ಸರಕಾರದ ನಿಯಮವನ್ನು ಉಲ್ಲಂಘಿಸಿ ಖಾಸಗಿ ಸಂಸ್ಥೆಯೊಂದು ವೋಟರ್ ಐಡಿ ಇಶ್ಯೂ (Voter ID Scam) ಮಾಡಿದೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಪರಿಶೀಲನೆಗೆ ಆಗಮಿಸಿದ ಪುತ್ತೂರು ಸಹಾಯಕ ಆಯುಕ್ತರು ಸಂಸ್ಥೆಗೆ ಬೀಗ ಜಡಿದ ಘಟನೆ ಪುತ್ತೂರು ನಗರದ ಕೋರ್ಟು ಮೈದಾನದಲ್ಲಿ ಡಿ 5 ರಂದು ರಾತ್ರಿ ನಡೆದಿದೆ.
ಪುತ್ತೂರಿನ ಕಿಲ್ಲೆ ಮೈದಾನದ ಸಮೀಪ , ಎಸ್ ಬಿ ಐ ಬ್ಯಾಂಕಿನ ಮುಂಭಾಗ ಕಾರ್ಯಚರಿಸುತ್ತಿರುವ ಮೇದಿನಿ ಜನಸೇವಾ ಕೇಂದ್ರ ಆರೋಪಕ್ಕೆ ತುತ್ತಾದ ಖಾಸಗಿ ಸಂಸ್ಥೆ.
ಯಾವುದೇ ಖಾಸಗಿ ಸಂಸ್ಥೆಗಳು ವೋಟರ್ ಐಡಿ ಕಾರ್ಡ್ ಗಳನ್ನು ಡೌನ್ ಲೋಡ್ ಯಾ ಮುದ್ರಿಸಿ ಕೊಡುವಂತಿಲ್ಲ ಎಂಬ ನಿಯಮಗಳಿದ್ದು, ಅದನ್ನು ಉಲ್ಲಂಘಿಸಿ ಮೇದಿನಿಯು ವೋಟರ್ ಐಡಿ ಕಾರ್ಡ್ ಮುದ್ರಿಸಿ ಕೊಟ್ಟಿರುವ ಬಗ್ಗೆ ಎಸಿಯವರಿಗೆ ದೂರುಗಳು ಬಂದಿದ್ದವು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕಾರ್ಯಚರಣೆ ನಡೆದಿದೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಮೇದಿನಿ ಸಂಸ್ಥೆಯೂ ವ್ಯಕ್ತಿಯೊಬ್ಬರಿಗೆ ವೋಟರ್ ಐಡಿ ಕಾರ್ಡ್ ಮುದ್ರಿಸಿ ಕೊಟ್ಟಿದ್ದು, ಅದನ್ನವರು ತಾಲೂಕು ಕಛೇರಿಗೆ ಯಾವುದೋ ಕಾರ್ಯ ನಿಮಿತ್ತ ಸಲ್ಲಿಸಿದ್ದರು. ಆ ವೇಳೆ ಅದು ಅನಧಿಕೃತ ಕಾರ್ಡ್ ಎಂದು ) ಕಂಡು ಬಂದ ಹಿನ್ನಲೆಯಲ್ಲಿ ಸಿಬಂದಿಗಳು ತಾಲೂಕು ಕಛೇರಿಯಲ್ಲಿರುವ ಚುನಾವಣಾ ಘಟಕಕ್ಕೆ ಪರಿಶೀಲನೆಗೆ ಕಳುಹಿಸಿದ್ದಾರೆ. ಅಲ್ಲಿ ಆ ವೋಟರ್ ಐಡಿ ಖಾಸಗಿ ಸಂಸ್ಥೆ ವಿತರಿಸಿರುವುದು ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಸಹಾಯಕ ಆಯಕ್ತ ಗಿರೀಶ್ ನಂದನ್ ಅವರು ಮೇದಿನಿ ಜನಸೇವಾ ಕೇಂದ್ರಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಈ ವೇಳೆ ಅಲ್ಲಿನ ಮಾಲಕಿ ಅ ವಿವಾದಿತ ವೋಟರ್ ಐಡಿಯನ್ನು ತಮ್ಮ ಸಂಸ್ಥೆಯಿಂದ ವಿತರಿಸಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ತನಿಖೆ ನಡೆಸುವ ಉದ್ದೇಶದಿಂದ ಮೇದಿನಿ ಜನಸೇವಾ ಕೇಂದ್ರಕ್ಕೆ ಸಹಾಯಕ ಆಯುಕ್ತರು ಬೀಗ ಜಡಿದಿದ್ದಾರೆ.
ಖಾಸಗಿ ಕೇಂದ್ರಗಳಿಗೆ ಮತದಾರರ ಗುರುತಿನ ಚೀಟಿ ವಿತರಿಸುವ ಯಾ ಡೌನ್ ಲೋಡ್ ಮಾಡಿ ಮುದ್ರಿಸುವ ಅಧಿಕಾರವನ್ನು ಸರಕಾರ ಕೊಟ್ಟಿಲ್ಲ. ಆದರೂ ಈ ಕೇಂದ್ರದಲ್ಲಿ ಕಾರ್ಡ್ ವಿತರಿಸಿರುವದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಕೇಂದ್ರಕ್ಕೆ ಬೀಗ ಹಾಕಿದ್ದೇವೆ ಎಂದು ಸಹಾಯಕ ಆಯುಕ್ತರು ತಿಳಿಸಿದ್ದಾರೆ.

ವೋಟರ್ ಐಡಿ ಕಾರ್ಡ್ ಕಳೆದುಕೊಂಡಿರುವುದಾಗಿ ಗ್ರಾಹಕರೊಬ್ಬರು ಬಂದಿದ್ದು , ವೆಬ್ ಸೈಟ್ ಲಾಗಿನ್ ಆಗಿ ಡೌನ್ ಲೋಡ್ ಮಾಡಿ ಎಪಿಕ್ ಕಾರ್ಡ್ ಅನ್ನು ಸಂಸ್ಥೆಯಿಂದ ಮುದ್ರಿಸಿ ಕೊಡಲಾಗಿದೆ. ಅದರಲ್ಲಿರುವ ಸರಕಾರಿ ಅಧಿಕಾರಿಗಳ, ಚುನಾವಣಾ ಆಯೋಗದ ಅಧಿಕಾರಿಗಳ ಸಹಿ ಫೋರ್ಜರಿ ಮಾಡಲು ನಮಗೆ ಸಾಧ್ಯವೇ..?? ನಾವು ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿಲ್ಲ. ಹಾಗೂ ಕಾರ್ಡ್ ಗೆ ನಾವು ಕೇವಲ ರೂ. 70 ಮಾತ್ರ ಚಾರ್ಜ್ ಮಾಡಿರುವುದಾಗಿ ಜನಸೇವಾ ಕೇಂದ್ರದ ಮಾಲಕಿ ನೆರೆದಿದ್ದ ಸಾರ್ವಜನಿಕರಲ್ಲಿ ಸ್ಪಷ್ಟನೆ ನೀಡಿರುವುದಾಗಿ ತಿಳಿದು ಬಂದಿದೆ.
ಇಲ್ಲಿಯವರೆಗೆ ಕೇವಲ ಒಂದು ವೋಟರ್ ಐಡಿ ಕಾರ್ಡಿನ ಬಗ್ಗೆಯಷ್ಟೆ ದೂರುಗಳು ಬಂದಿವೆ ಎನ್ನಲಾಗಿದೆ.