ಪುತ್ತೂರು: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 8ನೇ ಶಾಖೆ ಡಿ.12 ರಂದು ಕಾಣಿಯೂರಿನ ರಾಶಿ ಕಾಂಪ್ಲೆಕ್ಸ್‍ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ತಿಳಿಸಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಡಿ.12 ರಂದು ಬೆಳಗ್ಗೆ 10 ಗಂಟೆಗೆ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಪರಮಪೂಜ್ಯ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡುವರು. ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ಮತ್ತು ಬಂದರು ಖಾತೆ ಸಚಿವ ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಪುತ್ತೂರು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಹೆಚ್.ಎನ್.ರಮೇಶ್, ರಾಶಿ ಕಾಂಪ್ಲೆಕ್ಸ್ ಮಾಲಕ ಚಂದ್ರಶೇಖರ ಗೌಡ ಪಾಲ್ಗೊಳ್ಳಲಿದ್ದಾರೆ. ಕಾಣಿಯೂರು ಗ್ರಾಪಂ ಅಧ್ಯಕ್ಷೆ ಲಲಿತಾ ದರ್ಖಾಸು, ಸವಣೂರು ಗ್ರಾಪಂ ಅಧ್ಯಕ್ಷೆ ರಾಜೀವಿ ವಿ. ಶೆಟ್ಟಿ, ಬೆಳಂದೂರು ಗ್ರಾಪಂ ಅಧ್ಯಕ್ಷ ಲೋಹಿತಾಶ್ವ, ಕಾಣಿಯೂರು ಗ್ರಾಪಂ ಅಧ್ಯಕ್ಷ ಗಣೇಶ್ ಉದನಡ್ಕ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
6800 ಸದಸ್ಯರು :
2002 ರಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿ ಆರಂಭಗೊಂಡ ಸಹಕಾರ ಸಂಘವು ಪ್ರಸ್ತುತ ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು ಹಾಗೂ ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ಸ್ವಂತ ಕಟ್ಟಡದಲ್ಲಿ ಶಾಖೆಗಳನ್ನು ಹೊಂದಿದ್ದು, ಸುಮಾರು 6800 ಕ್ಕಿಂತಲೂ ಮಿಕ್ಕಿ ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು.
ಕಳೆದ ಅವಧಿಯಲ್ಲಿ ಸಂಘ 291 ಕೋಟಿಗಿಂತಲೂ ಮಿಕ್ಕಿ ವ್ಯವಹಾರಗಳನ್ನು ಮಾಡಿದ್ದು, 3 ಕೋಟಿಗೂ ಮಿಕ್ಕಿ ಪಾಲು ಬಂಡವಾಳ ಹೊಂದಿದೆ. ಕಳೆದ ಅವಧಿಯಲ್ಲಿ ಸುಮಾರು 84 ಲಕ್ಷ ಲಾಭ ಪಡೆದಿದೆ. 60 ಕೋಟಿಕ್ಕಿಂತ ಮಿಕ್ಕಿ ಠೇವಣಿ ಹೊಂದಿದ್ದು, 53 ಕೋಟಿಗೂ ಮಿಕ್ಕಿ ಹೊರಬಾಕಿ ಸಾಲವಿದೆ. ಒಟ್ಟು ಏಳು ವಲಯಗಳನ್ನಾಗಿ ಮಾಡಲಾಗಿದ್ದು, ಪ್ರತೀ ವಲಯಗಳಲ್ಲಿ ಒಂದೊಂದು ಶಾಖೆ ತೆರೆಯುವ ಇರಾದೆಯಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಬೆಳ್ಳಾರೆಯಲ್ಲಿ ಶಾಖೆ ತೆರೆಯಲಾಗುವುದು ಎಂದು ಅವರು ತಿಳಿಸಿದರು. ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ನಿರ್ದೇಶಕ ರಾಮಕೃಷ್ಣ ಕರ್ಮಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಆಂತರಿಕ ಲೆಕ್ಕಪರಿಶೋಧಕ ಶ್ರೀಧರ ಗೌಡ ಕಣಜಾಲು ಉಪಸ್ಥಿತರಿದ್ದರು.