ಕಾಂತಾರಾ ಚಿತ್ರ ಭಾಗ ಎರಡಕ್ಕೆ (Kanthara-2) ಅನುಮತಿ ಯನ್ನು ದೈವದ ಬಳಿ ಕೇಳಿದ್ದು, ದೈವ ಹಲವು ಎಚ್ಚರಿಕೆ ನೀಡಿದೆ.
ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸೇವೆ ಸಲ್ಲಿಸುವ ಮಡಿವಾಳ ಸಮುದಾಯದ ಪ್ರಮುಖರ ಮನೆಯಲ್ಲಿ ನಡೆದ ಕಾಂತಾರ ಚಿತ್ರತಂಡದ ಹರಕೆ ಸೇವೆ ಅಣ್ಣಪ್ಪ ಪಂಜುರ್ಲಿ ಕೋಲ ನಡೆಯಿತು.
ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ದೈವದ ಬಳಿ ರಿಷಬ್ ಶೆಟ್ಟಿ ಕಾಂತಾರಾ ಭಾಗ ಎರಡು ಚಿತ್ರಕ್ಕೆ ಅನುಮತಿ ಕೇಳಿದರು.ಈ ವೇಳೆ ಕಾಂತಾರಾ ಚಿತ್ರತಂಡಕ್ಕೆ ಅಭಯ ನೀಡಿದ ಅಣ್ಣಪ್ಪ ಪಂಜುರ್ಲಿ ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ ಎನ್ನುವ ಎಚ್ಚರಿಕೆ ನೀಡಿದೆ.
ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ.ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ ಅಂತಾ ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರಾ ಚಿತ್ರತಂಡಕ್ಕೆ ಅಭಯ ನೀಡಿದೆ ಎನ್ನಲಾಗಿದೆ.
ಈ ವೇಳೆ ಕಾಂತಾರಾ ಚಿತ್ರತಂಡದ ಬಹುತೇಕ ಕಲಾವಿದರು ಭಾಗವಹಿಸಿದ್ದು, ಕಾಂತಾರಾ ಭಾಗ ಎರಡರಲ್ಲೂ ಅದೇ ಕಲಾವಿದರು ಮುಂದುವರಿಯುವ ಸಾಧ್ಯತೆಗಳಿವೆ. ಕಾಂತಾರಾದಲ್ಲಿ ನಟಿಸಿದ್ದ ಕಲಾವಿದರಿಗೆ ತಲೆಕೂದಲು ಬೆಳೆಸಿಕೊಳ್ಳಲು ರಿಷಬ್ ಸೂಚನೆ ನೀಡಿದ್ದಾರೆ ಅಂತಾ ಹೇಳಲಾಗಿದೆ. ಮುಂದಿನ ಮಳೆಗಾಲದ ಅವಧಿಯಲ್ಲಿ ಕಾಂತಾರಾ ಭಾಗ ಎರಡು ಚಿತ್ರದ ಚಿತ್ರೀಕರಣ ವಾಗುವ ಸಾಧ್ಯತೆಗಳಿವೆ.
ಹೊಂಬಾಳೆ ಪ್ರೊಡಕ್ಷನ್ ನ ವಿಜಯ್ ಕಿರಂಗದೂರು, ನಟ ರಿಷಬ್ ಶೆಟ್ಟಿ, ರಿಷಬ್ ಪತ್ನಿ ಪ್ರಗತಿ, ನಟಿ ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ದೀಪಕ್ ರೈ ಪಾಣಾಜೆ, ನವೀನ್ ಬೋಂದೆಲ್ ಸೇರಿದಂತೆ ರಿಷಬ್ ಕುಟುಂಬಸ್ಥರು, ಕಾಂತಾರಾ ಚಿತ್ರ ತಂಡದ ಕಲಾವಿದರು ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಭಾಗವಹಿಸಿದ್ದಾರೆ.
ಈ ಕೋಲದ ಚಿತ್ರೀಕರಣವನ್ನು ಸಂಪೂರ್ಣ ನಿಷೇಧ ಮಾಡಲಾಗಿತ್ತು. ಭಕ್ತಾದಿಗಳು ಮೊಬೈಲ್ ನಲ್ಲಿ ವಿಡಿಯೋ ಫೋಟೋ ತೆಗೆಯಬಾರದೆಂದು ಅಲ್ಲಲ್ಲಿ ಸೂಚನಾ ಫಲಕ ಹಾಕಲಾಗಿತ್ತು. ವಿಶೇಷ ಭದ್ರತೆ ವ್ಯವಸ್ಥೆ ಅಲ್ಲಿ ಕಂಡುಬಂತು.
ಕಾಂತಾರ ಸಿನಿಮಾ ಯಶಸ್ವಿ ಒಂದೆಡೆಯಾದರೆ ತುಳುನಾಡಿನ ಕಾರಣಿಕದ ದೈವಗಳ ಗುಡಿಗಳು, ಅಲ್ಲಲ್ಲಿ ವೇಷ ಹಾಕಿ ಕುಣಿದು ಧಾರ್ಮಿಕ ಭಾವನೆಗೆ ಧಕ್ಕೆ ತಂದ ಘಟನೆಗಳು ಹಲವು ನಡೆದಿವೆ. ದೈವನರ್ತಕರ ತಂಡ ಈಗಾಗಲೇ ಸಚಿವ ಸಂಸದರನ್ನು ಭೇಟಿಯಾಗಿ ದೈವವನ್ನು ಇನ್ನು ಮುಂದೆ ಚಿತ್ರ, ಸ್ಟೇಜ್ ಷೋ ಗಳಲ್ಲಿ ಪ್ರದರ್ಶನ ಮಾಡಬಾರದು ಎಂದು ಮನವಿ ಸಲ್ಲಿಸಿವೆ. ಇನ್ನು ‘ಕಾಂತಾರ-2’ ಸಿನಿಮಾಕ್ಕೆ ಯಾವಾ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತದಾ ಕಾದು ನೋಡಬೇಕಷ್ಟೆ.