ಕೊರೊನಾ ಕಾಲದಲ್ಲಿ ನಿಯಮಗಳನ್ನು ಪಾಲಿಸಿಕೊಂಡು ತೆರೆದಿದ್ದ ಸಂದರ್ಭ ಬಡವರ ಹಸಿದ ಹೊಟ್ಟೆಗಳನ್ನು ತಣಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ (Indira Canteen) ನೌಕರರ ವೇತನ ಸಮಸ್ಯೆ ಇನ್ನೂ ಕಗ್ಗಂಟಾಗಿಯೇ ಇದೆ. ಮೂರು ದಿನ ಕ್ಯಾಂಟೀನ್ ಬಂದ್ ಮಾಡಿ ಪ್ರತಿಭಟಿಸಿದ ಕಾರಣ ಒಂದು ತಿಂಗಳ ವೇತನವನ್ನೇನೋ ಪಾವತಿಸಿದ್ದಾರೆ. ಆದರೆ ಐದು ತಿಂಗಳ ಪಾವತಿ ಇನ್ನೂ ಬಾಕಿ ಇದೆ.
ಪುತ್ತೂರು ಮಿನಿ ವಿಧಾನಸೌಧ ಹಾಗೂ ಬಿ.ಸಿ.ರೋಡ್‌ನ ಮಿನಿ ವಿಧಾನಸೌಧದ ಪಕ್ಕದಲ್ಲೇ ಕ್ಯಾಂಟೀನ್ ಆರಂಭಗೊಂಡ ಸಂದರ್ಭ ಇಲ್ಲಿ ಸೇರಿದ್ದ ನೌಕರರಿಗೆ ಆರಂಭದಿಂದಲೇ ಸರಿಯಾಗಿ ತಿಂಗಳ ಮೊದಲ ವಾರ ವೇತನ ದೊರಕುತ್ತಿರಲಿಲ್ಲ. ಒಂದು ಬಾರಿ ಪ್ರತಿಭಟನೆ ನಡೆಸಿ ಸುದ್ದಿಯಾದ ವೇಳೆ ಗುತ್ತಿಗೆ ವಹಿಸಿಕೊಂಡ ಏಜೆನ್ಸಿಯವರು ಪಾವತಿ ಮಾಡಿದ್ದು ಬಿಟ್ಟರೆ, ಮತ್ತೆ ಅದೇ ಸಮಸ್ಯೆ.
ಮನೆ ಮಂದಿಗೆ ಅಕ್ಕಿ, ಬೇಳೆ ಕೊಂಡು ಹೋಗಲೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದರೆ, ಏಜೆನ್ಸಿಯವರನ್ನು ಕೇಳಿದಾಗ ನೀವು ಡಿ.ಸಿ.ಗೆ ದೂರು ನೀಡಿ ಎಂದು ಉತ್ತರ ನೀಡಿದ್ದಾಗಿ ತಿಳಿಸಿದ್ದಾರೆ. ಹೀಗಾಗಿ ಕ್ಯಾಂಟೀನ್ ನೌಕರರು ಕಂಗಾಲಾಗಿದ್ದಾರೆ.
”ಕೊರೊನಾ ಬಂದಾಗಲೂ ನಾವು ಕ್ಯಾಂಟೀನ್ ತೆರೆದಿದ್ದು, ಸೇವೆ ನೀಡಿದ್ದೆವು. ಕ್ಯಾಂಟೀನ್ ಆರಂಭದ ದಿನದಿಂದ ಇದುವರೆಗೂ ಸರಿಯಾದ ವೇತನ ದೊರಕುತ್ತಿಲ್ಲ. ಅದರಲ್ಲೂ ನಮಗೆ ಆರು ತಿಂಗಳಿಂದ ಸರಿಯಾದ ವೇತನವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ನ.30ರಿಂದ ಮೂರು ದಿನ ನಾವು ಕ್ಯಾಂಟೀನ್ ಬಂದ್ ಮಾಡಿದ್ದೆವು. ಇದೀಗ ಒಂದು ತಿಂಗಳ ಸಂಬಳವನ್ನು ಹಾಕಿದ್ದು, ಇನ್ನು ಐದು ತಿಂಗಳ ವೇತನ ಬಾಕಿ ಇದೆ. ಆದಾಗ್ಯೂ ನಮ್ಮ ಹಾಗಿರುವ ಬಡ ಜನರಿಗೋಸ್ಕರ ನಾವು ಕ್ಯಾಂಟೀನ್ ತೆರೆದಿದ್ದೇವೆ”ಹೀಗೆಂದವರು ಬಿ.ಸಿ.ರೋಡ್ ಆಡಳಿತ ಸೌಧದ ಪಕ್ಕದಲ್ಲೇ ಕಳೆದ ನಾಲ್ಕು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಇಂದಿರಾ ಕ್ಯಾಂಟೀನ್ ನೌಕರ ಆನಂದ ಪೂಜಾರಿ.
