ಬಂಟ್ವಾಳ: ಕಟೀಲು ಮೇಳದ ಚೌಕಿ ಸಹಾಯಕ ಯಕ್ಷಗಾನ ಮುಗಿದ ಬಳಿಕ ಪರಿಕರಗಳನ್ನು ಜೋಡಿಸುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಡಿ 5 ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಬಿ.ಸಿ. ರೋಡಿನ ಪಲ್ಲಮಜಲು ಎಂಬಲ್ಲಿ ನಡೆದಿದೆ.
ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಐದನೇ ಮೇಳದಲ್ಲಿ ಯಕ್ಷಗಾನ ಚೌಕಿ (ಗ್ರೀನ್ ರೂಮ್)ನಲ್ಲಿ ಸಹಾಯಕರಾಗಿದ್ದ ಅಚ್ಯುತ ನಾಯಕ್ (45) ಮೃತಪಟ್ಟವರು. ಅಚ್ಯುತ ನಾಯಕ್ ಅವರು ಮಣಿನಾಲ್ಕೂರು ಗ್ರಾಮದ ಕೊಡಂಗೆ ನಿವಾಸಿ.
ಯಕ್ಷಗಾನ ಮುಗಿದ ಬಳಿಕ ಕಲಾವಿದರ ಬಟ್ಟೆಗಳನ್ನು ತುಂಬಿಸಿ, ಪರಿಕರಗಳನ್ನು ಜೋಡಿಸಿ ಮನೆಗೆ ಹೊರಡಲು ಸಿದ್ದರಾಗುತ್ತಿದಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು , ಅಲ್ಲಿನ ವೈದಯರ ಸಲಹೆಯಂತೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು,ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕಟೀಲು ಮೇಳದ ಚೌಕಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ಅವರು ಈ. ಹಿಂದೆ ಸರಪಾಡಿ ಸೇರಿದಂತೆ ಹಲವೆಡೆ ಸಣ್ಣ ಹೋಟೆಲ್ ನಡೆಸುತ್ತಿದ್ದರು , ಜೊತೆಗೆ ಅಡುಗೆ ಕೆಲಸಕ್ಕೂ ಹೋಗುತ್ತಿದ್ದರು. ಕೆಲ ವರ್ಷಗಳ ಹಿಂದೆ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ಕೊರೊನಾ ಕಾಲದಲ್ಲಿ ಉಂಟಾದ ಅರ್ಥಿಕ ಸಂಕಷ್ಟದಿಂದ ಅರ್ಧದಲ್ಲೆ ನಿರ್ಮಾಣ ಹಂತದಲ್ಲಿ ಬಾಕಿಯಾಗಿದೆ.ಮೃತರು ಪತ್ನಿ ಅಂಗನವಾಡಿಗೆ ಹೋಗುವ ಮಗು ಸಹಿತ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.