ಸುರತ್ಕಲ್: ಡಿ 7 : ವೈದ್ಯಕೀಯ ತಪಾಸಣೆಗೆ ತೆರಳಿದ ಮಹಿಳೆಯರು ಬಟ್ಟೆ ಬದಲಿಸುವ ದೃಶ್ಯಗಳನ್ನು ರಹಸ್ಯ ಸ್ಥಳದಲ್ಲಿ ಮೊಬೈಲ್ ಕ್ಯಾಮೆರಾ ಇರಿಸಿ ಸೆರೆಹಿಡಿಯುತ್ತಿದ್ದ ಆತಂಕಕಾರಿ ಘಟನೆಯೊಂದು ಮಂಗಳೂರಿನ ಹೊರ ವಲಯದ ಖಾಸಗಿ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ
ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಯುವತಿಯೊಬ್ಬರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.ಅಲ್ಲದೇ,ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ . ಪವನ್ ಕುಮಾರ್ (21) ಬಂಧಿತ. ಈತ ಆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಂಗ್ ವಿದ್ಯಾರ್ಥಿ.
ಆಸ್ಪತ್ರೆಗೆ ತಪಾಸಣೆಗೆ ಬಂದ ಮಹಿಳೆಯರು ಸ್ಕ್ಯಾನಿಂಗ್‌ಗೆ ಒಳಗಾಗುವ ಮುನ್ನ ಬಟ್ಟೆ ಬದಲಿಸಲು ಕೋಣೆಯೊಂದರಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಯುವತಿಯೊಬ್ಬರು ಬಟ್ಟೆ ಬದಲಾಯಿಸುವುದಕ್ಕೆ ಮುನ್ನ ಆಸುಪಾಸಿನ ಸ್ಥಳಗಳನ್ನು ಪರಿಶೀಲಿಸಿದ್ದರು. ಈ ವೇಳೆ ಗುಪ್ತ ಸ್ಥಳದಲ್ಲಿ ಮೊಬೈಲ್ ಇಟ್ಟಿದ್ದು ಪತ್ತೆಯಾಗಿತ್ತು. ಈ ವಿಚಾರವನ್ನು ಯುವತಿಯು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದರು.
ಈ ಬಗ್ಗೆ ಪರಿಶೀಲಿಸಿದಾಗ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಂಗ್ ವಿದ್ಯಾರ್ಥಿ ಪವನ್ ಈ ಕೃತ್ಯ ನಡೆಸಿದ್ದು ಗೊತ್ತಾಗಿದೆ. ಬಳಿಕ ಆಸ್ಪತ್ರೆಯವರೇ ಆತನ ವಿರುದ್ಧ ಸುರತ್ಕಲ್ ಠಾಣೆಗೆ ದೂರು ನೀಡಿದ್ದರು
ಬಂಧಿತ ಪವನ್ ಮೂಲತ: ಕಲಬುರಗಿ ನಿವಾಸಿಯಾಗಿದ್ದು ಪ್ರಸ್ತುತ ವಿದ್ಯಾಭ್ಯಾಸ ನಿಮಿತ್ತ ಬಜಪೆಯಲ್ಲಿ ವಾಸವಿದ್ದ. ಆತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.