ಪುತ್ತೂರು , ಬಿ.ಸಿ. ರೋಡ್‌ನಲ್ಲಿರುವ ಕ್ಯಾಂಟೀನ್ ನೌಕರರಷ್ಟೇ ಅಲ್ಲ, ಹಲವೆಡೆ ಇಂದಿರಾ ಕ್ಯಾಂಟೀನ್ ನೌಕರರಿಗೆ ಸರಿಯಾದ ವೇತನ ಬಂದಿಲ್ಲ. ಮೊನ್ನೆ ಪ್ರತಿಭಟನಾರ್ಥವಾಗಿ ಬಂದ್ ಮಾಡಿದ ಕಾರಣ ಇದರ ಗುತ್ತಿಗೆ ನಿರ್ವಹಿಸುವವರು ಒಂದು ತಿಂಗಳ ವೇತನ ನೀಡಿ ನೀವು ಬಂದ್ ಮಾಡಬೇಡಿ, ಎಂದಿದ್ದಾರೆ. ಆದರೆ ಐದು ತಿಂಗಳ ವೇತನ ಒಮ್ಮೆಗೇ ಸಿಗುವುದು ಡೌಟು ಎಂಬ ಅನುಮಾನ ಅವರಿಗೂ ಇದೆ.

ಇಲ್ಲಿಗೆ 10 ರೂ.ಗೆ ಊಟ, 5 ರೂ.ಗೆ ತಿಂಡಿ ಸೇವಿಸಲು ಬರುವವರು ಬಡವರು. ಹೀಗಾಗಿ ಅವರಿಗೆ ತೊಂದರೆ ಆಗಬಾರದು ಎಂಬ ಕಳಕಳಿಯೂ ನಮಗಿದೆ ಎನ್ನುತ್ತಾರೆ ಇಲ್ಲಿನ ನೌಕರರು.
ಪುತ್ತೂರು, ಬಂಟ್ವಾಳದಲ್ಲಿ ಎಷ್ಟು ಹಸಿದ ಹೊಟ್ಟೆಗಳಿಗೆ ನೆರವಾಗುತ್ತಿದೆ ಗೊತ್ತೇ..? : ಪುತ್ತೂರಿನಲ್ಲಿ 150 ವಿದ್ಯಾರ್ಥಿಗಳು ಸೇರಿ 400 ಜನರಷ್ಟು ಪ್ರತಿದಿನ ಊಟ ಮತ್ತು ತಿಂಡಿ ಸೇವಿಸುತ್ತಾರೆ. ಮೂವರು ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ಬಂಟ್ವಾಳ ಇಂದಿರಾ ಕ್ಯಾಂಟೀನ್ ಗೆ ಪ್ರತಿದಿನ 300ರಷ್ಟು ಮಂದಿ ಆಗಮಿಸಿ ಊಟ, 350 ಮಂದಿ ತಿಂಡಿ ಸೇವಿಸುತ್ತಾರೆ. ನಾಲ್ವರು ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಒಳಗೆ ಅಡುಗೆ ಮನೆಯಲ್ಲಿ ಕೆಲವೊಮ್ಮೆ ವಿದ್ಯುತ್ ಶಾಕ್ ಕೂಡ ಬರುತ್ತಿದ್ದ ವೇಳೆ ನಾವು ಕೆಲಸ ಮಾಡಿದ್ದೇವೆ ಎಂದು ಇಲ್ಲಿನ ನೌಕರರು ಅಳಲು ತೋಡಿಕೊಂಡರು.
ಹೋಟೆಲ್‌ನವರ ಮಾನವೀಯತೆ: ಪುತ್ತೂರು ಇಂದಿರಾ ಕ್ಯಾಂಟೀನ್ ನಲ್ಲಿ ಮಧ್ಯಾಹ್ನದ ಊಟ ಮಾಡಿ ಹಸಿವು ನೀಗಿಸಿಕೊಳ್ಳುತ್ತಿದ್ದ ಕೆಲವು ವಿದ್ಯಾರ್ಥಿಗಳು ಬುಧವಾರ ಇಂದಿರಾ ಕ್ಯಾಂಟೀನ್‌ಗೆ ಊಟಕ್ಕೆ ಬಂದು ಹಿಂತಿರುಗಬೇಕಾಯಿತು. ಈ ನಡುವೆ ಇಂದಿರಾ ಕ್ಯಾಂಟೀನ್‌ಗೆ ಊಟಕ್ಕೆಂದು ಬಂದ ಕೆಲವು ವಿದ್ಯಾರ್ಥಿಗಳಿಗೆ ಪಕ್ಕದ ಶಿವಪ್ರಸಾದ್ ಹೋಟೆಲ್‌ನವರು 20 ರೂ. ರಿಯಾಯಿತಿ ದರದಲ್ಲಿ ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ.